ಭೂಗತ ಪಾತಕಿ ಹೇಮಂತ ಪೂಜಾರಿ ಬಂಧನ?

ಭೂಗತ ಪಾತಕಿ ಹೇಮಂತ ಪೂಜಾರಿ.
ಭೂಗತ ಪಾತಕಿ ಹೇಮಂತ ಪೂಜಾರಿ.
Published on: 

* ಮಲೇಷ್ಯಾದಲ್ಲಿ ಮುಂಬೈ ಪೊಲೀಸರಿಂದ ವಶ ವದಂತಿ

* ಅಧಿಕೃತ ಮಾಹಿತಿ ಇಲ್ಲವೆಂದ ಉಡುಪಿ ಎಸ್ಪಿ

ಉಡುಪಿ: ಜಿಲ್ಲೆಯ ಉದ್ಯಮಿಗಳಿಗೆ ಅಂತಾರಾಷ್ಟ್ರೀಯ ದೂರವಾಣಿ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟು, ಹಣ ನೀಡದಿದ್ದರೆ ಗುಂಡಿಕ್ಕಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಭೂಗತ ಪಾತಕಿ ಹೇಮಂತ ಪೂಜಾರಿ ಹಾಗೂ ಆತನ ಸಹಚರ ಎನ್ನಲಾದ ಕಲಿ ಯೋಗೇಶನನ್ನು ಮುಂಬಯಿ ಪೊಲೀಸರು ರಾ ಮತ್ತು ಇಂಟರ್​ ಪೋಲ್​ ತಂಡದ ಮೂಲಕ ಮಲೇಷ್ಯಾದಲ್ಲಿ ಬಂಧಿಸಿದ್ದಾರೆ ಎಂಬ ವದಂತಿ ಹಬ್ಬಿದೆ.

ಹೇಮಂತ ಪೂಜಾರಿ ಅಲಿಯಾಸ್​ 'ಎಚ್​ಪಿ' ಉಡುಪಿ ಜಿಲ್ಲೆಯ ಮೂಲದವನಾಗಿದ್ದು, ಮುಂಬಯಿಯಲ್ಲಿ ಅಪರಾಧ ಚಟುವಟಿಕೆ ಮೂಲಕ 'ನಟೋರಿಯಸ್​ ಕ್ರಿಮಿನಲ್​' ಎಂಬ ಕುಖ್ಯಾತಿಯನ್ನೂ ಪಡೆದಿದ್ದಾನೆ. ಹಲವು ವರ್ಷದ ಹಿಂದೆಯೇ ಮುಂಬಯಿಯಿಂದ ವಿದೇಶಕ್ಕೆ ಹಾರಿದ್ದು, ಅಲ್ಲಿಂದಲೇ ತನ್ನ ಚಟುವಟಿಕೆ ಮುಂದುವರಿಸಿದ್ದಾನೆ ಎನ್ನಲಾಗಿತ್ತು.

ಉಡುಪಿ, ಕುಂದಾಪುರ ಭಾಗದ 17ಕ್ಕೂ ಅಧಿಕ ಬಿಲ್ಡರ್​ಗಳು, ಹೋಟೆಲ್​ ಉದ್ಯಮಿಗಳು, ಸಿವಿಲ್​ ಗುತ್ತಿಗೆದಾರರು, ರಾಜಕಾರಣಿಗಳು ಹಾಗೂ ದೊಡ್ಡ ದೊಡ್ಡ ಕಂಪನಿಗಳ ಮುಖ್ಯಸ್ಥರಿಗೆ ಅಂತಾರಾಷ್ಟ್ರೀಯ ಕರೆ ಮಾಡಿ ಹಣಕ್ಕಾಗಿ ಒತ್ತಾಯಿಸುತ್ತಿದ್ದನು. ಹಣ ಕೊಡದಿದ್ದರೆ ಗುಂಡಿಕ್ಕಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕುವ ಕುರಿತು ಠಾಣೆಗಳಿಗೆ ಕೆಲವರು ದೂರು ನೀಡಿರುವ ಮಾಹಿತಿಯೂ ಇದೆ.

ಕಳೆದ ಸೆಪ್ಟೆಂಬರ್​ನಲ್ಲಿ ಮುದರಂಗಡಿಯ ಉದ್ಯಮಿ ಡೇವಿಡ್​ ಡಿಸೋಜ ಅವರ ತಲೆಗೆ ಗುಂಡಿಕ್ಕಿ ಹೇಮಂತ ಪೂಜಾರಿಯ ಸಹಚರರು ಹತ್ಯೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಒಟ್ಟು 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಹೇಮಂತ್​ ಪೂಜಾರಿಯನ್ನೂ ಆರೋಪಿಯನ್ನಾಗಿಸಿ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೆಸಿಒಸಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಳೆದ ಅಕ್ಟೋಬರ್​ನಲ್ಲಿ ಹೇಮಂತ ಪೂಜಾರಿ ವಿರುದ್ಧ ಶಿರ್ವ, ಪಡುಬಿದ್ರಿ, ಕಾಪು ಹಾಗೂ ಮಣಿಪಾಲ ಪೊಲೀಸ್​ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು ಎಂಟು ಪ್ರಕರಣ ದಾಖಲಾಗಿವೆ. ಆತನಿಗೆ ಸ್ಥಳೀಯ ಉದ್ಯಮಿಗಳ ಮಾಹಿತಿ ಹಾಗೂ ಮೊಬೈಲ್​ ಸಂಖ್ಯೆ ನೀಡುತ್ತಿದ್ದ ಆರೋಪದಡಿ ಪೊಲೀಸರು ಇಬ್ಬರನ್ನು ಬಂಧಿಸಿದ್ದರು.

2013ರಲ್ಲೇ ಹೇಮಂತ ಪೂಜಾರಿ ಸತ್ತಿದ್ದಾನೆ ಎನ್ನಲಾಗಿದ್ದು ಇತ್ತೀಚೆಗೆ 'ಎಚ್​ಪಿ' ಹೆಸರಿನಲ್ಲಿ ಅಪರಾಧಿಕ ಕಾರ್ಯ ನಡೆಸುತ್ತಿರುವುದಾಗಿಯೂ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಆತನ ಬಂಧನ ಆಗಿರುವ ವಿಚಾರದಲ್ಲಿಯೂ ಸಹ ಇನ್ನೂ ಯಾವುದೇ ಸ್ಪಷ್ಟನೆ ಇಲ್ಲದಾಗಿದೆ.

ಮಲೇಷ್ಯಾದಲ್ಲಿ ಉಡುಪಿ ಮೂಲದ ಭೂಗತ ಪಾತಕಿ ಹೇಮಂತ ಪೂಜಾರಿಯ ಬಂಧನ ಆಗಿರುವ ಕುರಿತು ಈವರೆಗೂ ನಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಮುಂಬಯಿ ಪೊಲೀಸರೂ ಸಹ ಆತನನ್ನು ವಶಕ್ಕೆ ಪಡೆದಿರುವ ಕುರಿತು ಖಚಿತ ಮಾಹಿತಿ ನಮಗೆ ಲಭಿಸಿಲ್ಲ.
ಹರಿರಾಮ ಶಂಕರ. ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠ.