

ಉಡುಪಿ: ಸಾರ್ವಜನಿಕ ರಸ್ತೆಯಲ್ಲಿ ಮಾರಣಾಂತಿಕ ಆಯುಧ ಇಟ್ಟುಕೊಂಡು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಯುವಕನ್ನು ಮಣಿಪಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಿನ್ನಿಮುಲ್ಕಿಯ ಮಾಂಡವಿ ಪ್ಯಾರಡೈಸ್ನ ನಿವಾಸಿ ಮಹಮ್ಮದ್ ಉಮರ್ ಸಾಹೇಬ್ ಪರ್ವೇಜ್ (26) ಬಂಧಿತ ಆರೋಪಿಯಾಗಿದ್ದು, ಆತನ ಬಳಿಯಿದ್ದ ದೊಡ್ಡ ಚಾಕು, ಮಚ್ಚು ಹಾಗೂ ಬೈಕ್ ವಶಕ್ಕೆ ಪಡೆಯಲಾಗಿದೆ.
ಅ.24ರಂದು ಮಣಿಪಾಲ ಠಾಣೆಯ ಪೊಲೀಸ್ ಉಪನಿರೀಕ್ಷಕ (ತನಿಖೆ) ಶಂಭುಲಿಂಗಯ್ಯ ಎಂ.ಇ. ಗಸ್ತಿನಲ್ಲಿರುವಾಗ ದೊರೆತ ಖಚಿತ ಮಾಹಿತಿಯಂತೆ ದಾಳಿ ನಡೆಸಿದ್ದರು.
ಮಣಿಪಾಲ ವಿದ್ಯಾರತ್ನ ನಗರದ ಮಾಂಡವಿ ಎಮರಾಲ್ಡ್ ಕಟ್ಟಡದ ಹಿಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಮಾರಣಾಂತಿಕ ಆಯುಧ ಇಟ್ಟುಕೊಂಡು ಯುವಕ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದನು. ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕಬ್ಬಿಣದ ಮಚ್ಚು (ಲಾಂಗ್) ಹಾಗೂ ಕಬ್ಬಿಣದ ಚಾಕು ಇದ್ದು ಅದನ್ನು ವಶಪಡಿಸಿಕೊಳ್ಳಲಾಗಿದೆ.
ಮಣಿಪಾಲ ಪೊಲೀಸ್ ಠಾಣೆಯಲ್ಲಿ ಶಂಭುಲಿಂಗಯ್ಯ ಅವರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪೊಲೀಸರು ಮಚ್ಚು ಮತ್ತು ಚಾಕು ಇಟ್ಟುಕೊಂಡಿದ್ದೇಕೆ ಎಂದು ಪ್ರಶ್ನಿಸಿದಾಗ ಆರೋಪಿ ಮಹಮ್ಮದ್ ಪರ್ವೇಜ್, ನನ್ನ ವಿರುದ್ಧ ಮಾದಕ ವಸ್ತು ಮಾರಾಟ ಹಾಗೂ ಸೇವನೆ ಕುರಿತು ಈಗಾಗಲೇ ಉಡುಪಿ ನಗರ, ಶಿರ್ವ, ಉಡುಪಿ ಸೆನ್ ಮತ್ತು ಮಂಗಳೂರು ನಗರದ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣವಿದೆ. ನನಗೆ ದಾವೂದ್, ಇಸಾಕ್ ಹಾಗೂ ಗರುಡಾ ಗ್ಯಾಂಗ್ನ ಕೆಲವರೊಂದಿಗೆ ವೈಮನಸ್ಸು ಇದ್ದು ಅವರ ಮೇಲೆ ಹಲ್ಲೆ ಮಾಡಲು ಈ ಆಯುಧ ಇಟ್ಟುಕೊಂಡಿರುವುದಾಗಿ ತಿಳಿಸಿದ್ದಾನೆ.