ವೇದವರ್ಧನ 'ಪ್ರಥಮ' ಪರ್ಯಾಯ ಪಯಣ

ಸಾಲಂಕೃತ ಮೇಣೆಯಲ್ಲಿ ಹಸನ್ಮುಖರಾಗಿ ಕುಳಿತು ಉಡುಪಿ ಶ್ರೀಕೃಷ್ಣನ ಪ್ರಥಮ ಪರ್ಯಾಯದ ದರ್ಶನಕ್ಕೆ ಜೋಡುಕಟ್ಟೆಯಿಂದ ತೆರಳುತ್ತಿರುವ ಶೀರೂರು ವೇದವರ್ಧನ ತೀರ್ಥ ಶ್ರೀಪಾದರು.
ಸಾಲಂಕೃತ ಮೇಣೆಯಲ್ಲಿ ಹಸನ್ಮುಖರಾಗಿ ಕುಳಿತು ಉಡುಪಿ ಶ್ರೀಕೃಷ್ಣನ ಪ್ರಥಮ ಪರ್ಯಾಯದ ದರ್ಶನಕ್ಕೆ ಜೋಡುಕಟ್ಟೆಯಿಂದ ತೆರಳುತ್ತಿರುವ ಶೀರೂರು ವೇದವರ್ಧನ ತೀರ್ಥ ಶ್ರೀಪಾದರು.
Published on

* ಹರಿ-ಗುರುಗಳೊಂದಿಗೆ ಶೀರೂರುಶ್ರೀ ಮೆರವಣಿಗೆ

* ಆರಾಧ್ಯ ಶ್ರೀಕೃಷ್ಣನ ಕಣ್ತುಂಬಿಕೊಂಡ ಗಳಿಗೆ

ಉಡುಪಿ: ಜಗದ್ಗುರು ಶ್ರೀಮಧ್ವಾಚಾರ್ಯರ ಮೂಲಮಹಾಸಂಸ್ಥಾನದ ವಾಮನ ತೀರ್ಥ ಪರಂಪರೆಯ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರ ಉತ್ತರಾಧಿಕಾರಿ ಶೀರೂರು ಮಠದ 31ನೇ ಯತಿ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಜ.18ರ ನಸುಕಿನಲ್ಲಿ ಆರಂಭಗೊಂಡಿತು.
ಸರ್ವಜ್ಞ ಪೀಠವೇರಿ ಮುಂದಿನ ಎರಡು ವರ್ಷ ಶ್ರೀಕೃಷ್ಣನ ಪೂಜಾ ಕೈಂಕರ್ಯ ನೆರವೇರಿಸಲಿರುವ ವೇದವರ್ಧನ ಶ್ರೀಗಳ ಪರ್ಯಾಯ ಮಹೋತ್ಸವದ ಮೆರವಣಿಗೆಯು ಲಕ್ಷಾಂತರ ಭಕ್ತರ ಸಂಭ್ರಮೋತ್ಸಾಹದಲ್ಲಿ ನೆರವೇರಿತು. 

ಶ್ರೀಗಳಿಂದ ಪವಿತ್ರ ಸ್ನಾನ

ಪರ್ಯಾಯ ಸ್ವೀಕರಿಸುವಾಗ ಆಚರಣೆಯಲ್ಲಿರುವ ಪ್ರಥಮ ಸಂಪ್ರದಾಯದಂತೆ ವೇದವರ್ಧನ ಶ್ರೀಗಳು ಭಾನುವಾರ (ಜ.18) ಬ್ರಾಹ್ಮೀ ಮುಹೂರ್ತದಲ್ಲಿ 1:15ಕ್ಕೆ ಕಾಪು ಸಮೀಪದ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿದರು. ಉಡುಪಿ ಶ್ರೀಕೃಷ್ಣನನ್ನು ಹೃನ್ಮನಗಳಲ್ಲಿ ತುಂಬಿಕೊಂಡು ಮಧ್ಯರಾತ್ರಿ 2 ಗಂಟೆಗೆ ಜೋಡುಕಟ್ಟೆಯಲ್ಲಿರುವ ಪೂರ್ಣಪ್ರಜ್ಞ ಮಂಟಪಕ್ಕೆ ಆಗಮಿಸಿದರು. ಶೀರೂರು ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷ, ಶಾಸಕ ಯಶ್​ಪಾಲ್​ ಸುವರ್ಣ ಅವರು ಶ್ರೀಗಳಿಗೆ ಹಾರ ಸಮರ್ಪಿಸಿ ಸ್ವಾಗತಿಸಿದರು.

