ಕೊಂಕಣ ರೈಲ್ವೆ ಅಭಿವೃದ್ಧಿಗೆ ಸಹಕರಿಸುವಂತೆ ಕೋಟ ಶ್ರೀನಿವಾಸ ಪೂಜಾರಿ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಶಾಸಕ ಕಿರಣಕುಮಾರ್ ಕೊಡ್ಗಿ ಇದ್ದರು.
Published on:
Copied
Follow Us
* ಸಿಎಂ ಡಿಕೆಶಿಗೆ ಉಡುಪಿ ಸಂಸದ ಕೋಟ ಪೂಜಾರಿ ಮನವಿ
ಉಡುಪಿ: ರಾಜ್ಯ ಕರಾವಳಿ ಭಾಗದಲ್ಲಿ ಸುಮಾರು 30 ವರ್ಷದಿಂದ ಹೆಚ್ಚಿನ ಅಭಿವೃದ್ಧಿ ಕಾಣದೆ ಏಕಪಥ ಹಳಿಯ ಮೂಲಕ ಕೊಂಕಣ ರೈಲ್ವೆ ಸಂಚರಿಸುತ್ತಿದೆ. ಇದನ್ನು ಇನ್ನಷ್ಟು ಆಧುನೀಕರಣಗೊಳಿಸಿ ಅಭಿವೃದ್ಧಿ ಪಡಿಸಲು ಅನುಕೂಲವಾಗುವಂತೆ ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲು ರಾಜ್ಯ ಸರ್ಕಾರ ಬೆಂಬಲ ಹಾಗೂ ನೆರವು ನೀಡಬೇಕು ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಬೆಂಗಳೂರಿನಲ್ಲಿ ಮಂಗಳವಾರ (ಜು.14) ಮುಖ್ಯಮಂತ್ರಿಯನ್ನು ಭೇಟಿಯಾಗಿ, ಸದ್ಯ ಕೊಂಕಣ ರೈಲ್ವೆಯ ಸೇವೆ ಕರಾವಳಿ ಜಿಲ್ಲೆಯ ಜನತೆಗೆ ಮಾತ್ರ ಸೀಮಿತವಾಗಿದೆ ಎಂದು ತಿಳಿಸಿದರು.
ದ್ವಿಪಥ ಹಳಿ ಅಗತ್ಯ
ಕೇಂದ್ರ ಸರ್ಕಾರ ಕೊಂಕಣ ರೈಲ್ವೆ ವಿಭಾಗ ಅಭಿವೃದ್ಧಿ ಪಡಿಸಲು ಮತ್ತು ಹಳಿಗಳನ್ನು ದ್ವಿಪಥಗೊಳಿಸಿ ಮೂಲ ಸೌಕರ್ಯ ಒದಗಿಸಲು ಈ ನಿಗಮವನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ತುಂಮ ಅಗತ್ಯವಿದೆ. ಕರಾವಳಿಯ ಹಿರಿಯ ಮುತ್ಸದ್ದಿ ಜಾರ್ಜ್ ಫೆರ್ನಾಂಡಿಸ್ ಕೊಂಕಣ ರೈಲ್ವೆಯನ್ನು ಕರಾವಳಿ ಜನತೆಗೆ ಸಮರ್ಪಿಸುವಾಗ ಮಾಡಿಕೊಂಡ ವ್ಯವಸ್ಥೆಯಂತೆ ಕೆಲವು ರಾಜ್ಯಗಳು ತಮ್ಮ ಪಾಲಿನ ಬಂಡವಾಳ (ಶೇರ್) ತ್ಯಜಿಸಬೇಕಾಗಿದೆ ಎಂದರು.
ಕೇರಳ ಮತ್ತು ಗೋವಾ ರಾಜ್ಯಗಳು ಈಗಾಗಲೇ ತಮ್ಮ ಪಾಲಿನ ಶೇರ್ ತ್ಯಜಿಸಿದೆ. ಕರ್ನಾಟಕ ಸರ್ಕಾರವೂ ಸಹ ಕೊಂಕಣ ರೈಲ್ವೆಯ ಅಭಿವೃದ್ಧಿಗೆ ಸಹಕಾರ ನೀಡಬೇಕು. ಕರಾವಳಿ ಭಾಗದ ಸಂಸದರಾದ ಬ್ರಿಜೇಶ್ ಚೌಟ ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿ ಅವರೂ ಸಹ ಇದೇ ಅಭಿಪ್ರಾಯ ಹೊಂದಿದ್ದಾರೆ. ಕೇಂದ್ರ ಸರ್ಕಾರದ ಮೂಲಕ ಕೊಂಕಣ ರೈಲ್ವೆಯ ಅಭಿವೃದ್ಧಿ ನಮ್ಮ ಗುರಿಯಾಗಿದೆ ಎಂದು ಸಂಸದ ಕೋಟ ಎಇಎಂ ಡಿಕೆಶಿಗೆ ಮನವರಿಕೆ ಮಾಡಿದರು.
ಕುಂದಾಪುರ ಶಾಸಕ ಕಿರಣಕುಮಾರ್ ಕೊಡ್ಗಿ ಸಹ ಉಪಸ್ಥಿತರಿದ್ದು, ತಮ್ಮ ಅನುಭವದ ಮಾಹಿತಿ ಒದಗಿಸಿದರು. ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೊಂಕಣ ರೈಲ್ವೆಯ ಅಭಿವೃದ್ಧಿಗಾಗಿ ಕರಾವಳಿ ಭಾಗದ ಸಂಸದರ ಪ್ರಯತ್ನಕ್ಕೆ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.