ಬಿ.ಸಿ.ರೋಡಿನಲ್ಲಿ ಅನಧಿಕೃತ ಬಸ್ ಶೆಲ್ಟರ್

 ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಬದಿ ಗೇಲ್ ಕಂಪನಿ ಗ್ಯಾಸ್ ಪೈಪ್ ಲೈನ್ ಕಾಮಗಾರಿಗೆ ಸಂಬಂಧಿಸಿದಂತೆ ಕೊರೆದಿರುವ ಅಪಾಯಕಾರಿ ಹೊಂಡ.
ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಬದಿ ಗೇಲ್ ಕಂಪನಿ ಗ್ಯಾಸ್ ಪೈಪ್ ಲೈನ್ ಕಾಮಗಾರಿಗೆ ಸಂಬಂಧಿಸಿದಂತೆ ಕೊರೆದಿರುವ ಅಪಾಯಕಾರಿ ಹೊಂಡ.
Published on
ಸಂದೀಪ್ ಸಾಲ್ಯಾನ್ ಬಂಟ್ವಾಳ
ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಅವೈಜ್ಞಾನಿಕ ಮೇಲ್ಸೇತುವೆ ಒಂದೆಡೆಯಾದರೆ, ಕಿರಿದಾದ ಸರ್ವೀಸ್ ರಸ್ತೆಯಿಂದ ಉಂಟಾಗಿರುವ ವಾಹನ ನಿಲುಗಡೆ ಸಮಸ್ಯೆಗೆ ಹಲವು ವರ್ಷಗಳಿಂದ ಇನ್ನೂ ಮುಕ್ತಿ ಸಿಕ್ಕಿಲ್ಲ. ಈ ನಡುವೆ ಬಿ.ಸಿ.ರೋಡು ಸರ್ವೀಸ್ ಬಸ್ ನಿಲ್ದಾಣ ಸಮೀಪದ ಶ್ರೀನಿವಾಸ್ ಆರ್ಕೇಡ್ ಎದುರು ಐದಾರು ವರ್ಷಗಳ ಹಿಂದೆ ಕೇವಲ ಜಾಹಿರಾತು ಅಳವಡಿಸಲು ರಾತ್ರೋರಾತ್ರಿ ನಿರ್ಮಾಣಗೊಂಡ ಅನಧಿಕೃತ ಬಸ್ ಶೆಲ್ಟರ್ ಮತ್ತು ರಿಕ್ಷಾ ಪಾರ್ಕಿಂಗ್ ಹಲವಾರು ತೊಂದರೆಗಳಿಗೆ ಕಾರಣವಾಗಿದೆ.
ಈ ನಡುವೆ ಸರ್ವೀಸ್ ಬಸ್ ನಿಲ್ದಾಣದಿಂದ ಹೊರಡುವ ಪಾಣೆಮಂಗಳೂರು, ಮೂಡುಬಿದಿರೆ, ಮೆಲ್ಕಾರ್, ಮುಡಿಪು, ಸಾಲೆತ್ತೂರು ಕಡೆಗೆ ಸಂಚರಿಸುವ ಖಾಸಗಿ ಬಸ್ ಬಂದು ಮತ್ತೆ ಇಲ್ಲೇ ಕೆಲ ಹೊತ್ತು ಠಿಕಾಣಿ ಹೂಡುತ್ತಿದ್ದು, ಮೆಡಿಕಲ್, ಕ್ಲಿನಿಕ್, ಎಲ್‌ಐಸಿ ಕಚೇರಿ ಮತ್ತಿತರ ಮಳಿಗೆಗೆ ತೆರಳುವ ಗ್ರಾಹಕರು ಮತ್ತು ಅನಾರೋಗ್ಯ ಪೀಡಿತರು ವಾಹನದಲ್ಲಿ ಬರಲು ಹರಸಾಹಸ ಪಡುವಂತಾಗಿದೆ. ಈಗಾಗಲೇ ಅನಧಿಕೃತ ಬಸ್ ಶೆಲ್ಟರ್ ಮತ್ತು ರಿಕ್ಷಾ ನಿಲುಗಡೆಯಿಂದಾಗಿ ಹಲವಾರು ಅಪಘಾತಗಳಿಗೂ ಕಾರಣವಾಗಿದೆ.
ಕಳೆದ ವರ್ಷ ಪುರಸಭೆ ಸಾಮಾನ್ಯ ಸಭೆಯಲ್ಲಿ ಅನಧಿಕೃತ ಬಸ್ ಶೆಲ್ಟರ್ ತೆರವುಗೊಳಿಸುವಂತೆ ನಿರ್ಣಯ ಕೈಗೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ. ಇಲ್ಲಿನ ಬಸ್ ನಿಲ್ದಾಣ ಮತ್ತು ಸರ್ವೀಸ್ ರಸ್ತೆ ಬದಿ ಅನಧಿಕೃತ ಫ್ಲೆಕ್ಸ್ ಹಾವಳಿಯೂ ವಿಜ್ರಂಭಿಸುತ್ತಿದೆ.
ಬಿ.ಸಿ.ರೋಡು ಸರ್ವೀಸ್ ರಸ್ತೆ ಬದಿ ಅಲ್ಲಲ್ಲಿ ಹೊಂಡ ಕೊರೆದು ಕೆಲವೆಡೆ ಎತ್ತರಕ್ಕೆ ಮಣ್ಣು ತುಂಬಿಸಿದ ಪರಿಣಾಮ ಪಾದಚಾರಿಗಳು ಕುಸಿದು ಬೀಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬಸ್ ನಿಲ್ದಾಣದಿಂದ ಹೊರಟ ಖಾಸಗಿ ಬಸ್ ಮತ್ತೆ ಶ್ರೀನಿವಾಸ್ ಆರ್ಕೇಡ್ ವಾಣಿಜ್ಯ ಸಂಕೀರ್ಣ ಎದುರು ನಿಂತು ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಅಡ್ಡಿಪಡಿಸಲು ಅವಕಾಶ ನೀಡುವುದಿಲ್ಲ ಎಂದು ಸಂಚಾರಿ ಠಾಣೆ ಎಸ್‌ಐ ಆದರ್ಶ್ ಎಚ್ಚರಿಸಿದ್ದಾರೆ.