ಆರು ಮಠಗಳ ಯತಿಗಳ ಉಪಸ್ಥಿತಿ

ವೇದವರ್ಧನ ಶ್ರೀಗಳ ಪ್ರಥಮ ಪರ್ಯಾಯದ ನಿಮಿತ್ತ ಉಡುಪಿಯ ಇನ್ನಿತರ 6 ಮಠಗಳ ಹಿರಿ-ಕಿರಿಯ ಯತಿಗಳು ಉಪಸ್ಥಿತರಿದ್ದರು. ಶೀರೂರು ಶ್ರೀಗಳಿಗೆ ಸನ್ಯಾಸ ದೀಕ್ಷೆ ನೀಡಿದ್ದ ಸೋದೆ ಮಠದ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಅದಮಾರು ಮಠದ ಕಿರಿಯ ಯತಿ ಈಶಪ್ರಿಯ ತೀರ್ಥ ಶ್ರೀಪಾದರು, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಪಾದರು, ಪಲಿಮಾರು ಮಠದ ಹಿರಿಯ ಯತಿ ವಿದ್ಯಾಧೀಶ ತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಪಾಲ್ಗೊಂಡು ಮಹೋತ್ಸವಕ್ಕೆ ಹಾಗೂ ಮೆರವಣಿಗೆಗೆ ಇನ್ನಷ್ಟು ಭಕ್ತಿ-ಸಂಭ್ರಮ ಹೆಚ್ಚಿಸಿದರು. ಶೀರೂರು ಶ್ರೀಗಳು ಎಲ್ಲ ಯತಿಗಳಿಗೂ ಶಿರಬಾಗಿ ನಮಿಸಿ, ಆಶೀರ್ವಾದ ಪಡೆದರು.

ಮೆರವಣಿಗೆಗೆ ಡಿಸಿ ಚಾಲನೆ

ಮಧ್ಯರಾತ್ರಿ 2:30ಕ್ಕೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರು ವೇದವರ್ಧನ ಶ್ರೀಗಳ ಪರ್ಯಾಯ ಮಹೋತ್ಸವದ ಅದ್ದೂರಿ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ್​ ಪೂಜಾರಿ, ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​, ಕಾರ್ಕಳ ಶಾಸಕ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ, ಪರ್ಯಾಯ ಸ್ವಾಗತ ಸಮಿತಿಯ ಯಶ್​ಪಾಲ್​ ಸುವರ್ಣ, ಮಟ್ಟಾರು ರತ್ನಾಕರ್​ ಹೆಗ್ಡೆ, ಜಯಕರ್​ ಶೆಟ್ಟಿ ಇಂದ್ರಾಳಿ, ವಿಷ್ಣುಪ್ರಸಾದ್​ ಪಾಡೀಗಾರು, ಮೋಹನ್​ ಭಟ್​, ಕೆ.ರಘುಪತಿ ಭಟ್​, ಶ್ರೀಧರ್​ ಭಟ್​ ಉಚ್ಚಿಲ, ಬೈಕಾಡಿ ಸುಪ್ರಸಾದ್​ ಭಟ್​, ಮಧುಕರ್​ ಮುದ್ರಾಡಿ, ಯು.ಬಿ. ಶ್ರೀನಿವಾಸ್​, ವಿಜಯ ಭಟ್​ ಕಡೇಕಾರ್​, ವಿಷ್ಣುಮೂರ್ತಿ ಆಚಾರ್ಯ, ಕಿಶೋರ್​ ಆಳ್ವ, ಗೊಪಾಲಕೃಷ್ಣ ಅಸ್ರಣ್ಣ, ಹರಿಕೃಷ್ಣ ಪುನರೂರು, ಪ್ರದೀಪಕುಮಾರ್​ ಕಲ್ಕೂರ, ಭುವನಾಭಿರಾಮ್​ ಉಡುಪ, ಎಂ.ಬಿ. ಪುರಾಣಿಕ್​, ಗುರುಪ್ರಸಾದ್​, ಶೀರೂರು ಮಠದ ದಿವಾನ ಡಾ. ಉದಯಕುಮಾರ್​ ಸರಳತ್ತಾಯ, ಶ್ರೀಗಳ ಪೂರ್ವಾಶ್ರಮದ ತಾಯಿ ಶ್ರೀವಿದ್ಯಾ, ಸಹೋದರಿ ಹಿರಣ್ಮಯಿ ಇನ್ನಿತರರು ಪಾಲ್ಗೊಂಡಿದ್ದರು.

