ಉಡುಪಿ: ಕರಾವಳಿ, ಮಲೆನಾಡು ಸೇರಿದಂತೆ ಕರ್ನಾಟಕ ರಾಜ್ಯದ ಅಡಿಕೆ ಬೆಳೆಗಾರರು ವಿದೇಶಿ ಅಡಿಕೆ ಆಮದು ಸಮಸ್ಯೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ನೆರವಿಗೆ ಕೇಂದ್ರ ಸರ್ಕಾರ ಬರಬೇಕೆಂದು ಉಡುಪಿ-& ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ದೆಹಲಿಯಲ್ಲಿ ನಡೆದ ಸಂಸತ್ ಸದನದಲ್ಲಿ ಮಂಗಳವಾರ (ಆ.4) ನಿಯಮ 377ರಡಿ ಪ್ರಸ್ತಾಪಿಸಿದರು.
ಇಂಡೋನೇಷಿಯಾ, ಮಯನ್ಮಾರ್, ಶ್ರೀಲಂಕಾ ಮತ್ತು ಬಾಂಗ್ಲಾ ದೇಶಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಕಳಪೆ ಗುಣಮಟ್ಟದ ಅಡಿಕೆಗಳು ಭಾರತಕ್ಕೆ ಆಮದಾಗುತ್ತಿದೆ. ಅದನ್ನು ನಿಯಂತ್ರಿಸದಿದ್ದರೆ ನಮ್ಮ ಅಡಿಕೆ ಬೆಳೆಗಾರರಿಗೆ ಸಂಕಷ್ಟ ಉಂಟಾಗುತ್ತೆ ಎಂದು ಗಮನ ಸೆಳೆದರು.
ನಮ್ಮ ಗುಣಮಟ್ಟಕ್ಕೆ ಕಳಂಕ
ವಿದೇಶದಿಂದ ಬರುವ ಅಡಿಕೆ ಕಸ್ಟಮ್ಸ್ ಸುಂಕ ತಪ್ಪಿಸಲು ಹುರಿದ ಅಡಿಕೆ ಎಂದು ನಮೂದಿಸಿ ಭಾರತಕ್ಕೆ ಬರುತ್ತಿವೆ ಎಂದು ದೇಸೀಯ ಅಡಿಕೆ ಬೆಳೆಗಾರರು ದೂರಿದ್ದಾರೆ. ವಿದೇಶಿ ಅಡಿಕೆಗಳು ಸುಂಕ ತಪ್ಪಿಸಿ ಅಮದು ಆಗುವುದನ್ನು ನಿಲ್ಲಿಸದಿದ್ದರೆ ಕರ್ನಾಟಕವೂ ಸೇರಿದಂತೆ ದೇಶದಲ್ಲಿ ಬೆಲೆ ಕುಸಿದು ಅಡಿಕೆ ಬೆಳೆಗಾರರಿಗೆ ಭಾರಿ ಆರ್ಥಿಕ ನಷ್ಟ ಆಗಲಿದೆ. ದೇಶಿ ಅಡಿಕೆಯ ಚಾಲಿ ಮತ್ತು ರಾಶಿಯಂತಹ ಪ್ರಭೇದಗಳೊಂದಿಗೆ ಕಳಪೆ ಅಡಿಕೆ ಬೆರೆಸಿ ಮಾರುಕಟ್ಟೆಗೆ ಬರುತ್ತಿರುವುದು ಅಡಿಕೆಯ ಗುಣಮಟ್ಟದ ಖ್ಯಾತಿಗೆ ಕಳಂಕ ತರಲಿದೆ ಎಂದರು.
ಸಿಬಿಐಸಿ ಲೆಕ್ಕಪರಿಶೋಧನೆಯಾಗಲಿ
ಬಂದರುಗಳಲ್ಲಿ ಆಮದಾಗುತ್ತಿರುವ ಅಡಿಕೆಗಳನ್ನು ತೀವ್ರ ಪರಿಶೀಲನೆಗೆ ಒಳಪಡಿಸಬೇಕು. ಈ ಹಿನ್ನೆಲೆಯಲ್ಲಿ ಸಿಬಿಐಸಿ ಲೆಕ್ಕಪರಿಶೋಧನೆಯೊಂದಿಗೆ ಅಡಿಕೆ ಆಮದಿನ ಬಗ್ಗೆ ಕಟ್ಟುನಿಟಿನ ಕ್ರಮ ಜರುಗಿಸಬೇಕು. ಗುಣಮಟ್ಟಕ್ಕೆ ಕಣ್ಗಾವಲು ನಡೆಸಿ ವಿದೇಶಿ ಅಡಿಕೆ ಆಮದು ನಿಯಂತ್ರಿಸಿ ನಮ್ಮ ಅಡಿಕೆ ಬೆಳೆಗಾರರ ರಕ್ಷಣೆ ಮಾಡಬೇಕು ಎಂದು ಸಂಸದ ಕೋಟ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.