ಉಡುಪಿ ರೈಲು ನಿಲ್ದಾಣದಲ್ಲೂ ರಚಿಸಿ ಸುರಂಗ ಮಾರ್ಗ

ಉಡುಪಿ ರೈಲು ನಿಲ್ದಾಣದಲ್ಲಿ ಸುರಂಗ ಮಾರ್ಗ ರಚಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಉಡುಪಿ ರೈಲ್ವೆ ಯಾತ್ರಿ ಸಂಘದಿಂದ ಮನವಿ ಸಲ್ಲಿಸಲಾಯಿತು. ಧೀರಜ್ ಶಾಂತಿ, ಮಂಜುನಾಥ್ ಮಣಿಪಾಲ, ಎಸ್.ಎಸ್. ತೋನ್ಸೆ ಇದ್ದರು.
ಉಡುಪಿ ರೈಲು ನಿಲ್ದಾಣದಲ್ಲಿ ಸುರಂಗ ಮಾರ್ಗ ರಚಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಉಡುಪಿ ರೈಲ್ವೆ ಯಾತ್ರಿ ಸಂಘದಿಂದ ಮನವಿ ಸಲ್ಲಿಸಲಾಯಿತು. ಧೀರಜ್ ಶಾಂತಿ, ಮಂಜುನಾಥ್ ಮಣಿಪಾಲ, ಎಸ್.ಎಸ್. ತೋನ್ಸೆ ಇದ್ದರು.
Published on

* ಸಂಸದ ಕೋಟ ಪೂಜಾರಿಗೆ ಉಡುಪಿ ರೈಲ್ವೆ ಯಾತ್ರಿ ಸಂಘದಿಂದ ಮನವಿ

ಉಡುಪಿ: ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಸೇರಿದಂತೆ ಇನ್ನಿತರ ಮುಖ್ಯ ನಿಲ್ದಾಣಗಳಲ್ಲಿ ಇರುವಂತೆ ಉಡುಪಿ ರೈಲ್ವೆ ನಿಲ್ದಾಣದಲ್ಲಿಯೂ ಸುರಂಗ ಮಾರ್ಗ ರಚಿಸುವಂತೆ ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಧೀರಜ್ ಶಾಂತಿ ಆಗ್ರಹಿಸಿದ್ದಾರೆ.
ಉಡುಪಿಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಉಡುಪಿ ರೈಲ್ವೆ ಯಾತ್ರಿ ಸಂಘದ ವತಿಯಿಂದ ಮನವಿ ಸಲ್ಲಿಸಿ ಮಾತನಾಡಿ, ಉಡುಪಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಅದರಲ್ಲೂ ಹಿರಿಯ ನಾಗರಿಕರು ಮೇಲ್ಸೇತುವೆ ಹತ್ತಿ ಇನ್ನೊಂದು ಬದಿಯಲ್ಲಿ ಇಳಿದು ಫ್ಲಾಟ್ ಫಾರ್ಮ್ ಗೆ ಹೋಗಲು ಶ್ರಮಪಡುವಂತಾಗಿದೆ. ನಿಲ್ದಾಣದ ಪೂರ್ವ ದಿಕ್ಕಿನಲ್ಲಿರುವ ನಿವಾಸಿಗಳಿಗೆ, ಊರಿನವರಿಗೆ, ಪ್ರಸಿದ್ಧ ವಿದ್ಯಾಸಂಸ್ಥೆ ಹಾಗೂ ಚಿಕಿತ್ಸಾ ಕೇಂದ್ರ ಇರುವ ಮಣಿಪಾಲಕ್ಕೆ ಹೋಗಿ ಬರುವ ರೈಲ್ವೆ ಪ್ರಯಾಣಿಕರಿಗೆ ಭವಿಷ್ಯದಲ್ಲಿ ಹೆದ್ದಾರಿ ಜಂಜಡ ಇಲ್ಲದಂತಾಗುತ್ತದೆ ಎಂದು ತಿಳಿಸಿದರು.