ಗೋವಿಂದಾನಿ ಗೋವಿಂದ ಘೋಷಣೆ

ಶೀರೂರು ಶ್ರೀಗಳ ಪರ್ಯಾಯದ ಮೆರವಣಿಗೆ ಆರಂಭಗೊಳ್ಳುತ್ತಿದ್ದಂತೆ ಹಾಗೂ ಮೆರವಣಿಗೆಯಲ್ಲಿ ಸಾಗಲು ಶ್ರೀಗಳು ಸಾಲಂಕೃತ ಮೇಣೆ ಏರುವಾಗ, ಪಟ್ಟದ ದೇವರನ್ನು ಪಲ್ಲಕ್ಕಿಯಲ್ಲಿಡುವಾಗ ಸೇರಿದ್ದ ಜನಸ್ತೋಮದಿಂದ ಜಯಘೋಷ ಮೊಳಗಿತು. 'ಗೋವಿಂದಾನಿ ಗೋವಿಂದ, ಬೋಲೋ ಉಡುಪಿ ಶ್ರೀಕೃಷ್ಣ ಮಹಾರಾಜ್​ ಕೀ ಜೈ' ಹಾಗೂ ಶೀರೂರು ಶ್ರೀಗಳಿಗೂ ಜೈಕಾರ ಮೊಳಗಿತು.

ಜಮಾಯಿಸಿತ್ತು ಜನಜಂಗುಳಿ

ಜೋಡುಕಟ್ಟೆಯಿಂದ ಆರಂಭಿಸಿ ಕೋರ್ಟ್​ ರಸ್ತೆ, ನಗರಸಭೆ, ಸಂಸ್ಕೃತ ಕಾಲೇಜು ಮಾರ್ಗವಾಗಿ ಉಡುಪಿ ರಥಬೀದಿಯವರೆಗೂ ರಸ್ತೆಯ ಮಧ್ಯದಲ್ಲಿ ಕಬ್ಬಿಣದ ಗೇಟ್​ ಅಳವಡಿಸಿ, ಮೆರವಣಿಗೆ ಸುಗಮವಾಗಿ ಸಾಗಲು ವ್ಯವಸ್ಥೆ ಮಾಡಲಾಗಿತ್ತು. ರಸ್ತೆಯ ಎರಡೂ ಕಡೆಗಳಲ್ಲಿ ಜನರು ನಿಂತು ಮೆರವಣಿಗೆ ಸಾಗುವುದನ್ನು ಕಂಡು ಸಂಭ್ರಮಿಸಿದರು. ಮೊಬೈಲ್​ಗಳಲ್ಲಿ ಸುಂದರ ಹಾಗೂ ಆಕರ್ಷಕ ದೃಶ್ಯಗಳನ್ನು ಸೆರೆ ಹಿಡಿದರು. ಮೆರವಣಿಗೆಯ ಸೊಬಗು ವೀಕ್ಷಿಸಲು ಕುಟುಂಬ ಸಮೇತರಾಗಿ ಉಡುಪಿ ಜಿಲ್ಲೆ ಹಾಗೂ ಅನ್ಯ ಜಿಲ್ಲೆಗಳ ಲಕ್ಷಾಂತರ ಜನರು ಜಮಾಯಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್​ ಭದ್ರತೆ ಮಾಡಲಾಗಿತ್ತು.  

