ವೇದ 'ವರ್ಧನ'ಕ್ಕೆ ಸಂಕಲ್ಪ

ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಹಿನ್ನೆಲೆಯಲ್ಲಿ ಉಡುಪಿಯ ರಥಬೀದಿಯಲ್ಲಿರುವ ಶೀರೂರು ಮಠವನ್ನು ಸುಂದರವಾಗಿ ಅಲಂಕಾರಗೊಳಿಸಿರುವುದು.
ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಹಿನ್ನೆಲೆಯಲ್ಲಿ ಉಡುಪಿಯ ರಥಬೀದಿಯಲ್ಲಿರುವ ಶೀರೂರು ಮಠವನ್ನು ಸುಂದರವಾಗಿ ಅಲಂಕಾರಗೊಳಿಸಿರುವುದು.
Published on

* ಶೀರೂರು ಮಠಾಧಿಪತಿಯ ಪ್ರಥಮ ಪರ್ಯಾಯ 

* ಶ್ರೀಕೃಷ್ಣನಿಗೆ ಶಾಸ್ತ್ರಾನುಸಾರ ನಿತ್ಯ ಪಾರಾಯಣ

ಪ್ರಶಾಂತ ಭಾಗ್ವತ ಉಡುಪಿ
ಪೊಡವಿಗೊಡೆಯ ಉಡುಪಿ ಶ್ರೀಕೃಷ್ಣನ ಸೇವಾ ಕೈಂಕರ್ಯದ ಪರ್ಯಾಯಕ್ಕೆ ಶೀರೂರು ಮಠ ಅಣಿಯಾಗುತ್ತಿದೆ. ಶ್ರೀಮದ್​ ಆನಂದ ತೀರ್ಥ ಭಗವತ್ಪಾದರ, ವಾಮನ ತೀರ್ಥ ಪರಂಪರೆಯ, ಲಕ್ಷ್ಮೀವರ ತೀರ್ಥ ಶ್ರೀಪಾದರ ಉತ್ತರಾಧಿಕಾರಿ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯಕ್ಕೆ ದಿನಗಣನೆ ಆರಂಭಗೊಂಡಿದೆ. 
ಶೀರೂರು ಮಠದ 30ನೇ ಯತಿಗಳಾದ ವೇದವರ್ಧನ ಶ್ರೀಗಳು ಶ್ರೀಕಷ್ಣ ದೇವರ ಪೂಜಾ ಕೈಂಕರ್ಯವನ್ನು ಮಧ್ವಾಚಾರ್ಯರು ಅಳವಡಿಸಿದ್ದ ಸಂಪ್ರದಾಯ, ಶಾಸ್ತ್ರಾನುಸಾರದಂತೆ ನೆರವೇರಿಸಲು ಯೋಜಿಸಿದ್ದಾರೆ. ಅದಕ್ಕಾಗಿ ಮೂರು ವಿಶೇಷ ಸಂಕಲ್ಪ ಮಾಡಿದ್ದಾರೆ.

ನಿತ್ಯವೂ ವೇದ ಪಾರಾಯಣ

ದೇವರ ಸಹಜ ಪೂಜೆಗಿಂದ ಮಂತ್ರಪೂರಿತ ಪೂಜೆಗೆ ವಿಶೇಷ ಮಹತ್ವವಿದ್ದು, ಅದು ಶ್ರೇಷ್ಠವಾದುದಾಗಿದೆ. ಹೀಗಾಗಿ ಕೃಷ್ಣ ಮಠದಲ್ಲಿ ನಿತ್ಯವೂ ಮಂತ್ರಗಳ ಘೋಷ ಮೊಳಗಬೇಕಿದ್ದು, ವೇದಗಳ ಪಾರಾಯಣ ನಡೆಸುವುದು ಶಿರೂರು ಶ್ರೀಗಳ ಕೃಷ್ಣಾರಾಧನೆಯ ಮೊದಲ ಸಂಕಲ್ಪವಾಗಿದೆ. ಅದಕ್ಕಾಗಿ ಐದಾರು ವೇದ ಪಂಡಿತರು ಸೇರಿ ಗೋಷ್ಠಿ ಪಾರಾಯಣ ನಡೆಸಲಿದ್ದಾರೆ. ಬೆಳಗ್ಗೆ ಹಾಗೂ ಸಾಯಂಕಾಲದ ಅವಧಿ ಸೇರಿ ಒಟ್ಟು 8 ಗಂಟೆಗಳ ಕಾಲ ನಿತ್ಯ ವೇದ ಪಾರಾಯಣ ನಡೆಯಲಿದೆ. ಇದಕ್ಕಾಗಿ ನಿತ್ಯವೂ 1 ಲಕ್ಷ ರೂ. ವ್ಯಯವಾಗಲಿದೆ.

