ವಿದ್ವಾನ್​ ವರದರಾಜ ಬಲ್ಲಾಳ್​ ನಿಧನ

ವಿದ್ವಾನ್​ ವರದರಾಜ ಬಲ್ಲಾಳ್​.
ವಿದ್ವಾನ್​ ವರದರಾಜ ಬಲ್ಲಾಳ್​.
Published on

* ಹಿಂದಿಯ 'ಕೃಷ್ಣಂ ವಂದೇ ಜಗದ್ಗುರುಂ' ಕನ್ನಡಕ್ಕೆ ಭಾಷಾಂತರ

ಉಡುಪಿ: ಸಾಹಿತಿ, ಲೇಖಕ, ಚಿಂತಕರು ಆಗಿದ್ದ ವಿದ್ವಾನ್​ ವರದರಾಜ ಬಲ್ಲಾಳ್​ (97) ಆ.12ರಂದು ಕಿದಿಯೂರಿನಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಉಡುಪಿಯ ಸಂಸ್ಕೃತ ಮಹಾ ಪಾಠಶಾಲೆಯಲ್ಲಿ 10 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ನಂತರ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ 37 ವರ್ಷ ಹಿಂದಿ ಭಾಷಾ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಪ್ರೊಫೆಸರ್​ ಆಗಿ ನಿವೃತ್ತರಾಗಿದ್ದರು. 
ಪ್ರೊ.ಜಿಡ್ಡು ಕೃಷ್ಣಮೂರ್ತಿ ಅವರ ಬರಹ ಹಾಗೂ ಯೋಗಾವಾಸಿಷ್ಟ್ಯ ಕುರಿತ ಉಪನ್ಯಾಸಗಳು ಬಾನುಲಿಯಲ್ಲಿ ಅನೇಕ ಬಾರಿ ಬಿತ್ತರಗೊಂಡಿದೆ. ಇದೇ ವಿಷಯವಾಗಿ 90ರ ದಶಕದಲ್ಲಿ ಬೆಂಗಳೂರಿನ ರಾಮಕೃಷ್ಣ ಆಶ್ರಮದಲ್ಲಿ ವಾರಗಳ ಉಪನ್ಯಾಸವೂ ನೆರವೇರಿತ್ತು. 
ಮುಂಬಯಿಯ ಘನಶ್ಯಾಮದಾಸ್​ ಬಿರ್ಲಾ ಬರೆದಿದ್ದ ಪ್ರಸಿದ್ಧ 'ಕೃಷ್ಣಂ ವಂದೇ ಜಗದ್ಗುರುಂ' ಹಿಂದಿ ಕೃತಿಯನ್ನು ಕನ್ನಡಕ್ಕೆ ಭಾಷಾಂತರಿಸಿದ್ದರು. ಇದು ಧಾರಾವಾಹಿಯಾಗಿ ಸುಗುಣಮಾಲಾ ಮಾಸಿಕದಲ್ಲಿ ಪ್ರಕಟವಾಗುತ್ತಿತ್ತು.
1994ರಲ್ಲಿ ಶಿರೂರು ಮಠದ ಕೀರ್ತಿಶೇಷ ಲಕ್ಷ್ಮೀವರ ತೀರ್ಥರು ತಮ್ಮ ದ್ವಿತೀಯ ಪರ್ಯಾಯದಲ್ಲಿ ವರದರಾಜ ಬಲ್ಲಾಳರಿಂದ ಉಪನ್ಯಾಸ ಆಯೋಜಿಸಿ ಅಭಿನಂದಿಸಿದ್ಧರು. ಉಡುಪಿ ಪೇಜಾವರ ಮಠದ ಕೀರ್ತಿಶೇಷ ವಿಶ್ವೇಶ ತೀರ್ಥರ ಸಹಪಾಠಿಯಾಗಿದ್ದ ಬಲ್ಲಾಳರನ್ನು ಶ್ರೀಪಾದರು ಸಮಾರಂಭವೊಂದರಲ್ಲಿ ವಿಶೇಷವಾಗಿ ಸನ್ಮಾನಿಸಿದ್ದರು. 
ಸುಗುಣಮಾಲಾ ಪತ್ರಿಕೆಯಲ್ಲಿ ಸಲ್ಲಿಸಿದ ಸೇವೆ ಗುರುತಿಸಿ ಪುತ್ತಿಗೆ ಮಠದ ಸುಗುಣೇಂದ್ರ ಶ್ರೀಗಳು ವರದರಾಜ ಅವರನ್ನು ಗೌರವಿಸಿದ್ದರು.
ಇತ್ತೀಚೆಗಷ್ಟೇ ಅದಮಾರು ಮಠದ ಕಿರಿಯ ಯತಿ ಈಶಪ್ರಿಯ ತೀರ್ಥರು ಬಲ್ಲಾಳರ ಸ್ವಗೃಹಕ್ಕೆ ತೆರಳಿ ಅಭಿನಂದಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net