ಕನಕನ ಕಿಂಡಿಯಲ್ಲಿ ಶ್ರೀಕೃಷ್ಣನ ದರ್ಶನ

ಪ್ರಥಮ ಪರ್ಯಾಯದ ಅದ್ದೂರಿ ಮೆರವಣಿಗೆಯಲ್ಲಿ ಆಗಮಿಸಿದ ವೇದವರ್ಧನ ಶ್ರೀಗಳು, ಬೆಳಗ್ಗೆ 5:15ಕ್ಕೆ ಉಡುಪಿಯ ರತಬೀದಿಯಲ್ಲಿರುವ ಕನಕನ ಕಿಂಡಿಯಲ್ಲಿ ಶ್ರೀಕೃಷ್ಣನ ದರ್ಶನ ಮಾಡಿದರು. ಬಳಿಕ ಚಂದ್ರಮೌಳೀಶ್ವರ, ಅನಂತೇಶ್ವರ ದೇಗುಲಕ್ಕೆ ತೆರಳಿ ದೇವರ ದರ್ಶನ ಮಾಡಿದರು. ಅದ್ದೂರಿಯಾಗಿ ಪರ್ಯಾಯ ಮುಗಿಸಿದ ನಿರ್ಗಮನ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಬೆಳಗ್ಗೆ 5:45ಕ್ಕೆ ಶೀರೂರು ಶ್ರೀಪಾದರನ್ನು ಸರ್ವಜ್ಞ ಪೀಠದಲ್ಲಿ ಕುಳ್ಳಿರಿಸಿದರು. ಇದಕ್ಕೂ ಮೊದಲು ವೇದವರ್ಧನ ತೀರ್ಥರು ಪೂರ್ವಾಶ್ರಮದ ತಾಯಿಯ ಪಾದಕ್ಕೆ ನಮಿಸಿ ಸರ್ವಜ್ಞ ಪೀಠ ಏರಿದರು.

ನಂದಗೋಕುಲದಂತಾದ ಉಡುಪಿ ನಗರ

ರಜತಪೀಠಪುರ (ಉಡುಪಿ)ವು ಪ್ರತಿ ಪರ್ಯಾಯದ ಸಂದರ್ಭದಲ್ಲೂ ಭಕ್ತಿ ಭಾವದಲ್ಲಿ ತಲ್ಲೀನವಾಗಿರುತ್ತದೆ. ಅದರಂತೆ ಶೀರೂರು ಪರ್ಯಾಯದಲ್ಲೂ ಸಹ ಕಡೆಗೋಲುಧಾರಿಯಾದ ಬಾಲಕ ಕೃಷ್ಣನ ಊರು ನಂದಗೋಕುಲದಂತೆ ಹೊಳೆಯುತ್ತಿತ್ತು. ರಾತ್ರಿಯ ಕತ್ತಲನ್ನು ಬೆದರಿಸುವಂತೆ ಬೆಳಗುತ್ತಿದ್ದ ರಂಗುರಂಗಿನ ವಿದ್ಯುತ್​ ದೀಪಗಳು ಉಡುಪಿಯ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು. ಕೃಷ್ಣನಿಗಾಗಿ ಲಕ್ಷಾಂತರ ಜನರು ಸೇರಿದ್ದರು. ನಗರದ ಅಲ್ಲಲ್ಲಿ ಆರ್ಕೆಸ್ಟ್ರಾದ ತಂಡಗಳಿಂದ ರಸಮಂಜರಿ ಕಾರ್ಯಕ್ರಮ ನಡೆಯುತ್ತಿತ್ತು. ಯಕ್ಷಗಾನ, ಸಂಗೀತ ಕಚೇರಿಗಳು ಜನರನ್ನು ರಂಜಿಸಿದವು. ರಸ್ತೆಯ ಇಕ್ಕೆಲಗಳಲ್ಲಿ ವಿವಿಧ ತಿಂಡಿ-ತಿನಿಸುಗಳ ಮಳಿಗೆಗಳನ್ನು ತೆರೆದಿದ್ದು, ಒಳ್ಳೆಯ ವ್ಯಾಪಾರವೂ ನಡೆದಿತ್ತು. ಜನರು ತಮಗಿಷ್ಟವಾದ ಆಹಾರೋತ್ಪನ್ನ ಸವಿಯುತ್ತ, ಅಮ್ಯೂಸ್​ಮೆಂಟ್​ ಪಾರ್ಕ್​ಗಳ ಸಂಭ್ರಮಿಸುತ್ತ, ಕೃಷ್ಣ ಸೆಲ್ಫಿ ಪಾಯಿಂಟ್​ನಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತ ಹೊಸ ಲೋಕದಲ್ಲಿ ವಿಹರಿಸಿದರು.

