

ಉಡುಪಿ: ಕೇರಳದ ಗಡಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದರೆಂಬ ಕಾರಣದಿಂದಾಗಿ ಉಡುಪಿ ಮಲ್ಪೆಯ ಎರಡು ಮೀನುಗಾರಿಕಾ ಬೋಟ್ಗಳನ್ನು ಕೇರಳ ಮೀನುಗಾರಿಕಾ ಇಲಾಖೆ ವಶಪಡಿಸಿಕೊಂಡಿದೆ. ಅಲ್ಲದೆ, 6.11 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾಗಿ ತಿಳಿದು ಬಂದಿದೆ.
ಕಳೆದ ಗುರುವಾರ ರಾತ್ರಿ ಕೇರಳದ ಮೀನುಗಾರಿಕಾ ಇಲಾಖೆ ಹಾಗೂ ಮರೈನ್ ಎನ್ಫೋರ್ಸ್ಮೆಂಟ್ ಅಧಿಕಾರಿಗಳು ಜಂಟಿ ಗಸ್ತು ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಉಪ್ಪಳ ಕರಾವಳಿಯಿಂದ 12 ನಾಟಿಕಲ್ ಮೈಲ್ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮಲ್ಪೆಯ ಎರಡು ಬೋಟ್ಗಳನ್ನು ತಪಾಸಣೆ ನಡೆಸಿದರು. ಸೂಕ್ತ ದಾಖಲೆಗಳಿಲ್ಲದ್ದರಿಂದ ಹಾಗೂ ರಾತ್ರಿ ವೇಳೆ ಟ್ರಾಲಿಂಗ್ ನಡೆಸುತ್ತಿರುವ ಆರೋಪದಡಿ ಬೋಟ್ಗಳನ್ನು ವಶಪಡಿಸಿಕೊಂಡಿದ್ದರು.
ಬೋಟ್ನಲ್ಲಿದ್ದ ಮೀನು ಹರಾಜು
ಬೋಟ್ಗಳ ಮಾಲೀಕರ ವಿರುದ್ಧ ತನಿಖೆ ನಡೆಸಿದ ಅಧಿಕಾರಿಗಳು ಕೇರಳ ಕಡಲ ಮೀನುಗಾರಿಕಾ ನಿಯಂತ್ರಣ ಕಾಯ್ದೆಯಡಿ ಕ್ರಮ ಕೈಗೊಂಡರು. ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕಿ ಸಿ.ಕೆ.ಶೈನಿ ಎಂಬವರು 5 ಲಕ್ಷ ರೂ. ದಂಡ ವಿಧಿಸಿದರು. ಅಲ್ಲದೆ, ಬೋಟ್ನಲ್ಲಿದ್ದ ಮೀನುಗಳನ್ನು ಹರಾಜು ಹಾಕಿ ಅದರಿಂದ ಲಭಿಸಿದ 1.11 ಲಕ್ಷ ರೂ. ಸೇರಿ ಒಟ್ಟು 6.11 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾಗಿ ತಿಳಿದುಬಂದಿದೆ.