ಉಡುಪಿಯ ಜೋಡುಕಟ್ಟೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿಯ ಗಣೇಶನ ಮೂರ್ತಿಗೆ ಸ್ವಾಗತ ಹಾಗೂ ಶೋಭಾಯಾತ್ರೆಗೆ ಡಾ.ಶಶಿಕಿರಣ್ ಉಮಾಕಾಂತ್ ಚಾಲನೆ ನೀಡಿದರು. ಯಶ್ಪಾಲ್ ಸುವರ್ಣ, ಡಾ.ರವಿರಾಜ್ ಆಚಾರ್ಯ, ಗಿರೀಶ್ ಅಂಚನ್, ಕೆ.ರಾಘವೇಂದ್ರ ಕಿಣಿ ಇತರರಿದ್ದರು.
Published on:
Copied
Follow Us
* ವೈದ್ಯಕೀಯ ಅಧೀಕ್ಷಕಡಾ.ಶಶಿಕಿರಣ್ ಉಮಾಕಾಂತ್ ಅನಿಸಿಕೆ
* 'ಉಡುಪಿಯ ರಾಜ' ಮಹಾಗಣಪನ ಶೋಭಾಯಾತ್ರೆಗೆ ಚಾಲನೆ
* ಕಡಿಯಾಳಿಯ 'ರಾಜ ದರ್ಬಾರ್'ನಲ್ಲಿ ವಿರಾಜಮಾನನಾದ ಗಣೇಶ
ಉಡುಪಿ: ಗಣೇಶೋತ್ಸವವು ಕೇವಲ ಧಾರ್ಮಿಕ ಕಾರ್ಯವಷ್ಟೇ ಅಲ್ಲ. ಬ್ರಿಟಿಷರ ದಾಸ್ಯದಿಂದ ದೇಶಕ್ಕೆ ಮುಕ್ತಿ ಕೊಡಿಸಿ ಸ್ವತಂತ್ರ ರಾಷ್ಟ್ರ ನಿರ್ಮಿಸಿದ ಇತಿಹಾಸ ಇದಕ್ಕಿದೆ. ಮನೆಗಳಲ್ಲಿ ಆಚರಿಸುತ್ತಿದ ಈ ಹಬ್ಬವನ್ನು ಸಾರ್ವಜನಿಕ ಗಣೇಶೋತ್ಸವವನ್ನಾಗಿಸಿ, ಜನರಲ್ಲಿ ಸ್ವಾತಂತ್ರ್ಯದ ಹೋರಾಟದ ಕಿಚ್ಚು ಹೆಚ್ಚಿಸಿದ್ದ ಬಾಲಗಂಗಾಧರ್ ತಿಲಕ್ ಅವರ ಕೊಡುಗೆ ಮರೆಯಲಾಗದು. ಎಲ್ಲರಲ್ಲಿ ಬಾಂಧವ್ಯ ಬೆಸೆಯುವ ಹಬ್ಬವಿದು ಎಂದು ಡಾ. ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಶಿಕಿರಣ್ ಉಮಾಕಾಂತ್ ತಿಳಿಸಿದರು.
ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ ವತಿಯಿಂದ ಉಡುಪಿ ಜೋಡುಕಟ್ಟೆಯ ಬಳಿ ಭಾನುವಾರ (ಸೆ.13) ಸಂಜೆ ಆಯೋಜಿಸಿದ್ದ 60ನೇ ವರ್ಷದ ಉತ್ಸವ ಹಾಗೂ ವಜ್ರಮಹೋತ್ಸವದ 'ಉಡುಪಿಯ ರಾಜ' ಮಹಾಗಣಪತಿಗೆ ಸ್ವಾಗತ ಹಾಗೂ ಬೃಹತ್ ಶೋಭಾಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ವಜ್ರಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಹಾಗೂ ಶಾಸಕ ಯಶ್ಪಾಲ್ ಸುವರ್ಣ ಶುಭಹಾರೈಸಿದರು.
