ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಪಾರ್ಕಿಂಗ್​ ನೀತಿ ಸರಿಪಡಿಸಿ

ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ.
Published on

* ಉಡುಪಿ ಸಂಸದ ಕೋಟ ಪೂಜಾರಿ ಒತ್ತಾಯ

* ಪರಿಶೀಲಿಸುವಂತೆ ಪ್ರಾಧಿಕಾರಕ್ಕೆ ಪತ್ರ

ಉಡುಪಿ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿಗಳಿಗೆ ಸಂಬಂಧಿಸಿದ ಪಾರ್ಕಿಂಗ್​ ನೀತಿ ಹಾಗೂ ಟ್ಯಾಕ್ಸಿ ಚಾಲಕರ ನ್ಯಾಯಸಮ್ಮತ ಬೇಡಿಕೆ ಈಡೇರಿಸುವಂತೆ ಅದಾನಿ ಪವರ್​ ಲಿಮಿಟೆಡ್​ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್​ ಆಳ್ವ ಅವರಿಗೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ. 
ಉಡುಪಿ ಜಿಲ್ಲಾ ಟ್ಯಾಕ್ಸಿಮನ್ಸ್​ ಮತ್ತು ಮ್ಯಾಕ್ಸಿಕ್ಯಾಬ್​ ಅಸೋಸಿಯೇಷನ್​ ಜು.14ರಂದು ತಮಗೆ ಮನವಿ ಸಲ್ಲಿಸಿದ್ದು, ಈ ವಿಷಯವನ್ನು ವಿಮಾನ ನಿಲ್ದಾಣದ ಆಡಳಿತ ಮಂಡಳಿಯೊಂದಿಗೆ ಸಮಾಲೋಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲಿನ ನಿಲ್ದಾಣದಲ್ಲಿ ಖಾಸಗಿ ವಾಹನಗಳಿಗೆ ನೀಡಿರುವಂತೆ ಟ್ಯಾಕ್ಸಿ ವಾಹನಗಳಿಗೂ ಕನಿಷ್ಠ 10 ನಿಮಿಷಗಳ ಉಚಿತ ಪ್ರವೇಶ ಸೌಲಭ್ಯ ಕಲ್ಪಿಸಬೇಕು. ಅಲ್ಲದೆ, ಟ್ಯಾಕ್ಸಿಗಳ ವಿರುದ್ಧ ಜಾರಿಯಲ್ಲಿರುವ ತಾರತಮ್ಯದ ನಿಯಮಗಳನ್ನೂ ರದ್ದುಪಡಿಸಬೇಕು. ನ್ಯಾಯಯುತವಾಗಿ ಸಮಾನ ಪಾರ್ಕಿಂಗ್​ ನೀತಿ ಜಾರಿ, ಟ್ಯಾಕ್ಸಿ ಸಂಘಟನೆಗಳೊಂದಿಗೆ ಸಮಾಲೋಚಿಸಿ ಶಾಶ್ವತ ಮತ್ತು ಪರಸ್ಪರ ಒಪ್ಪಿಗೆಯ ಪರಿಹಾರ ರೂಪಿಸುವಂತೆ ಟ್ಯಾಕ್ಸಿ ಸಂಘಟನೆಗಳು ಬೇಡಿಕೆ ಸಲ್ಲಿಸಿವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ನೂರಾರು ಟ್ಯಾಕ್ಸಿ ಚಾಲಕರ ಜೀವನೋಪಾಯ ಮತ್ತು ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ಸಂಬಂಧಪಟ್ಟ ಅಧಿಕಾರಿಗಳು ಮಾನವೀಯ ದೃಷ್ಟಿಯಿಂದ ಕ್ರಮ ಕೈಗೊಂಡು ಈ ಸಮಸ್ಯೆ ಬಗೆಹರಿಸುವಂತೆ ಸಂಸದ ಕೋಟ ಪೂಜಾರಿ ವಿನಂತಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net