ಬಿಜೆಪಿಯಿಂದ 'ನಮೋ ಚಹಾ' ವಿತರಣೆ

ಶೀರೂರು ಪರ್ಯಾಯ ಮೆರವಣಿಗೆಗೆ ಆಗಮಿಸಿದ್ದ ಸಾರ್ವಜನಿಕರಿಗೆ ಶಾಸಕ ಯಶ್​ಪಾಲ್​ ಸುವರ್ಣ ಅವರ ನೇತೃತ್ವದಲ್ಲಿ ಉಡುಪಿ ನಗರ ಬಿಜೆಪಿ ಮಂಡಲ ಹಾಗೂ ಮಹಿಳಾ ಮೋರ್ಚಾ, ಯುವ ಮೋರ್ಚಾದ ವತಿಯಿಂದ ಶನಿವಾರ ರಾತ್ರಿ 8 ಗಂಟೆಯಿಂದ ರಾತ್ರಿ 12:30ರ ವರೆಗೂ ಉಚಿತವಾಗಿ 'ನಮೋ ಚಹಾ' ವಿತರಣೆ ಮಾಡಲಾಯಿತು. ಶಾಸಕರ ಕಚೇರಿ ಮುಂಭಾಗದಲ್ಲಿ ಅಳವಡಿಸಿದ್ದ ನಮೋ ಟೀ ಸ್ಟಾಲ್​ನಲ್ಲಿ 25 ಸಾವಿರಕ್ಕೂ ಅಧಿಕ ಜನರು ಚಹಾ ಸವಿದರು. ಉಡುಪಿಯ ಜೂನಿಯರ್​ ಮೋದಿ ಖ್ಯಾತಿಯ ಸದಾನಂದ ನಾಯಕ್​ ಉಪಸ್ಥಿತರಿದ್ದು, ಅವರೊಂದಿಗೆ ಸಾವಿರಾರು ಮಂದಿ ಸೆಲ್ಫಿ ತೆಗೆದುಕೊಳ್ಳುತ್ತ ಚಹಾ ಕುಡಿದು ಸಂಭ್ರಮಿಸಿದರು.

