ಉಜಿರೆಗೆ ಬೇಕು ವ್ಯವಸ್ಥಿತ ಸರ್ಕಲ್

ಉಜಿರೆಯಲ್ಲಿ ನಿರ್ಮಾಣವಾಗುತ್ತಿರುವ ಅವೈಜ್ಞಾನಿಕ ಸರ್ಕಲ್
ಉಜಿರೆಯಲ್ಲಿ ನಿರ್ಮಾಣವಾಗುತ್ತಿರುವ ಅವೈಜ್ಞಾನಿಕ ಸರ್ಕಲ್
Published on
ಮನೋಹರ ಬಳಂಜ ಬೆಳ್ತಂಗಡಿ ಬೆಳ್ತಂಗಡಿ
ತಾಲೂಕಿನ ಪ್ರಮುಖ ಪೇಟೆ ಉಜಿರೆಯಲ್ಲಿ ವ್ಯವಸ್ಥಿತವಾಗಿ ಸರ್ಕಲ್ ನಿರ್ಮಿಸಲು ವಾಹನ ಸವಾರರು, ಸ್ಥಳೀಯರು, ವ್ಯಾಪಾರಿಗಳು ಹಾಗೂ ಉದ್ಯಮಿಗಳು ಬಹುಕಾಲದಿಂದ ಒತ್ತಾಯಿಸುತ್ತಿದ್ದಾರೆ. ಈ ಹಿಂದೆ ಇದ್ದ ಸರ್ಕಲ್ ಅನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಾಗಿ ತೆರವುಗೊಳಿಸಲಾಗಿದೆ. ಬಳಿಕ ತಾತ್ಕಾಲಿಕವಾಗಿ ಬ್ಯಾರಿಕೇಡ್‌ಗಳನ್ನು ಹಾಕಿ ಸರ್ಕಲ್ ಮಾಡಲಾಗಿತ್ತು. ಈಗ ಇಲ್ಲಿ ಪ್ರಾಯೋಗಿಕವಾಗಿ ಸರ್ಕಲ್ ಮಾಡಲಾಗಿದೆ.
ಪ್ರಾಯೋಗಿಕ ಸರ್ಕಲ್ ಅವೈಜ್ಞಾನಿಕವಾಗಿದ್ದು ಈ ರೀತಿ ಸರ್ಕಲ್ ನಿರ್ಮಾಣವಾದರೆ ಇನ್ನಷ್ಟು ಟ್ರಾಫಿಕ್ ಜಾಮ್, ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹೇಳುತ್ತಾರೆ. ಅಲ್ಲದೆ ಈಗಿರುವ ಪ್ರಾಯೋಗಿಕ ಸರ್ಕಲ್ ಪ್ರಕಾರ ಕಾಯಂ ಸರ್ಕಲ್ ನಿರ್ಮಾಣಗೊಂಡರೆ ವಾಹನ ಸಂಚಾರಕ್ಕೆ ಜಾಗದ ಕೊರತೆ ಎದುರಾಗಲಿದೆ.
ಚಾರ್ಮಾಡಿ, ಧರ್ಮಸ್ಥಳ, ಬೆಳ್ತಂಗಡಿ ಕಡೆಯಿಂದ ಹೋಗುವ ಮತ್ತು ಬರುವ ವಾಹನಗಳು ಸುಲಭವಾಗಿ ಸಂಚರಿಸಲು ಇಲ್ಲಿ ಅನೇಕ ವರ್ಷಗಳ ಹಿಂದಿನಿಂದ ಸರ್ಕಲ್ ಇತ್ತು. ಸುಮಾರು 15 ವರ್ಷಗಳ ಹಿಂದೆ ಈ ವೃತ್ತಾಕಾರದ ಸರ್ಕಲ್ ತೆರವುಗೊಳಿಸಿ ಬೇರೆ ಬೇರೆ ಭಾಗಗಳಿಂದ ಆಗಮಿಸುವ ವಾಹನಗಳಿಗೆ ಸರ್ಕಲ್ ಪ್ರದೇಶದಲ್ಲಿ ಪ್ರತ್ಯೇಕ ರಸ್ತೆ ನಿರ್ಮಿಸಲಾಯಿತು. ಆದರೆ ಇದು ತೀರಾ ಅವೈಜ್ಞಾನಿಕವಾಗಿ ನಿರ್ಮಾಣವಾದ ಕಾರಣ ವಾಹನ ಸವಾರರು ಪರದಾಡುವ ಜತೆ ಸಾಕಷ್ಟು ಅಪಘಾತಗಳು ಸಂಭವಿಸಿದವು. ಬಳಿಕ ಹತ್ತು ವರ್ಷಗಳ ಹಿಂದೆ ಆ ರಸ್ತೆಗಳನ್ನು ತೆರೆವುಗೊಳಿಸಿ ಅದೇ ಸ್ಥಳದಲ್ಲಿ ಮತ್ತೆ ಸರ್ಕಲ್ ನಿರ್ಮಿಸಲಾಯಿತು.
ಆ ಸರ್ಕಲ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ತೆರೆವುಗೊಂಡಿದೆ. ನಿತ್ಯವೂ ಟ್ರಾಫಿಕ್ ಜಾಮ್: ಉಜಿರೆಯಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಇಲ್ಲದ ಕಾರಣ ಬೇರೆ ಬೇರೆ ಸ್ಥಳಗಳಿಗೆ ಪ್ರಯಾಣಿಸುವ ಬಸ್‌ಗಳನ್ನು ಅಲ್ಲಲ್ಲಿ ನಿಲ್ಲಿಸಲಾಗುತ್ತದೆ. ಇಲ್ಲಿ ಬಸ್ ನಿಲ್ದಾಣವಿದ್ದರೂ ಎಲ್ಲ ಕಡೆಗೆ ಹೋಗುವ ವಾಹನಗಳು ಬಸ್ ನಿಲ್ದಾಣವನ್ನು ಪ್ರವೇಶಿಸುವುದಿಲ್ಲ. ಹಲವು ಬಸ್‌ಗಳು ಸರ್ಕಲ್ ಇರುವ ಪ್ರದೇಶದಲ್ಲಿ ನಿಲ್ಲುವುದರಿಂದ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದೆ.
ಹಲವು ವಾಹನ ಸವಾರರು ಸರ್ಕಲ್ ನಿಯಮ ಪಾಲಿಸದೆ ಬೇಕಾಬಿಟ್ಟಿ ಸಂಚರಿಸುವುದರಿಂದ ಹಲವಾರು ಸಮಸ್ಯೆಗಳು ಎದುರಾಗುತ್ತಿವೆ. ಸರ್ಕಲ್ ಪ್ರದೇಶದಲ್ಲಿ ಸಂಚಾರಿ ಪೊಲೀಸರು ಇದ್ದರೂ ಅವರು ವಾಹನಗಳ ಸುಗಮ ಸಂಚಾರದತ್ತ ಗಮನಹರಿಸುವುದಲ್ಲಿ ಎಂಬ ದೂರು ಕೇಳಿ ಬರುತ್ತಿದೆ.