ಹೆದ್ದಾರಿ ಪಕ್ಕ ಹೊಂಡ

ಶ್ರೀನಿವಾಸ್ ಆರ್ಕೇಡ್ ವಾಣಿಜ್ಯ ಸಂಕೀರ್ಣ ಎದುರು ಹೆದ್ದಾರಿ ಬದಿ ಒಂದು ತಿಂಗಳ ಹಿಂದೆ ಗೇಲ್ ಕಂಪನಿಗೆ ಸಂಬಂಧಿಸಿದಂತೆ ಗ್ಯಾಸ್ ಪೈಪ್‌ಲೈನ್ ಅಳವಡಿಸಲು ಅಲ್ಲಲ್ಲಿ ಬೃಹತ್ ಗಾತ್ರದ ಹೊಂಡ ಕೊರೆದು ಅದರಲ್ಲಿ ನೀರು ಮತ್ತು ಕೆಸರು ತುಂಬಿಕೊಂಡಿದ್ದು, ಹೊಂಡ ಮುಚ್ಚುವಂತೆ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿದರೆ, ಈಗಾಗಲೇ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಇಂಜಿನಿಯರ್ ನವೀನ್ ಪ್ರತಿಕ್ರಿಯಿಸಿದ್ದಾರೆ.

ಸ್ಥಳ ಪರಿಶೀಲನೆ

ಈ ಅನಧಿಕೃತ ಬಸ್ ಶೆಲ್ಟರ್ ಮತ್ತು ರಿಕ್ಷಾ ಪಾರ್ಕಿಂಗ್ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ವರ್ತಕರು ಮತ್ತು ಸಾರ್ವಜನಿಕರು ಸಹಿ ಸಂಗ್ರಹಿಸಿ ಪುರಸಭೆ ಮತ್ತು ಸಂಚಾರಿ ಪೊಲೀಸ್ ಠಾಣೆಗೆ ಸೋಮವಾರ ಮನವಿ ಸಲ್ಲಿಸಿದ ಹಿನ್ನೆಲೆ ಮುಖ್ಯಾಧಿಕಾರಿ ಮತ್ತು ಸಂಚಾರಿ ಠಾಣೆ ಎಸ್‌ಐ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಅನಧಿಕೃತ ಬಸ್ ಶೆಲ್ಟರ್ ಮತ್ತು ರಿಕ್ಷಾ ಪಾರ್ಕಿಂಗ್ ತೆರವುಗೊಳಿಸಿಯೇ ಸಿದ್ಧ ಎಂದು ಪುರಸಭೆ ಮುಖ್ಯಾಧಿಕಾರಿ ತೀರ್ಥಪ್ರಸಾದ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net