ಗುಣಮಟ್ಟದ ಕೃಷ್ಣಪ್ರಸಾದ ವಿತರಣೆ

ಉಡುಪಿ ಮಠಕ್ಕೆ ಬರುವ ಎಲ್ಲ ಸದ್ಭಕ್ತರಿಗೂ ಶ್ರೀಕೃಷ್ಣನ ಪ್ರಸಾದ ಲಭಿಸಬೇಕು ಎನ್ನುವುದು 2ನೇ ಪ್ರಮುಖ ಸಂಕಲ್ಪ. ಕೃಷ್ಣ ಪ್ರಸಾದಕ್ಕೆ ರುಚಿ ಬರುವುದು ಪ್ರೀತಿಯಿಂದ. ಎಲ್ಲ ಭಕ್ತರಿಗೂ ಪ್ರೀತಿಯಿಂದ ಗುಣಮಟ್ಟದ ಪ್ರಸಾದ ಭೋಜನ ಬಡಿಸಲಾಗುವುದು. ನೈವೇದ್ಯ ಮಾಡಿ ಅದಕ್ಕೆ ತುಳಸಿ ಹಾಗೂ ತೀರ್ಥ ಹಾಕಿ ನೀಡಿದ ಅನ್ನ ಪ್ರಸಾದ ಸೇವಿಸುವಾಗ ದೇವರ ನಾಮಸ್ಮರಣೆ ನಡೆಯಲಿದೆ. ಅದರಿಂದ ಪ್ರಸಾದ ಸೇವಿಸುವವರಿಗೆ ಕೋಟಿ ಯಜ್ಞ ಮಾಡಿದ ಪುಣ್ಯ ಲಭಿಸುತ್ತದೆ. ಹೀಗಾಗಿ ಅನ್ನದಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದು ಎನ್ನುತ್ತಾರೆ ವೇದವರ್ಧನ ಶ್ರೀಗಳು. 

ಮಠದ ಸುತ್ತ ಸ್ವಚ್ಛತೆ

ಶ್ರೀಕೃಷ್ಣ ಮಠ ಹಾಗೂ ಸುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವುದು 3ನೇ ಸಂಕಲ್ಪ. ಭಗವಂತನು ಸ್ವಚ್ಛತಾಪ್ರಿಯನಾಗಿದ್ದಾನೆ. ಹೀಗಾಗಿ 'ಮಡಿ'ಯ ಕಲ್ಪನೆ ಉಡುಪಿಯ ಬಿಟ್ಟು ಬೇರೆಲ್ಲೂ ಕಾಣಿಸದು. ಮಡಿ ಎಂದರೆ ಶುಚಿ, ಪರಿಶುದ್ಧ ಎಂದರ್ಥ. ಹೀಗಾಗಿ ಮಠದ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಶಿರೂರು ಮಠದ ಆದ್ಯತೆ&ಬದ್ಧತೆ ಆಗಿದೆ. ಇದಕ್ಕೆ ಉಡುಪಿಗೆ ಬರುವ ಎಲ್ಲ ಭಕ್ತರೂ ಸಹಕರಿಸಬೇಕು. ಸ್ವಚ್ಛತಾ ಕಾರ್ಯಕ್ಕಾಗಿ ಕನಿಷ್ಠ 10 ದಿನ ಸ್ವಯಂ ಪ್ರೇರಣೆಯಿಂದ ಸೇವಾಕರ್ತರಾಗಿ ಬರಬೇಕು. ಅವರಿಗೆಲ್ಲ ಮಠದ ವತಿಯಿಂದಲೇ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ದಿವಾನ ವಿದ್ವಾನ್​ ಡಾ. ಉದಯಕುಮಾರ್​ ಸರಳತ್ತಾಯ ತಿಳಿಸಿದ್ದಾರೆ.