ವಾಹನ ಸವಾರರಿಗೆ ನಿತ್ಯ ಬವಣೆ

ಉಜಿರೆಯಲ್ಲಿ ವ್ಯವಸ್ಥಿತವಾದ ಸರ್ಕಲ್ ನಿರ್ಮಿಸುವುದು ಅತ್ಯಗತ್ಯವಾಗಿದೆ. ಉಜಿರೆ ಮೂಲಕ ದಿನಂಪ್ರತಿ ಹಲವು ಸಾವಿರ ವಾಹನಗಳ ಓಡಾಟ ಇದೆ.ಆದರೆ ಇಲ್ಲಿ ಸರಿಯಾದ ಸಂಚಾರ ವ್ಯವಸ್ಥೆ, ಬಸ್ ನಿಲ್ದಾಣ ಇಲ್ಲದ ಕಾರಣ ಸ್ಥಳೀಯರು ಹಾಗೂ ಪ್ರವಾಸಿಗರು ವಾಹನ ಸವಾರರು ಸಾಕಷ್ಟು ಬವಣೆ ಪಡುವಂತಾಗಿದೆ. ಈ ಕಾರಣದಿಂದ ಉಜಿರೆಗೆ ವ್ಯವಸ್ಥಿತ ಸರ್ಕಲ್ ಹಾಗೂ ಬಸ್ ನಿಲ್ದಾಣದ ಅಗತ್ಯ ಇದೆ. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ವಾರ್ಷಿಕ ಜಾತ್ರೆ ಸಮಯ ಸರ್ಕಲ್‌ನಲ್ಲಿ ದೇವರಿಗೆ ಪ್ರತಿ ವರ್ಷ ಪೇಟೆ ಸವಾರಿಯ ಬಳಿಕ ಕಟ್ಟೆ ಪೂಜೆ ನಡೆಯುತ್ತದೆ. ಈ ಎಲ್ಲ ಕಾರಣಗಳಿಂದ ಉಜಿರೆಯಲ್ಲಿ ವೈಜ್ಞಾನಿಕವಾದ ಸರ್ಕಲ್ ನಿರ್ಮಾಣಗೊಳ್ಳಬೇಕೆಂಬ ಆಗ್ರಹ ಬಲವಾಗಿ ವ್ಯಕ್ತವಾಗಿದೆ.

ಉಜಿರೆಯಲ್ಲಿ ಪ್ರಾಯೋಗಿಕವಾಗಿ ಸರ್ಕಲ್ ನಿರ್ಮಾಣ ಮಾಡಲಾಗಿದ್ದು, ಇಲ್ಲಿನ ವಾಹನ ಸಂಚಾರ ವ್ಯವಸ್ಥೆಯನ್ನು ಪ್ರತಿನಿತ್ಯ ಪರಿಶೀಲಿಸಲಾಗುತ್ತಿದೆ. ಟ್ರಾಫಿಕ್ ಜಾಮ್ ಸಮಸ್ಯೆ ಅಪಘಾತಗಳು ಉಂಟಾಗದಂತೆ ವ್ಯವಸ್ಥಿತ ಸರ್ಕಲ್ ನಿರ್ಮಾಣದ ಕುರಿತು ಯೋಜನೆ ರೂಪಿಸಲಾಗುತ್ತಿದೆ. ಇದರ ಆಧಾರದ ಮೇಲೆ ಸರ್ಕಲ್ ನಿರ್ಮಾಣಗೊಳ್ಳಲಿದೆ.

— ಗುರುಪ್ರಸಾದ್, ಎಇಇ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ದ.ಕ.

ಉಜಿರೆಗೆ ವ್ಯವಸ್ಥಿತ ಸರ್ಕಲ್ ನಿರ್ಮಾಣ ಬಹುವರ್ಷದ ಬೇಡಿಕೆಯಾಗಿದೆ. ಈ ಹಿಂದೆ ನಿರ್ಮಾಣವಾದ ಸರ್ಕಲ್‌ಗಳು ತೀರಾ ಅವೈಜ್ಞಾನಿಕವಾಗಿದ್ದ ಕಾರಣ ಅಪಘಾತಗಳ ಸಹಿತ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಇದರ ಜತೆಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಬೇಕಿದೆ.

— ಜಯಂತ, ಉದ್ಯಮಿ, ಉಜಿರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net