ಎನ್​ಎಚ್​ ಬಾಕಿ ಕಾಮಗಾರಿ ತ್ವರಿತ ಪೂರ್ಣಗೊಳಿಸಿ

ಉಡುಪಿಯ ಸಂಸದರ ಕಚೇರಿಯಲ್ಲಿ ಎನ್​ಎಚ್​ ಅಧಿಕಾರಿಗಳೊಂದಿಗೆ ಕೋಟ ಶ್ರೀನಿವಾಸ ಪೂಜಾರಿ ಸಭೆ ನಡೆಸಿದರು. ಅಬ್ದುಲ್​ ಜಾವೇದ್​ ಅಜ್ಮಿ, ಅಲೋಕ್​ ಎಂ., ಎನ್​.ಆರ್​. ಗೋಸ್ವಾಮಿ, ವಿಘ್ನೇಶ್​ ಇತರರಿದ್ದರು.
ಉಡುಪಿಯ ಸಂಸದರ ಕಚೇರಿಯಲ್ಲಿ ಎನ್​ಎಚ್​ ಅಧಿಕಾರಿಗಳೊಂದಿಗೆ ಕೋಟ ಶ್ರೀನಿವಾಸ ಪೂಜಾರಿ ಸಭೆ ನಡೆಸಿದರು. ಅಬ್ದುಲ್​ ಜಾವೇದ್​ ಅಜ್ಮಿ, ಅಲೋಕ್​ ಎಂ., ಎನ್​.ಆರ್​. ಗೋಸ್ವಾಮಿ, ವಿಘ್ನೇಶ್​ ಇತರರಿದ್ದರು.
Published on

* ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

* ಅಧಿಕಾರಿಗಳೊಂದಿಗೆ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ

ಉಡುಪಿ: ಜಿಲ್ಲೆಯಲ್ಲಿ ಸಾರ್ವಜನಿಕರ ಸುರಕ್ಷತೆ, ವಾಹನಗಳ ಸುಗಮ ಸಂಚಾರ ಹಾಗೂ ರಸ್ತೆ ಅಪಘಾತ ಕಡಿಮೆ ಮಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಬಾಕಿ ಇರುವ ಸರ್ವೀಸ್​ ರಸ್ತೆ ಮತ್ತು ಇತರ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.
ಉಡುಪಿಯಲ್ಲಿರುವ ಸಂಸದರ ಕಚೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಭಿಯಂತರರೊಂದಿಗೆ ಮಂಗಳವಾರ (ಆ.18) ಆಯೋಜಿಸಿದ್ದ ರಾಷ್ಟ್ರೀಯ ಹೆದ್ದಾರಿ-66ಕ್ಕೆ ಸಂಬಂಧಿತ ಸರ್ವೀಸ್​ ರಸ್ತೆ, ಮೇಲ್ಸೇತುವೆ ಸೇರಿದಂತೆ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಬಾಕಿ ಕಾಮಗಾರಿಗಳು

ಪ್ರಮುಖವಾಗಿ ಕೋಟೇಶ್ವರ ಜಂಕ್ಷನ್​ನಿಂದ ಬೀಜಾಡಿ ಕ್ರಾಸ್​ವರೆಗಿನ ಸುಮಾರು 830 ಮೀಟರ್​, ಅನ್ನಪೂರ್ಣಾ ಹೋಟೆಲ್​ನಿಂದ ಬೀಜಾಡಿ, ಕುಂಭಾಶಿ, ತೆಕ್ಕಟ್ಟೆ ಭಾಗದಲ್ಲಿ ಎರಡು ಬದಿಯಲ್ಲಿ ಸುಮಾರು 3,500 ಮೀಟರ್​, ತೆಕ್ಕಟ್ಟೆಯಲ್ಲಿ 1,020 ಮೀಟರ್​, ಬ್ರಹ್ಮಾವರದಲ್ಲಿ  400 ಮೀಟರ್​, ಸಂತೆಕಟ್ಟೆಯಲ್ಲಿ ಸಾವಿರ ಮೀಟರ್​, ಉದ್ಯಾವರ ಜಂಕ್ಷನ್​ನಲ್ಲಿ 325 ಮೀಟರ್​ ಕಾಮಗಾರಿ ಬಾಕಿ ಇದೆ. ಅವುಗಳನ್ನೆಲ್ಲ ಆದ್ಯತೆಯ ಮೇಲೆ ಪೂರ್ಣಗೊಳಿಸಬೇಕು ಎಂದರು.

