ಯಕ್ಷಗಾನ ಕಲಾವಿದ ಮುಂಡ್ಕೂರು ಕೃಷ್ಣ ಶೆಟ್ಟಿ ನಿಧನ

ಯಕ್ಷಗಾನ ಕಲಾವಿದ ಮುಂಡ್ಕೂರು ಕೃಷ್ಣ ಶೆಟ್ಟಿ.
ಯಕ್ಷಗಾನ ಕಲಾವಿದ ಮುಂಡ್ಕೂರು ಕೃಷ್ಣ ಶೆಟ್ಟಿ.
Published on

* ಕುಟ್ಟಿ ಎಂದೇ ಪ್ರಸಿದ್ಧರಾಗಿದ್ದ ಕಲಾವಿದ

ಉಡುಪಿ: ಯಕ್ಷಗಾನ ವಲಯದಲ್ಲಿ 'ಕುಟ್ಟಿ' ಎಂದೇ ಪ್ರಸಿದ್ಧರಾಗಿದ್ದ ಮುಂಡ್ಕೂರು ಕೃಷ್ಣ ಶೆಟ್ಟಿ (80) ಮಂಗಳವಾರ (ಜು.28) ನಿಧನರಾದರು. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ತೆಂಕುತಿಟ್ಟಿನಲ್ಲಿ ಅಗ್ರಮಾನ್ಯ ಪುಂಡು ವೇಷಧಾರಿಯಾಗಿದ್ದ ಅವರು, ಕ್ರಿಶ್ಚಿಯನ್​ ಬಾಬು ನಾಟ್ಯದಿಂದ ಪ್ರಭಾವಿತರಾಗಿ ಅವರಲ್ಲಿಯೇ ಆರಂಭದ ಯಕ್ಷಶಿಕ್ಷಣ ಪಡೆದರು. ಉದ್ಯೋಗ ನಿಮಿತ್ತ ಕೆಲ ವರ್ಷ ಮುಂಬಯಿಯಲ್ಲಿದ್ದಾಗ ಗುರು ನಾರಾಯಣ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ವೇಷಧಾರಿಯಾಗಿದ್ದರು.
ಊರಿಗೆ ಬಂದ ಬಳಿಕ 26 ವರ್ಷಗಳ ಕಾಲ ಕಟೀಲು ಮೇಳ ಹಾಗೂ ಕೊಲ್ಲೂರು, ಬಪ್ಪನಬಾಡು, ಮಧೂರು, ತಲಕಳ ಬಡಗುತಿಟ್ಟಿನ ಸಾಲಿಗ್ರಾಮ, ಮಾರಣಕಟ್ಟೆ ಮೇಳಗಳೂ ಸೇರಿದಂತೆ ಸುಮಾರು ನಾಲ್ಕೂವರೆ ದಶಕಗಳ ಕಾಲ ತಿರುಗಾಟ ಮಾಡಿದ್ದರು.
ಇರಾ ಗೋಪಾಲಕೃಷ್ಣ ಭಾಗವತರು, ನಿಡ್ಲೆ ನರಸಿಂಹ ಭಟ್ಟ ಅವರಂತಹ ಮಹಾನ್​ ಕಲಾವಿದರ ಹಿಮ್ಮೇಳದಲ್ಲಿ ಅಭಿಮನ್ಯು, ಬಬ್ರುವಾಹನ, ಮಾರ್ತಾಂಡತೇಜ, ಅಶ್ವತ್ಥಾಮ ಮೊದಲಾದ ಪಾತ್ರಗಳಲ್ಲಿ ತಮ್ಮ ಕಲಾ ಪ್ರೌಢಿಮೆ ಮೆರೆದಿದ್ದರು. 2022ರಲ್ಲಿ 'ಯಕ್ಷಗಾನ ಕಲಾರಂಗ' ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್​ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್​ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net