ಎನ್​ಸಿಐಎಸ್​ಎಂ ವ್ಯಾಪ್ತಿಗೆ ಸೇರ್ಪಡಿಸಿ ನ್ಯಾಚುರೋಪಥಿ, ಯೋಗ

ಕೋಟ ಶ್ರೀನಿವಾಸ ಪೂಜಾರಿ.
ಕೋಟ ಶ್ರೀನಿವಾಸ ಪೂಜಾರಿ.
Published on

* ಸಂಸದ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ

* ಕೇಂದ್ರ ಸರ್ಕಾರ, ರಾಜ್ಯ ಖಾತೆ ಸಚಿವರಿಗೆ ಪತ್ರ 

ಉಡುಪಿ: ನ್ಯಾಚುರೋಪಥಿ ಮತ್ತು ಯೋಗ ವೈದ್ಯಕೀಯ ಪದ್ಧತಿಯನ್ನು ನ್ಯಾಷನಲ್​ ಕಮಿಷನ್​ ಫಾರ್​ ಇಂಡಿಯನ್​ ಸಿಸ್ಟಮ್​ ಆಫ್​ ಮೆಡಿಸಿನ್​ (ಎನ್​ಸಿಐಎಸ್​ಎಂ)ನ ವ್ಯಾಪ್ತಿಗೆ ಒಳಪಡಿಸುವಂತೆ ಹಾಗೂ ಶಿಕ್ಷಣ ಹಾಗೂ ಕ್ಲಿನಿಕಲ್​ ಅಭ್ಯಾಸಕ್ಕೆ ರಾಷ್ಟ್ರಮಟ್ಟದ ನಿಯಂತ್ರಣ ವ್ಯವಸ್ಥೆ ಜಾರಿಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಆಯುಷ್​ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಪ್ರತಾಪ್​ ರಾವ್​ ಜಿ. ಜಾಧವ್​ ಅವರಿಗೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ ಸಲ್ಲಿಸಿದ್ದಾರೆ.
ಭಾರತೀಯ ನ್ಯಾಚುರೋಪಥಿ ಮತ್ತು ಯೋಗ ಪದವೀಧರ ವೈದ್ಯಕೀಯ ಸಂಘ ಸಲ್ಲಿಸಿದ ಮನವಿ ಆಧಾರದಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಏಕರೂಪ ಶಿಕ್ಷಣ ವ್ಯವಸ್ಥೆ

ದೇಶದ ಪ್ರಸ್ತುತ 22 ರಾಜ್ಯಗಳಲ್ಲಿ ಬಿಎನ್​ವೈಎಸ್​ ಪದವೀಧರರಿಗೆ ವೈದ್ಯಕೀಯ ನೋಂದಣಿ ದೊರೆಯುತ್ತಿದ್ದು, 92 ಯೋಗ ಮತ್ತು ನ್ಯಾಚುರೋಪಥಿ ವೈದ್ಯಕೀಯ ಕಾಲೇಜು ಕಾರ್ಯ ನಿರ್ವಹಿಸುತ್ತಿವೆ. ಈ ಎರಡೂ ಶಿಕ್ಷಣವನ್ನು ಎನ್​ಸಿಐಎಸ್​ಎಂ ವ್ಯವಸ್ಥೆಗೆ ಸೇರ್ಪಡೆಗೊಳಿಸಿದರೆ ದೇಶಾದ್ಯಂತ ಏಕರೂಪ ಶಿಕ್ಷಣ ಮಾನದಂಡ ಜಾರಿಗೆ ಬರಲಿದೆ. ಅಲ್ಲದೆ, ಬಿಎನ್​ವೈಎಸ್​ ಪದವೀಧರರಿಗೆ ರಾಷ್ಟ್ರಮಟ್ಟದಲ್ಲಿ ವೈದ್ಯಕೀಯ ನೋಂದಣಿಗೆ ಅವಕಾಶ ಲಭಿಸುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಆಯುರ್ವೇದ, ಯುನಾನಿ, ಸಿದ್ಧ, ಹೋಮಿಯೋಪಥಿ ಹಾಗೂ ಸೋವಾ-ರಿಗ್ಪಾ ಪದ್ಧತಿಗಳ ಸಮಾನ ಸ್ಥಾನಮಾನವೂ ಲಭ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ನ್ಯಾಚುರೋಪಥಿ ಮತ್ತು ಯೋಗ ವೈದ್ಯಕೀಯ ಪದ್ಧತಿಯನ್ನು ಶೀಘ್ರವಾಗಿ ಎನ್​ಸಿಐಎಸ್​ಎಂ ವ್ಯಾಪ್ತಿಗೆ ಸೇರ್ಪಡಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net