ಸಮಿತಿ ಅಧ್ಯಕ್ಷ ಡಾ.ರವಿರಾಜ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಗಿರೀಶ್ ಅಂಚನ್, ಕೋಶಾಧಿಕಾರಿ ಕೆ. ಮಂಜುನಾಥ್ ಹೆಬ್ಬಾರ್, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ.ವಸಂತ್ ಭಟ್, ಉಪಾಧ್ಯೆ ಗೀತಾ ಶೇಟ್, ಕೋಶಾಧಿಕಾರಿ ಎಂ.ವಲ್ಲಭ್ ಭಟ್, ಮೆರವಣಿಗೆ ಸಮಿತಿ ಸಂಚಾಲಕ ದಿನೇಶ್ ಅಮೀನ್ ಉಪಸ್ಥಿತರಿದ್ದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ ಸ್ವಾಗತಿಸಿ, ಎಲ್ಲರೂ ಅನುಭವಿಸುತ್ತಿರುವ ಸಂಕಷ್ಟದೊಂದಿಗೆ ದೇಶಕ್ಕೆ ಎದುರಾಗಿರುವ ಎಲ್ಲ ಸಂಕಷ್ಟಗಳನ್ನೂ 'ಸಂಕಷ್ಟಹರ ಗಣಪ' ನಿವಾರಿಸಲಿ ಎಂದರು.
ಬೈಕ್ ಜಾಥಾ
ಮಹಿಳೆಯರೂ ಸೇರಿದಂತೆ ನೂರಾರು ಜನರು ಗಣಪನ ಮೆರವಣಿಗೆಯ ಮುಂಭಾಗದಲ್ಲಿ ಬೈಕ್ ಜಾಥಾ ನಡೆಸಿದರು. ಹೆಗಲಿಗೆ ಕೇಸರಿ ಶಾಲು, ಭಗವಾಧ್ವಜ ಹಿಡಿದು, ಶುಭ ವಾದ್ಯಗಳೊಂದಿಗೆ 'ಗಣಪತಿ ಬಪ್ಪಾ' ಜೈಕಾರ ಹಾಕುತ್ತ ಸಾಗಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಕಲ್ಸಂಕ ವೃತ್ತ ಮಾರ್ಗವಾಗಿ ಕಡಿಯಾಳಿ ಮಹಿಷಮರ್ಧಿನಿ ದೇವಾಲಯದ ಕಾತ್ಯಾಯಿನಿ ಮಂಟಪ ತಲುಪಿತು. ಶಿಲಾಮಯ ಮಾದರಿಯ 'ರಾಜ ದರ್ಬಾರ್'ನಲ್ಲಿ ವಿಘ್ನನಿವಾರಕನನ್ನು ಪ್ರತಿಷ್ಠಾಪಿಸಲಾಯಿತು.
ತಾಯಿ ಗೌರಿಯೊಂದಿಗೆ ಬಂದ ಸಂಕಷ್ಟಹರ ಗಣಪ
ಕಡಿಯಾಳಿಯ ಈ ಬಾರಿಯ ಗಣಪ ವಿಶಿಷ್ಟತೆ ಹೊಂದಿದೆ. ಬಹುತೇಕ ಎಲ್ಲ ಪೌರಾಣಿಕ ಚಿತ್ರ ಅಥವಾ ದೇವರ ಮೂರ್ತಿಗಳಲ್ಲೂ ನೋಡಿದಂತೆ ತಾಯಿ ಗೌರಿಯ ಎಡತೊಡೆಯ ಮೇಲೆ ಬಾಲಗಣಪ ಆಸೀನನಾಗಿರುತ್ತಾನೆ. ಆದರೆ, ತನ್ನ ತಾಯಿಯನ್ನೇ ಎಡತೊಡೆಯ ಮೇಲೆ ಕೂರಿಸಿಕೊಂಡ ಗಣಪನನ್ನು ಇಲ್ಲಿ ನಿರ್ಮಿಸಲಾಗಿದೆ. ಇದು ಬುದ್ಧ ಪುರಾಣದ ಪ್ರಕಾರ ವಿನಾಯಕನ 60ನೇ ಅಲಂಕಾರವಾಗಿದ್ದು, 'ಸಂಕಷ್ಟಹರ' ಗಣಪನಾಗಿದ್ದಾನೆ.