

ಉಡುಪಿ: ಇತ್ತೀಚೆಗೆ ಪ್ರವಾಸೋದ್ಯಮದ ಮೂಲಕವೂ ವಿಶ್ವದ ಪ್ರವಾಸಿಗರನ್ನು ಗಮನ ಸೆಳೆಯುತ್ತಿರುವ ಧಾರ್ಮಿಕ ತಾಣಗಳ ಜಿಲ್ಲೆ ಉಡುಪಿಯು ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದೆ. ಕಲೆ, ಸಂಸ್ಕೃತಿ, ಆಚರಣೆಯ ಮೂಲಕ ನಾಡಿನ ಗಮನ ಸೆಳೆದಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಸಾಧನೆಗೆ ಬೇಕಾದ ಎಲ್ಲ ರೀತಿಯ ಸೌಲಭ್ಯವೂ ಲಭಿಸುತ್ತಿದ್ದು ವಿಶ್ವದ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ರಾಷ್ಟ್ರದ ಕೀರ್ತಿ ಇನ್ನಷ್ಟು ಬೆಳಗಿಸಿ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದರು.
ಉಡುಪಿಯ ಅಜ್ಜರಕಾಡಿನಲ್ಲಿರುವ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಕರ್ನಾಟಕ ಕ್ರೀಡಾ ಪ್ರಾಧಿಕಾರ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಭಾನುವಾರ (ಸೆ.27) ಆಯೋಜಿಸಿದ್ದ 8 ಜಿಲ್ಲೆಗಳನ್ನೊಳಗೊಂಡ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ಹಾಗೂ ಸಿಎಂ ಕಪ್-2026ಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೌದ್ಧಿಕ, ಮಾನಸಿಕ ಸಬಲತೆ
ಕ್ರೀಡಾಕೂಟ ಉದ್ಘಾಟಿಸಿದ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ಕ್ರೀಡೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಕ್ರೀಡೆಯಿಂದ ಸಹನೆ, ಸಹಬಾಳ್ವೆ ರೂಢಿಸಿಕೊಳ್ಳಬಹುದು. ಉತ್ತಮ ನಾಗರಿಕರಾಗಲೂ ಸಾಧ್ಯ. ಅಲ್ಲದೆ, ಮಾನಸಿಕ ಮತ್ತು ಸಾಮಾಜಿಕ ಒತ್ತಡದಿಂದ ದೂರವಾಗಲೂ ಕ್ರೀಡೆ ಸಹಕಾರಿ ಎಂದರು.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಅಥ್ಲೆಟಿಕ್ ತರಬೇತುದಾರ ದೇವಣ್ಣ ನಾಯಕ್ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಶೆಟ್ಟಿ ಸ್ವಾಗತಿಸಿದರು. ಅಥ್ಲೆಟಿಕ್ ತರಬೇತುದಾರ ವಸಂತ್ ಜೋಗಿ ಕಾರ್ಯಕ್ರಮ ನಿರೂಪಿಸಿದರು.
ಕ್ರೀಡಾಕೂಟದಲ್ಲಿ ವಾಲಿಬಾಲ್, ಕಬಡ್ಡಿ, ಲಾನ್ ಟೆನ್ನಿಸ್, ಟೇಬಲ್ ಟೆನ್ನಿಸ್, ಕುಸ್ತಿ, ಬಾಕ್ಸಿಂಗ್ ಮತ್ತು ವುಷು ಸ್ಪರ್ಧೆ ನಡೆಯಿತು. ಮೈಸೂರು, ಚಿಕ್ಕಮಗಳೂರು, ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ 1,200ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.