ಗಮನ ಸೆಳೆದ 90ಕ್ಕೂ ಅಧಿಕ ಕಲಾ ತಂಡ, ಸ್ತಬ್ಧಚಿತ್ರ

ಶೀರೂರು ಪರ್ಯಾಯದ ನಿಮಿತ್ತ ಅದ್ದೂರಿ ಮೆರವಣಿಗೆಯಲ್ಲಿ 90ಕ್ಕೂ ಅಧಿಕ ಕಲಾ ತಂಡ, ಸ್ತಬ್ಧಚಿತ್ರ ಹಾಗೂ ಜಾನಪದ ಮೇಳಗಳು ಲಕ್ಷಾಂತರ ಜನರ ಮನಸೆಳೆದವು. ಆರಂಭದಲ್ಲಿ ಗರ್ನಾಲು ತಂಡದವರು ಗರ್ನಾಲು ಸಿಡಿಸುವ ಮೂಲಕ ಮೆರವಣಿಗೆಯ ಅಬ್ಬರ ಆರಂಭಿಸಿದರು. ತಾಲೀಮು ತಂಡ, ಬ್ಯಾಂಡ್​ ಸೆಟ್​, ಮೈಸೂರು ನಗಾರಿ, ನಂದಿ ಧ್ವಜ, ಜಾನಪದ ಡೋಲು, ಭಾರತ್​ ಸ್ಕೌಟ್ಸ್​-ಗೈಡ್ಸ್​ ವಿದ್ಯಾರ್ಥಿಗಳು, ಕೊಂಬು, ಶಂಖ ದಾಸರು, ವಿವಿಧ ಬಿರುದಾವಳಿ, ಚಂಡೆ ಬಳಗ, ತಿರುವನಂತಪುರದ ಆನೆಯ ಮಾದರಿ, ತಟ್ಟೀರಾಯ, ಸೋಮಕಾಸುರ, ಮರಕಾಲು, ಕೊಡೆಗಳು, ಚಿಲಿಪಿಲಿ ಗೊಂಬೆ, ಕಂಸವಧೆ ಸ್ತಬ್ಧಚಿತ್ರ, ಸೋಮನ ಕುಣಿತ, ಬ್ರೆಜಿಲ್​ ಗೊಂಬೆ ಡ್ಯಾನ್ಸ್​, ಮಾಯಾವಿ ಅಜಗರ ಸಂಹಾರ, ಬೃಹತ್​ ಕೊಕ್ಕರೆ, ಧ್ಯಾನಮಾಲಿನಿ ಶಾಪ ವಿಮೋಚನೆ, ಪುರಿ ಜಗನ್ನಾಥ, ಪಾಂಡುರಂಗ ಪುರಂದರ ವಿಠ್ಠಲ, ಕುಣಿತ ಭಜನೆ, ಶ್ರೀ ಮಧ್ವಾಚಾರ್ಯರ ಸ್ತಬ್ಧಚಿತ್ರ, ಭಜನಾ ತಂಡ, ವಾದಿರಾಜರು ಮತ್ತು ಮಟ್ಟುಗುಳ್ಳ, ಯಕ್ಷಗಾನ, ಶಿರಸಿಯ ಬೇಡರ ವೇಷ, ಶ್ರೀಕೃಷ್ಣ-ಕುಚೇಲ, ಕಂಸಾಳೆ, ವೀರಗಾಸೆ, ನರಸಿಂಹ ಅವತಾರ, ಹುಲಿವೇಷ, ಕೇರಳ ಪೂಕಾವಡಿ, ಪುಣೆಯ ದೋಲ್​ ತಾಶಾ, ವರಾಹ ಅವತಾರ, ದಾರಿಕಾಸುರ ಸಂಹಾರ, ನಾಗಸ್ವರ, ಬಾರ ತಂಬೂರಿ, ರಣಕಹಳೆ, ಡೋಲು, ಪಂಚವಾದ್ಯ, ವಿವಿಧ ಮಠಗಳ ವಾದ್ಯ ತಂಡ, ಸರ್ಕಾರಿ ಇಲಾಖೆಗಳ ಟ್ಯಾಬ್ಲೋಗಳು ಜೋಡುಕಟ್ಟೆಯಿಂದ ಉಡುಪಿ ಮಠದ ವರೆಗೆ ಸಾಗಿದವು.

