ಆಗುಂಬೆ ಘಾಟ್​ ದುರಸ್ತಿಗೆ 15 ಕೋಟಿ ರೂ. ಮಂಜೂರು

ಅರಣ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಭೂಕುಸಿತವಾಗುತ್ತಿರುವ ಆಗುಂಬೆ ಘಾಟ್​ಗೆ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಪರಿಶೀಲಿಸಿದರು. ರೂಪೇಶ್​ ಚವ್ಹಾಣ, ಚಿದಾನಂದಪ್ಪ, ನವೀನ್​, ಶಶಿಧರ್​ ಜೋಯಿಸ್​ ಇದ್ದರು.
ಅರಣ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಭೂಕುಸಿತವಾಗುತ್ತಿರುವ ಆಗುಂಬೆ ಘಾಟ್​ಗೆ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಪರಿಶೀಲಿಸಿದರು. ರೂಪೇಶ್​ ಚವ್ಹಾಣ, ಚಿದಾನಂದಪ್ಪ, ನವೀನ್​, ಶಶಿಧರ್​ ಜೋಯಿಸ್​ ಇದ್ದರು.
Published on

* ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ

* ಅಧಿಕಾರಿಗಳೊಂದಿಗೆ ಭೂಕುಸಿತ ಸ್ಥಳ ವೀಕ್ಷಣೆ

ಉಡುಪಿ: ಆಗುಂಬೆ ಘಾಟ್​ನಲ್ಲಿ ಸಂಭವಿಸುತ್ತಿರುವ ಭೂಕುಸಿತ ತಡೆಗಾಗಿ ಅಲ್ಲಿನ ರಸ್ತೆ ತಿರುವುಗಳ ದಂಡೆಗಳಲ್ಲಿ ಸಾವಿರ ಮೀಟರ್​ನಷ್ಟು ಜಾಗದಲ್ಲಿ ತಡೆಬೇಲಿ ನಿರ್ಮಿಸಲು ಸೂಚಿಸಲಾಗಿದೆ. ಅಲ್ಲದೆ, ಘಾಟ್​ ರಸ್ತೆ ದುರಸ್ತಿಗೆ ಕೇಂದ್ರ ಸರ್ಕಾರದಿಂದ (ಸಿಆರ್​ಐಎಫ್​ ನಿಂದ) 15 ಕೋಟಿ ರೂ. ಮಂಜೂರಾತಿ ದೊರೆತಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದರು.
ಆಗುಂಬೆ ಘಾಟ್​ನಲ್ಲಿ ವಾಹನಗಳ ಒತ್ತಡದಿಂದ ಸಂಚಾರ ಸಿಕ್ಕು, ಕೆಲವು ತಿರುವಿನ ದಂಡೆಗಳ ಕುಸಿತದ ಬಗ್ಗೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಅರಣ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಆಗುಂಬೆ ಘಾಟ್​ಗೆ ಮಂಗಳವಾರ (ಜೂ.8) ಭೇಟಿ ನೀಡಿ ರಸ್ತೆ ತಿರುವುಗಳ ವೀಕ್ಷಣೆ ನಡೆಸಿ ಮಾತನಾಡಿದರು.

