ಅಮೆರಿಕ ವಿವಿ ಉಪಕುಲಪತಿಯಾಗಿ ಡಾ. ಕೆ. ರಾಘವೇಂದ್ರ ಪೈ ನೇಮಕ

ಅಮೆರಿಕದ ವ್ಯಾಸ ಭಾರತೀ ತ್ರಿಯೋಗ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನೇಮಕಗೊಂಡ ಡಾ. ಕೆ. ರಾಘವೇಂದ್ರ ಪೈ.
ಅಮೆರಿಕದ ವ್ಯಾಸ ಭಾರತೀ ತ್ರಿಯೋಗ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನೇಮಕಗೊಂಡ ಡಾ. ಕೆ. ರಾಘವೇಂದ್ರ ಪೈ.
Published on

ಉಡುಪಿ ಕಾರ್ಕಳದ ಖ್ಯಾತ ಯೋಗಗುರು

* ಭಾರತದ ಜ್ಞಾನ ಪಸರಿಸುವ ಸಂಕಲ್ಪ

ಉಡುಪಿ: ಮೂಲತ; ಕಾರ್ಕಳದ ಖ್ಯಾತ ಯೋಗಗುರು ಡಾ. ಕೆ. ರಾಘವೇಂದ್ರ ಪೈ ಅವರು ಅಮೆರಿಕದ ವ್ಯಾಸ ಭಾರತೀ ತ್ರಿಯೋಗ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನೇಮಕಗೊಂಡಿದ್ದಾರೆ. ಈ ವಿಶ್ವವಿದ್ಯಾಲಯವು ಸನಾತನ ಧರ್ಮ, ಯೋಗ ಹಾಗೂ ವೇದ ಆಧಾರಿತ ಜ್ಞಾನ ಪರಂಪರೆಯ ಅಭಿವೃದ್ಧಿಗೆ ಸಮರ್ಪಿತವಾಗಿದೆ.
ಪ್ರಸ್ತುತ ಮೈಸೂರಿನಲ್ಲಿ ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನ ಸ್ಥಾಪಿಸಿ ಯೋಗ ಹಾಗೂ ದಾಸ ಸಾಹಿತ್ಯ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ತರಬೇತಿ ನೀಡುತ್ತಿದ್ದಾರೆ. "ಗಮನ ಯೋಗ ಸೂತ್ರಗಳು' ಹಾಗೂ "ಯೋಗ ವಿಶ್ವಕೋಶ' ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸಿದ್ಧ ಯೋಗಾಚಾರ್ಯರಾಗಿರುವ ಡಾ. ಪೈ ಅವರು ಭಾರತ ಹಾಗೂ ವಿದೇಶಗಳಲ್ಲಿ ಸಾವಿರಾರು ಯೋಗ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. 
ಧರ್ಮಸ್ಥಳದ ಎಸ್​ಡಿಎಂ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಲ್ಲಿ ಯೋಗ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ನವದೆಹಲಿ ಯೋಗ ಪ್ರಮಾಣೀಕರಣ ಮಂಡಳಿ (ಕೇಂದ್ರ ಸರ್ಕಾರದ ಆಯುಷ್​ ಸಚಿವಾಲಯ) ಸದಸ್ಯರಾಗಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್​ಇಪಿ) ಪಠ್ಯಕ್ರಮ ಸಮಿತಿಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಮೈಸೂರು ವಿವಿ ತತ್ವಶಾಸ್ತ್ರ ವಿಭಾಗದ ಸ್ವಾಮಿ ವಿವೇಕಾನಂದ ಅಧ್ಯಯನ ಪೀಠದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು, ಅವರ ಮಾರ್ಗದರ್ಶನದಲ್ಲಿ 13 ಮಂದಿ ಪಿಎಚ್​.ಡಿ ಗಳಿಸಿದ್ದಾರೆ.
ಕಾರ್ಕಳ ರಂಗನಾಥ ಪೈ ಹಾಗೂ ಶ್ರೀಮತಿ ರುಕ್ಮಾ ರಂಗನಾಥ ಪೈ ಅವರ ಪುತ್ರರಾದ ಅವರು, ಮೌಲ್ಯಾಧಾರಿತ ಶಿಕ್ಷಣ ಮತ್ತು ಯೋಗ ಪ್ರಸಾರದ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಶಿವಮೊಗ್ಗದ ಸರ್ಕಾರಿ ಮುಖ್ಯ ಮಾಧ್ಯಮಿಕ ಶಾಲೆಯಲ್ಲಿ, ಆಚಾರ್ಯ ತುಳಸಿ ನ್ಯಾಷನಲ್​ ಕಾಲೇಜ್​ ಆಫ್​ ಕಾಮರ್ಸ್​ನಲ್ಲಿ ವಾಣಿಜ್ಯ ವಿದ್ಯಾಭ್ಯಾಸ ಗಳಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಸಂಸತದಲ್ಲಿ ಎಂಎ ಪದವಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಸಾಹಿತ್ಯದಲ್ಲಿ ಡಾಕ್ಟರೇಟ್​ ಗಳಿಸಿದ್ದಾರೆ.
ಯೋಗ ಗುರು- ರಷ್ಯಾ, ಅಸ್ಥಾನ ಯೋಗಾಚಾರ್ಯ- ಶ್ರೀಕೃಷ್ಣ ಮಠ ಉಡುಪಿ, ಸ್ವಾಮಿ ವಿವೇಕಾನಂದ ನಾಯಕತ್ವ ಪ್ರಶಸ್ತಿ (ಶಿಕಾಗೋ, ಅಮೆರಿಕ), ಟೆನ್​ ಔಟ್​ಸ್ಟ್ಯಾಂಡಿಂಗ್​ ಯಂಗ್​ ಪರ್ಸನ್ಸ್​ ಆಫ್​ ಇಂಡಿಯಾ ಹಾಗೂ ಜೀವನ ಸಾಧನೆ ಪ್ರಶಸ್ತಿ (ಫ್ಲೋರಿಡಾ, ಅಮೆರಿಕ) ಸೇರಿದಂತೆ ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಗೌರವಗಳು ಲಭಿಸಿವೆ.
"

ವ್ಯಾಸ ಭಾರತೀ ತ್ರಿಯೋಗ ವಿಶ್ವವಿದ್ಯಾಲಯದ ಮೂಲಕ ಯೋಗ ಪ್ರಾಚಿನ ಭಾರತೀಯ ಜ್ಞಾನವನ್ನು ಆಧುನಿಕ ಶಿಕ್ಷಣ ವ್ಯವಸ್ಥೆಯೊಂದಿಗೆ ಸಂಯೋಜಿಸಿ, ಮಾನವಕುಲದ ಸಮಗ್ರ ಅಭಿವೃದ್ಧಿಗೆ ದಾರಿದೀಪವಾಗುವ ಶಿಕ್ಷಣ ವ್ಯವಸ್ಥೆ ರೂಪಿಸುವ ಸಂಕಲ್ಪ ಹೊಂದಿದ್ದೇನೆ. ಇದು ನಮ್ಮ ವಿಶ್ವವಿದ್ಯಾಲಯದ ಧ್ಯೇಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net