ನಗರ ಸಾರಿಗೆ ಸೌಲಭ್ಯ

ಮೀನು ವ್ಯಾಪಾರಿಗಳು ತಮ್ಮ ಸರಕನ್ನು ನಿಲ್ದಾಣದ ಮುಖ್ಯದ್ವಾರದ ಮೂಲಕವೇ ಸಾಗಿಸುವುದರಿಂದ ಮೀನಿನ ನೀರು ಚೆಲ್ಲಿ ಉಂಟಾಗುವ ದುರ್ವಾಸನೆಯೂ ತಪ್ಪಲಿದೆ. ಉಡುಪಿ ರೈಲು ನಿಲ್ದಾಣದಿಂದ ನಿತ್ಯವೂ ಸಾವಿರಾರು ಪ್ರಯಾಣಿಕರು ಉಡುಪಿ ಶ್ರೀಕೃಷ್ಣ ಮಠಕ್ಕೆ, ಜಿಲ್ಲೆಯ ಐತಿಹಾಸಿಕ ಪ್ರವಾಸಿ ಹಾಗೂ ಧಾರ್ಮಿಕ ಕೇಂದ್ರಗಳಿಗೆ, ಆಸ್ಪತ್ರೆಗೆ ಹೋಗಿ ಬರುವವರ ಹಿತದೃಷ್ಟಿಯಿಂದ ರೈಲುಗಳು ಹೊರಹೋಗುವ ಮತ್ತು ಒಳಬರುವ ಸಮಯದಲ್ಲಿ ಉಡುಪಿ ನಿಲ್ದಾಣದಿಂದ ನಗರ ಸಾರಿಗೆ ವ್ಯವಸ್ಥೆಯನ್ನೂ ಸಹ ಶೀಘ್ರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ವೇಗದೂತ ನಿಲುಗಡೆಗೆ ಒತ್ತಾಯ

ಎರ್ನಾಕುಲಂ ಲೋಕಮಾನ್ಯ ತಿಲಕ್ ವೇಗದೂತ ರೈಲಿಗೆ ಉಡುಪಿ ನಿಲ್ದಾಣದಲ್ಲಿ ನಿಲುಗಡೆ ವ್ಯವಸ್ಥೆ ಆಗಬೇಕು. ನಂದಿಕೂರು-ಮೂಡಿಗೆರೆ ರೈಲು ಮಾರ್ಗದ ಸಮೀಕ್ಷಾ ವರದಿಯನ್ನು ರೈಲ್ವೆ ಮಂಡಳಿ 2025 ರಲ್ಲಿಯೇ ಸಲ್ಲಿಸಿದ್ದರೂ ಸಹ  ಸಚಿವಾಲಯ ಕೈಬಿಟ್ಟಿರುವ ಕುರಿತು,  ಕೊಂಕಣ ರೈಲ್ವೆಯನ್ನು ರೈಲ್ವೆ ಇಲಾಖೆಗೆ ವಿಲೀನಗೊಳಿಸಲು ಆಗುತ್ತಿರುವ ವಿಳಂಬದ ವಿಚಾರವಾಗಿಯೂ ಸಂಸದರೊಂದಿಗೆ ಚರ್ಚೆ ನಡೆಸಲಾಯಿತು. ಕೊಂಕಣ ರೈಲು ಮಾರ್ಗ ರಚನೆಗೆ ಕಾರಣೀಕರ್ತರಾದ ಮಾಜಿ ರೈಲ್ವೆ ಸಚಿವ ಜಾರ್ಜ್ ಫರ್ನಾಂಡಿಸ್ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಸಂಘದ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ ಕಾರ್ಯಕಾರಿ ಸಮಿತಿಯ ಸದಸ್ಯ ಎಸ್.ಎಸ್. ತೋನ್ಸೆ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net