ಮಳೆಗಾಲದ ಬಳಿಕ ಕಾಮಗಾರಿ

ಸನಿಹದ ಹುಲಿಕಲ್​ ಘಾಟ್​ನಲ್ಲಿ ವಾಹನ ನಿರ್ಬಂಧವಿದ್ದುದರಿಂದ ಆಗುಂಬೆ ಘಾಟ್​ನಲ್ಲಿ ಅತಿಯಾದ ವಾಹನ ದಟ್ಟಣೆ ಆಗುತ್ತಿದೆ. ಅಲ್ಲದೆ, ನಿರ್ಬಂಧವಿದ್ದರೂ ಜಲ್ಲಿಕಲ್ಲು ಸಾಗಿಸುವ ಲಾರಿಗಳು ಮತ್ತು ಭಾರಿ ತೂಕದ ವಾಹನಗಳ ಸಂಚಾರದಿಂದ ಇಲ್ಲಿನ ತಿರುವುಗಳಲ್ಲಿ ಭೂಕುಸಿತ ಸಂಭವದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಕೋಟ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ತುರ್ತಾಗಿ ತಿರುವಿನ ದಂಡೆಗಳಲ್ಲಿ ತಡೆಬೇಲಿ ನಿರ್ಮಿಸಲಾಗುವುದು. ಮಳೆಗಾಲ ಮುಗಿದ ಬಳಿಕ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಪ್ರಸ್ತಾವನೆ ಸಲ್ಲಿಸಿ
ಭಾರಿ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ನಿರ್ಬಂಧಿಸದಿದ್ದರೆ ಮಳೆಗಾಲದಲ್ಲಿ ಘಾಟ್​ ಕುಸಿಯುವ ಅಪಾಯವಿದ್ದು, ಅವರಿಗೆ ಅಗತ್ಯ ಸಲಹೆ ನೀಡಬೇಕು ಎಂದು ಹೆದ್ದಾರಿ ಅಧಿಕಾರಿಗಳು ಈ ವೇಳೆ ವಿನಂತಿಸಿದರು. ರಸ್ತೆ ದ್ವಿಪಥವಾಗಬೇಕಿದ್ದರೆ 8ನೇ ತಿರುವಿನ ನಂತರದ ಮೇಲ್ಭಾಗದಲ್ಲಿ ಅರಣ್ಯ ಇಲಾಖೆಯ ಅನುಮತಿ ಪಡೆಯಲು ಸರಳ ಆ್ಯಪ್​ನಲ್ಲಿ ಪ್ರಸ್ತಾವನೆ ಸಲ್ಲಿಸಿ ಎಂದು ಅಧಿಕಾರಿಗಳಿಗೆ ಸಂಸದ ಕೋಟ ಸೂಚಿಸಿದರು.
ಆಗುಂಬೆ ವನ್ಯಜೀವಿ ವಲಯದ ಅಮಾಸೆಬೈಲು ಅರಣ್ಯಾಧಿಕಾರಿ ರೂಪೇಶ್​ ಚವ್ಹಾಣ, ಸೋಮೇಶ್ವರ ವನ್ಯಜೀವಿ ವಲಯದ ಹೆಬ್ರಿ ಅರಣ್ಯಾಧಿಕಾರಿ ಚಿದಾನಂದಪ್ಪ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕಾರ್ಯಪಾಲಕ ಅಭಿಯಂತ ನವೀನ್​ ಮತ್ತು ಸಹಾಯಕ ಶಶಿಧರ್​ ಜೋಯಿಸ್​ ಉಪಸ್ಥಿತರಿದ್ದರು.

ಎರಡು ವಾರದಲ್ಲಿ ಮುಗಿಸಿ ಟೆಂಡರ್​ ಪ್ರಕ್ರಿಯೆ

ಆಗುಂಬೆ ಘಾಟ್​ನಲ್ಲಿ ಭೂಕುಸಿತ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಸ್ತಾವನೆಯಂತೆ ಸುರಂಗ ಮಾರ್ಗ ಮತ್ತು ಈಗಿರುವ ರಸ್ತೆಗಳ ದ್ವಿಪಥದ ಬಗ್ಗೆ ಡಿಪಿಆರ್​ಗಾಗಿ ಟೆಂಡರ್​ ಕರೆಯಲಾಗಿದೆ. ಸಾಧ್ಯತಾ ವರದಿ ಅವಲಂಬಿಸಿ ಎರಡು ವಾರದಲ್ಲಿ ಟೆಂಡರ್​ ಪ್ರಕ್ರಿಯೆ ಮುಗಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ವಿಭಾಗೀಯ ಅಧಿಕಾರಿ ಶ್ರೀಧರ್​ ಅವರಿಗೆ ಸಂಸದ ಕೋಟ ದೂರವಾಣಿ ಮೂಲಕ ಸಲಹೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net