

ಜನರ ಮನದಲ್ಲಿ ಭಗವದ್ಗೀತೆಯ ಸಂದೇಶ ಸದಾ ಉಳಿಯುವಂತಾಗಬೇಕು ಎನ್ನುವುದೇ ವಿಶ್ವಗಿತಾ ಪರ್ಯಾಯದ ವಿಶೇಷ. ನಿರಂತರ 17 ಬಾರಿ ವಿಶ್ವ ಶಾಂತಿ ಸಮ್ಮೇಳನದ ಅಧ್ಯಕ್ಷರಾದ ಶ್ರೀಗಳು ಭಗವದ್ಗೀತೆಯಿಂದಲೇ ವಿಶ್ವಕ್ಕೆ ಶಾಂತಿ ನೆಲೆಸಲು ಸಾಧ್ಯ ಎನ್ನುವುದನ್ನು ಪ್ರತಿಪಾದಿಸಿದ್ದಾರೆ. 2024-26ರ ಪುತ್ತಿಗೆ ಮಠದ ಪರ್ಯಾಯದಲ್ಲಿ ನಿರಂತರ ಕೃಷ್ಣಸೇವಾ ಕಾರ್ಯಕ್ರಮ ನಡೆದಿದೆ. ಎರಡು ವರ್ಷ ಕಳೆದದ್ದು ತಿಳಿಯದ ರೀತಿಯಲ್ಲಿ, ಕೇವಲ ಎರಡೇ ದಿನದಲ್ಲಿ ಪರ್ಯಾಯ ಮುಗಿದ ಅನುಭವ ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮ ಮರೆಯಲಾಗದು. ಪುತ್ತಿಗೆ ಪರ್ಯಾಯದಲ್ಲಿ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಎಲ್ಲ ಬಗೆಯ ಧಾರ್ಮಿಕ ಕಾರ್ಯಕ್ರಮ ನಡೆದು ಭಕ್ತರಿಗೂ ಕೃಷ್ಣಪ್ರಜ್ಞೆ ಮೂಡಿಸಿದೆ. ಅಮೆರಿಕ, ಜಪಾನ್, ಜರ್ಮನ್, ಆಸ್ಟ್ರೆಲಿಯಾ ಹಾಗೂ ಇನ್ನಿತರ ದೇಶಗಳಿಂದಲೂ ಅನೇಕ ಗಣ್ಯರು ಪಾಲ್ಗೊಂಡಿದ್ದು ಇನ್ನೊಂದು ವಿಶೇಷ. ನಮ್ಮ ಪರ್ಯಾಯದ ಉದ್ದೇಶವೆಲ್ಲವನ್ನೂ ಶ್ರೀಕೃಷ್ಣ ಈಡೇರಿಸಿದ್ದು, ಭಕ್ತರಿಗೆ ನಿತ್ಯವೂ ಅನುಗ್ರಹಿಸಿಲಿ ಎಂದು ಹಾರೈಸುತ್ತೇವೆ.
ಪೂಜ್ಯ ಶ್ರೀಪಾದರ ಜತೆಯಲ್ಲಿ ಬಾಲ್ಯದಿಂದಲೂ ಇದ್ದುಕೊಂಡು, ಸ್ವಯಂ ಸೇವಕನ ರೀತಿಯಲ್ಲಿ ತಳಹಂತದಿಂದ ಮಠದ ಎಲ್ಲ ಕೆಲಸ ಮಾಡುತ್ತ ಅಂತಾರಾಷ್ಟ್ರೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವ ಅವಕಾಶ ಲಭಿಸಿದೆ. ಯಾವುದೇ ಕೆಲಸ ಪರಿಪೂರ್ಣವಾಗಿ ಮಾಡುವ ವಿಶೇಷತೆ ಶ್ರೀಗಳಲ್ಲಿ ಕಂಡಿದ್ದೇನೆ. ಉತ್ತಮ ಕಾರ್ಯ ಮಾಡಿ ಅದು ಜನರಿಗೆ ಪ್ರಯೋಜನ ಆಗಬೇಕೆನ್ನುವುದು ಅವರ ಬದ್ಧತೆ. ಯಾವುದೇ ಕೆಲಸ ಮಾಡಿದರೂ ಅದು ಒಂದೆರಡು ದಿನ, ವರ್ಷಕ್ಕೆ ಸೀಮಿತವಾಗದೆ ನೂರು ವರ್ಷ, ಐನೂರು ವರ್ಷ ಪ್ರಯೋಜನ ಆಗಬೇಕೆನ್ನುವುದು ಅವರ ಸದಿಚ್ಛೆ. ಶ್ರೀಗಳು ವಿದೇಶ ಪ್ರವಾಸ ಮಾಡಿದಾಗ ತುಂಬ ವಿರೋಧವಾಯಿತು. ಆದರೆ, ಜಗದ್ಗುರುವಾದ ಶ್ರೀಕೃಷ್ಣನ ಸಂದೇಶವನ್ನು ವಿದೇಶಗಳಲ್ಲೂ ಪಸರಿಸಬೇಕು ಎಂಬ ಅವರ ಸಂಕಲ್ಪಕ್ಕೆ ಭಗವಂತನೂ ಅನುಗ್ರಹಿಸಿದ್ದಾನೆ. ಅವರು ಛಲವಾದಿ, ಪರಿಪೂರ್ಣವಾದಿ. ವಿದೇಶದಲ್ಲಿರುವ ಭಾರತೀಯರಿಗೂ ಕೃಷ್ಣಪ್ರಜ್ಞೆ ಮೂಡಿಸಬೇಕೆಂಬ ಅವರ ಸಂಕಲ್ಪ ಈಡೇರಿಕೆ ಸುಲಭವಾಗಿರಲಿಲ್ಲ. ಅಲ್ಲಿಯ ಕಾನೂನು, ಹಣಕಾಸು ನಿರ್ವಹಣೆ, ಜಾಗ ಖರೀದಿ ಎಲ್ಲವೂ ಕ್ಲಿಷ್ಟಕರವಾಗಿತ್ತು. ಆದರೆ, ಹಿಡಿದ ಕಾರ್ಯ ಮುಗಿಸುವವರೆಗೂ ಅವರು ಬಿಡುವವರಲ್ಲ. ಗುರುವೇ ಶಿಷ್ಯರಿದ್ದ ಕಡೆ ತೆರಳಿ ಪಾಠ ಮಾಡಬೇಕೆಂಬ ಹಠದಿಂದಾಗಿ ವಿದೇಶಗಳಲ್ಲಿ 15 ಮಠ ಸ್ಥಾಪನೆಯಾಗಿದೆ. ಉಡುಪಿಯಲ್ಲಿ ಶ್ರೀಕೃಷ್ಣನ ಆರಾಧನೆ ಮಾಡುವ ರೀತಿಯಲ್ಲೇ ವಿದೇಶದಲ್ಲಿರುವ ಪುತ್ತಿಗೆ ಮಠಗಳಲ್ಲೂ ನಿತ್ಯಪೂಜೆ, ಅನ್ನ ಪ್ರಸಾದ ನೀಡಲಾಗುತ್ತಿದೆ. ವಿದೇಶದಲ್ಲಿ ಮನೆ ನಿರ್ಮಿಸುವವರೂ ಸಹ ಈಗ ಮಠದ ಸಮೀಪದಲ್ಲೇ ಇರಲು ಯೋಚಿಸುತ್ತಿದ್ದಾರೆ. ಇದು ಶ್ರೀಗಳ ಕಾರ್ಯದಿಂದ ಆಗಿರುವ ಬದಲಾವಣೆ.