ಬೆಳಗ್ಗೆ 8.30ಕ್ಕೆ ಶಾರದಾ ಮಂಟಪದಿಂದ ಮೆರವಣಿಗೆ ಪ್ರಾರಂಭವಾಗುತ್ತದೆ. ನಂತರ ಧ್ವಜಾರೋಹಣ ನೆರವೇರಲಿದೆ. ಸಾಹಿತಿ ರಾಮದಾಸ್ ನೆನಪಿನ ಪುಸ್ತಕ ಮಳಿಗೆ, ಗಮಕ ಸೌರಭ, ಚಿತ್ರ ಕಲಾವಿದರಾದ ಆಸ್ಟ್ರೊಮೋಹನ್ ಹಾಗೂ ಜನಾರ್ದನ ಕೊಡವೂರು ಸಂಪಾದಿತ 'ಚಿತ್ರಮಯ ಉಡುಪಿ' ಪ್ರದರ್ಶನ ಹಾಗೂ ನಿತ್ಯಾನಂದ ನಾಯಕ್ ಅವರ ಮುರಲ್ ಕಲಾಕೃತಿಗಳ ಪ್ರದರ್ಶನದ ಬೆಳಗ್ಗೆ 10 ಗಂಟೆಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ ಸಮ್ಮೇಳನ ಉದ್ಘಾಟಿಸಲಿದ್ದಾರೆ. ವಿವಿಧ ಕ್ಷೇತ್ರದ ಸಾಧಕರಾದ ತಿಲಕನಾಥ್ ಮಂಜೇಶ್ವರ , ಗೋಪಾಲ್ ಭಟ್ ಎಂ, ವಿಮಲಾ ಚಂದ್ರಶೇಖರ್, ಮರವಂತೆ ನಾಗರಾಜ್ ಹೆಬ್ಬಾರ್, ಕೆ.ರಂಜನ್ , ಹರಿಶ್ಚಂದ್ರ, ಅ. ರಾ. ಪ್ರಭಾಕರ್ ಪೂಜಾರಿ, ವಿಘ್ನೇಶ್ವರ ಅಡಿಗ, ಪಿ.ಎಂ. ವೇಣು ಗೋಪಾಲ್ ಹೆಬ್ಬಾರ್, ಶ್ರೀಕಾಂತ್ ಭಟ್, ವಿದ್ಯಾಲತಾ ಯು. ಶೆಟ್ಟಿ ಇವರಿಗೆ ಕಸಾಪ ಉಡುಪಿ ತಾಲೂಕು ಗೌರವ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು. ಉಡುಪಿ ತಾಲೂಕಿನ ಎಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದ ಸುಮಾರು 50 ಮಂದಿ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು. 12 ಗಂಟೆಗೆ ಬಹುಮುಖಿ ಕನ್ನಡ ಕವಿ ಗೋಷ್ಠಿ ನಡೆಯಲಿದೆ. 1.15ಕ್ಕೆ 'ನೃತ್ಯ ಸಿಂಚನ ' ಕಾರ್ಯಕ್ರಮ, ನಂತರ ಸುಹಾಸಂ ಅಧ್ಯೆ ಸಂಧ್ಯಾ ಶೆಣೈ ಉಡುಪಿ ಇವರಿಂದ ಹಾಸ್ಯ ಸಮಯ 'ಆಪ್ತಮಿತ್ರರ ಕಚಗುಳಿ' ನಡೆಯಲಿದೆ. ಮಧ್ಯಾಹ್ನ 3:35 ಕ್ಕೆ ಸಮ್ಮೇಳನಾಧ್ಯಕ್ಷ ಡಾ.ಭಾಸ್ಕರಾನಂದ ಕುಮಾರ್ ಅವರೊಂದಿಗೆ ಮುಖಾಮುಖಿ ಚರ್ಚೆ ನಡೆಯಲಿದೆ. ಬನ್ನಂಜೆ ಸಂಜೀವ ಸುವರ್ಣ, ಮುರಳಿ ಕಡೆಕಾರ್, ಉದ್ಯಾವರ ನಾಗೇಶ್, ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಭಾಗವಹಿಸಲಿದ್ದಾರೆ.