ಸರ್ವೀಸ್​ ರಸ್ತೆಯೇ ಇಲ್ಲ

ರಾ.ಹೆ.ಯ ಕೆಲವು ಕಡೆಗಳಲ್ಲಿ ಇನ್ನೂ ಸರ್ವೀಸ್​ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಿಲ್ಲ. ಚರಂಡಿಗಳಂತೂ ಮೊದಲೇ ಸರಿಯಿಲ್ಲ. ಸರ್ವೀಸ್​ ರಸ್ತೆ ನಿರ್ಮಿಸುವಾಗ ಕಾಮಗಾರಿಗಳ ಗುಣಮಟ್ಟ ಹಾಗೂ ಸಂಚಾರ ಸುರಕ್ಷತಾ ಕ್ರಮ ಕಾಯ್ದುಕೊಳ್ಳಬೇಕು. ಉಡುಪಿಯ ನಿಟ್ಟೂರು ಮತ್ತು ಬ್ರಹ್ಮಾವರದ ಮಹೇಶ್​ ಹಾಸ್ಪಿಟಲ್​ ಬಳಿ ಸ್ಥಳ ಪರಿಶೀಲಿಸಿ, ಸಾರ್ವಜನಿಕರ ಅಭಿಪ್ರಾಯ ಪಡೆದು ಫೂಟ್​ ಓವರ್​ ಬ್ರಿಡ್ಜ್​ ನಿರ್ಮಿಸಲಾಗುವುದು ಎಂದರು.

ರಸ್ತೆ ದುರಸ್ತಿ ಮಾಡಿಸಿ

ಸಂತೆಕಟ್ಟೆ ಪೆಟ್ರೋಲ್​ ಪಂಪ್​ನಿಂದ ಅಂಬಾಗಿಲು ಜಂಕ್ಷನ್​ ವರೆಗೆ 1 ಕಿಮೀ ವ್ಯಾಪ್ತಿಯಲ್ಲಿ ಸರ್ವೀಸ್​ ರಸ್ತೆ ಕಾಮಗಾರಿಗೆ ಮರಗಳ ತೆರವು ಕಾರ್ಯ ಆರಂಭವಾಗಿದೆ. ಕಿನ್ನಿಮೂಲ್ಕಿ ಯಿಂದ ಅಂಬಲಪಾಡಿ ಸಂಪರ್ಕಿಸುವ ರಸ್ತೆಯೂ ಹಾಳಾಗಿರುವ ಕುರಿತು ಪತ್ರಿಕೆಗಳಲ್ಲಿ ವರದಿಯಾಗಿದೆ. ತುರ್ತಾಗಿ ಹಾಗೂ ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಎನ್​ಎಚ್​ಎಐ ಯೋಜನಾ ನಿರ್ದೇಶಕ ಅಬ್ದುಲ್​ ಜಾವೇದ್​ ಅಜ್ಮಿ, ಎನ್​ಎಚ್​ಎಐ ಕನ್ಸಲ್​ಟಂಟ್​ ಪ್ರೆಸಿಡೆಂಟ್​ ಇಂಜಿನಿಯರ್​ ಅಲೋಕ್​ ಎಂ., ಎನ್​ಎಚ್​ಎಐ ಕನ್ಸಲ್​ಟಂಟ್​ ಟೀಮ್​ ಲೀಡರ್​ ಎನ್​.ಆರ್​. ಗೋಸ್ವಾಮಿ, ಧ್ರುವ್​ ಕನ್ಸಲ್​ಟೆನ್ಸಿಯ ಎಎಚ್​ಇ ವಿಘ್ನೇಶ್​ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

 75 ಮೀಟರ್​ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಿಸುವಂತಿಲ್ಲ

ಕೇರಳ ಮಾದರಿಯಲ್ಲಿ ಕುಂದಾಪುರದಿಂದ ತಲಪಾಡಿಯವರೆಗೆ ಅಪಘಾತ ರಹಿತ ರಸ್ತೆ ನಿರ್ಮಿಸುವ ಚಿಂತನೆಯಿದೆ. ಕಟಪಾಡಿ ಅಂಡರ್​ಪಾಸ್​ನ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಈಗಾಗಲೇ ಒಂದು ಬದಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇನ್ನೊಂದು ಬದಿಯ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಅಲ್ಲಾಗುತ್ತಿರುವ ವಾಹನ ದಟ್ಟಣೆ ನಿವಾರಣೆಯಾಗಲಿದೆ. ಕೇಂದ್ರ ಸರ್ಕಾರದ ಸುತ್ತೋಲೆ ಹಾಗೂ ಸುಪ್ರೀಂ ಕೋರ್ಟ್​ನ ಆದೇಶದಂತೆ ರಾಷ್ಟ್ರೀಯ ಹೆದ್ದಾರಿಯ ಮಧ್ಯಭಾಗದಿಂದ ಎರಡೂ ಬದಿಯಲ್ಲಿ 75 ಮೀಟರ್​ ವ್ಯಾಪ್ತಿಯಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಬಾರದೆಂಬ ಸೂಚನೆ ಇದೆ. ಹೀಗಾಗಿ ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ಕರೆದು ಕಾನೂನು ಚೌಕಟ್ಟಿನಲ್ಲಿ ಕೈಗೊಳ್ಳಬಹುದಾದ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಕೋಟ ಪೂಜಾರಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net