ನಗರದೆಲ್ಲೆಡೆ ಸ್ವಾಗತ ಗೋಪುರ

ಶೀರೂರು ವೇದವರ್ಧನ ಶ್ರೀಪಾದರು ಪ್ರಥಮ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಲಿದ್ದು, ಪರ್ಯಾಯ ಮಹೋತ್ಸವದ ನಿಮಿತ್ತ ಉಡುಪಿ ನಗರವೂ ಅಲಂಕಾರಗೊಳ್ಳುತ್ತಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಅಲ್ಲಲ್ಲಿ ಸ್ವಾಗತ ಗೋಪುರ ನಿರ್ಮಿಸಲಾಗುತ್ತಿದೆ. ನಗರಸಭೆಯ ವತಿಯಿಂದ 50 ಲಕ್ಷ ರೂ. ಮೀಸಲು ಅನುದಾನದಲ್ಲಿ ವಿದ್ಯುತ್​ ದೀಪಾಲಂಕಾರ ಮಾಡಲಾಗುತ್ತಿದೆ. ಉಡುಪಿ ರಥಬೀದಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿದ್ಯುತ್​ ದೀಪಾಲಂಕಾರ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಕೇಸರಿ ಪತಾಕೆ ಅಳವಡಿಸಲಾಗುತ್ತಿದೆ. ಇಂದು (ಜ.9) ಶ್ರೀಗಳ ಪುರಪ್ರವೇಶದ ನಿಮಿತ್ತ ಕಡಿಯಾಳಿ ಸಮೀಪದ ಉಡುಪಿ ಸ್ಕೂಲ್​ ಬುಕ್​ ಸೆಂಟರ್​ ಎದುರಿನಲ್ಲಿ ವೇದಿಕೆ ನಿರ್ಮಿಸಲಾಗಿದ್ದು, ಇಲ್ಲಿ ಶೀರೂರು ಮಠದ ಪಟ್ಟದ ದೇವರನ್ನಿಟ್ಟು ಪೂಜಿಸಿದ ಬಳಿಕ ಮಧ್ಯಾಹ್ನ 3 ಗಂಟೆಗೆ ಶ್ರೀಗಳ ಮೆರವಣಿಗೆ ನಡೆಯಲಿದೆ.
"

ಶ್ರೀಕೃಷ್ಣನ ಪೂಜೆಗೆಂದೇ ಸರ್ವಸಂಗವನ್ನೂ ತ್ಯಾಗ ಮಾಡಿ, ಯತಿಯಾಗಿ ಸನ್ಯಾಸಾಶ್ರಮ ದೀಕ್ಷೆ ಸ್ವೀಕರಿಸಲಾಗಿದೆ. ನಮ್ಮ ಪರ್ಯಾಯದಲ್ಲಿ ಕಾಲಕಾಲಕ್ಕೆ ಶಾಸ್ತ್ರಾನುಸಾರವಾಗಿ ಶ್ರೀಕೃಷ್ಣನ ಪೂಜೆಗೆ ಪ್ರಥಮಾದ್ಯತೆ ನೀಡುತ್ತೇವೆ. ಭಗವಂತನಿಗೆ ವೇದಗಳೆಂದರೆ ಬಲುಪ್ರೀತಿ. ಹೀಗಾಗಿ ಸನಾತನ ಹಿಂದೂ ಧರ್ಮದ ಮೂಲಗ್ರಂಥವಾದ ವೇದಗಳ ಪಾರಾಯಣ ನಿತ್ಯವೂ ನಡೆಯಲಿದೆ. ಈ ಕಾರ್ಯದಿಂದ ಋಣಾತ್ಮಕ ಶಕ್ತಿ (ನೆಗೆಟಿವ್​ ಎನರ್ಜಿ) ನಾಶಗೊಂಡು ಧನಾತ್ಮಕ (ಪಾಸಿಟಿವ್​) ಶಕ್ತಿ ಉಂಟಾಗುತ್ತದೆ.

"

ಶೀರೂರು ವೇದವರ್ಧನ ಶ್ರೀಗಳ ಪ್ರಥಮ ಪರ್ಯಾಯ ಜ.18ರಂದು ಪ್ರಾತ:ಕಾಲ 5:45ರ ಶುಭಮುಹೂರ್ತದಲ್ಲಿ ಆರಂಭಗೊಳ್ಳಲಿದೆ. ಪ್ರಸ್ತುತ ಪರ್ಯಾಯ ಪುತ್ತಿಗೆ ಸುಗುಣೇಂದ್ರ ಶ್ರೀಗಳಿಮದ ಅಕ್ಷಯ ಪಾತ್ರೆ ಸ್ವೀಕರಿಸಿ, ಸರ್ವಜ್ಞ ಪೀಠಾರೋಹಣದೊಂದಿಗೆ ಶ್ರೀಮಧ್ವಾಚಾರ್ಯರ ಸತ್ಸಂಪ್ರದಾಯದಂತೆ ಶ್ರೀಕೃಷ್ಣದೇವರ ಪೂಜಾ ಕೈಂಕರ್ಯ ಪ್ರಾರಂಭಗೊಳ್ಳಲಿದೆ. ಶೀರೂರು ಪರ್ಯಾಯದ ಅವಧಿಯಲ್ಲಿ ನಿರಂತರ ಅನ್ನದಾನ, ಜ್ಞಾನಯಜ್ಞ, ಧಾರ್ಮಿಕ ಕಾರ್ಯಕ್ರಮ ವೈಭವದಿಂದ ನೆರವೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net