ವರಾಹಿ ಯೋಜನೆಗೆ ನೀಡಿ ಅರಣ್ಯ ಭೂಮಿ

ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ.
ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ.
Published on

* ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ

* ಅರಣ್ಯ ಇಲಾಖೆಯ ಮಹಾನಿರೀಕ್ಷ ರಘುಪ್ರಸಾದ್​ಗೆ ಮನವಿ

ಉಡುಪಿ: ಹಲವು ವರ್ಷದಿಂದ ನನೆಗುದಿಗೆ ಬಿದ್ದಿರುವ ಉಡುಪಿ ಜಿಲ್ಲೆಯ ವರಾಹಿ ಯೋಜನೆಗೆ 17.49 ಹೆಕ್ಟೇರ್​ ಅರಣ್ಯ ಭೂಮಿಯ ಅಗತ್ಯತೆ ಇದ್ದು, ಅದನ್ನು ಬಳಸಿಕೊಳ್ಳಲು ಅನುಮತಿ ನೀಡಬೇಕು. ಇದು ಅತ್ಯಂತ ಮಹತ್ವಪೂರ್ಣ ಯೋಜನೆಯಾಗಿದ್ದು, ಈ ಕಾಮಗಾರಿ ಪೂರ್ಣಗೊಂಡರೆ ಉಡುಪಿ ಲೋಕಸಭಾ ಕ್ಷೇತ್ರದ ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕಿನ 2,723 ಹೆಕ್ಟೇರ್​ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರಕಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರದ ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದಾರೆ.
ವರಾಹಿ ಯೋಜನೆ ಕುರಿತಾಗಿ ದೆಹಲಿಯಲ್ಲಿ ಕೇಂದ್ರ ಅರಣ್ಯ ಸಚಿವಾಲಯಕ್ಕೆ ಭೇಟಿ ನೀಡಿದ ಸಂಸದ ಕೋಟ, ಇಲಾಖೆಯ ಅರಣ್ಯ ಮಹಾನಿರೀಕ್ಷಕ ರಘುಪ್ರಸಾದ್​ ಅವರಲ್ಲಿ ಮಾತುಕತೆ ನಡೆಸಿದರು.

ನೀರಿನ ಸಮಸ್ಯೆಯಾಗದು

ಯೋಜನೆಯ ಕಾಮಗಾರಿ ಬಹುತೇಕ ಮುಗಿದಿದ್ದು, ಮೀಸಲು ಅರಣ್ಯ ಪ್ರದೇಶದಲ್ಲಿ 12.95 ಕಿಮೀ ಉದ್ದದ ಕಾಲುವೆ ನಿರ್ಮಾಣದ ಕೆಲಸ ಮಾತ್ರ ಬಾಕಿ ಉಳಿದಿದೆ. ಯೋಜನೆ ಪೂರ್ಣಗೊಂಡರೆ ಜಿಲ್ಲೆಯ ಜನರಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ. ನೀರಿನ ಸಮಸ್ಯೆಯೂ ಉದ್ಭವಿಸದು. ಅರಣ್ಯ ಇಲಾಖೆಯ ಅನುಮೋದನೆ ಲಭಿಸಿದರೆ ಕಾಮಗಾರಿಯೂ ಚುರುಕುಗೊಳ್ಳಲಿದೆ ಎಂದು ವಿವರಿಸಿದರು.
ಡಿಜಿ ರಘುಪ್ರಸಾದ್​ ಪ್ರತಿಕ್ರಿಯಿಸಿ, 4 ವರ್ಷದಿಂದ ವರಾಹಿ ಯೋಜನೆಯ ಕಡತ ವಿಲೇಯಲ್ಲಿದೆ. ತಕ್ಷಣ ರಾಜ್ಯ ಸರ್ಕಾರದಿಂದ ವರದಿ ತರಿಸಿಕೊಂಡು ಅನುಮೋದನೆ ನೀಡುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net