ನಗರದಲ್ಲಿ ಪೊಲೀಸ್​ ಕಣ್ಗಾವಲು

ಪರ್ಯಾಯ ಭದ್ರತೆಗಾಗಿ ಉಡುಪಿ, ದ.ಕ., ಚಿಕ್ಕಮಗಳೂರು, ಉತ್ತರ ಕನ್ನಡ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಶನಿವಾರ ಸಂಜೆಯಿಂದಲೇ ಕರ್ತವ್ಯ ನಿರತರಾಗಿದ್ದ ಪೊಲೀಸರು ವ್ಯವಸ್ಥಿತವಾಗಿ ಬಂದೋಬಸ್ತ್​ ನಿರ್ವಹಿಸಿದ್ದರು. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಂ ಶಂಕರ್ ನೇತೃತ್ವದಲ್ಲಿ ಓರ್ವ ಎಸ್​ಪಿ ದರ್ಜೆ ಅಧಿಕಾರಿ, 8 ಮಂದಿ ಡಿವೈಎಸ್​ಪಿ, 21 ಪೊಲೀಸ್​ ಇನ್​ಸ್ಪೆಕ್ಟರ್​, 61 ಪೊಲೀಸ್​ ಉಪನಿರೀಕ್ಷಕರು, 110 ಮಂದಿ ಸಹಾಯಕ ಪೊಲೀಸ್​ ಉಪನಿರೀಕ್ಷಕರು-, 812 ಪೊಲೀಸ್​ ಸಿಬ್ಬಂದಿ ಹಾಗೂ 200 ಗೃಹರಕ್ಷಕದಳದ ಸಿಬ್ಬಂದಿಯನ್ನು ಬಂದೊಬಸ್ತ್​ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಇದಲ್ಲದೇ 4- ಕೆಎಸ್​ಆರ್​ಪಿ, 14- ಡಿಎಆರ್​, 5- ವಿದ್ವಂಸಕ ಕೃತ್ಯ ಪತ್ತೆ ತಂಡ ನಿಯೋಜಿಸಲಾಗಿತ್ತು. ಪರ್ಯಾಯ ದರ್ಬಾರ್​ ಆರಂಭಕ್ಕೆ ಮುನ್ನ ಬಾಂಬ್​ ನಿಷ್ಕ್ರಿಯ ದಳ ಸಿಬ್ಬಂದಿ ವಿಶೇಷ ತಪಾಸಣೆ ನಡೆಸಿದರು.
"

ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಆರಂಭಗೊಂಡಿದೆ. ಅಷ್ಟಮಠಗಳಲ್ಲಿಯೇ ಯುವ ಯತಿಯಾಗಿರುವ ಶ್ರೀಪಾದರು ಸರ್ವಜ್ಞ ಪೀಠ ಏರಿದ್ದು, ಬಾಲಕ ಶ್ರೀಕೃಷ್ಣನ ಪೂಜಾ ಕೈಂಕರ್ಯವನ್ನು ಮುಂದಿನ ಎರಡು ವರ್ಷ ನಡೆಸಲಿದ್ದಾರೆ. ಅಷ್ಟ ಮಠಾಧೀಶರಲ್ಲಿ ಪ್ರತಿಯೊಬ್ಬರಿಗೆ 16 ವರ್ಷಕ್ಕೊಮ್ಮೆ ದ್ವೈವಾರ್ಷಿಕ ಕೃಷ್ಣ ಪೂಜೆಯ ಅವಕಾಶ ದೊರೆಯುತ್ತದೆ. ಆದರೆ, ಉಡುಪಿಯ ಜನತೆಗೆ ಪ್ರತಿ ಎರಡು ವರ್ಷಕ್ಕೊಮ್ಮೆ ಪರ್ಯಾಯೋತ್ಸವ ಲಭಿಸುತ್ತದೆ. 'ಶೀರೂರು ಪರ್ಯಾಯ ನಮ್ಮ ಪರ್ಯಾಯ' ಎಂಬ ಘೋಷಣೆಯೊಂದಿಗೆ ಆರಂಭಗೊಂಡಿದೆ. ಶ್ರೀಕೃಷ್ಣನ ಎಲ್ಲ ಸದ್ಭಕ್ತರ ಪರ್ಯಾಯ ಇದಾಗಿದ್ದು, ಭಗವಂತನ ಸೇವೆ ಮಾಡುವ ಸದವಕಾಶ ಬಳಸಿಕೊಳ್ಳಬೇಕು.

ಸರ್ವಜ್ಞ ಪೀಠದಲ್ಲಿ ಆಸೀನ

ಪ್ರಥಮ ಬಾರಿಗೆ ಉಡುಪಿ ಶ್ರೀಕೃಷ್ಣ ಮಠದ ಪೂಜಾ ಪರ್ಯಾಯ ಆರಂಭಿಸಿದ ಶೀರೂರು ವೇದವರ್ಧನ ತೀರ್ಥ ಶ್ರೀಪಾದರು ಉಡುಪಿ ಮಠದೊಳಗಿರುವ ಸ್ವರ್ಣ ಕವಚ ಲೇಪಿತ ಸರ್ವಜ್ಞ ಪೀಠದಲ್ಲಿ ಆಸೀನರಾಗಿರುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net