ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ; ಜಿಲ್ಲಾ ಯುವ ಕಾಂಗ್ರೆಸ್ ಪ್ರತಿಭಟನೆ
ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವುದನ್ನು ಖಂಡಿಸಿ ಜಿಲ್ಲಾಡಳಿತ ಸಂಕೀರ್ಣದಲ್ಲಿರುವ ಸಂಸದರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ ಹಾಗೂ ಇತರ ಪದಾಧಿಕಾರಿಗಳನ್ನು ಪೊಲೀಸರು ವಶಕ್ಕೆ ಪಡೆದರು.
Published on:
Copied
Follow Us
* ಸಂಸದ ಕೋಟ ಕಚೇರಿ ಮುತ್ತಿಗೆಗೆ ಯತ್ನ
* ಜಿಲ್ಲಾಧ್ಯಕ್ಷ, ಪದಾಧಿಕಾರಿಗಳು ವಶಕ್ಕೆ
ಉಡುಪಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವುದನ್ನು ಖಂಡಿಸಿ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ (ಮೇ 15) ಪ್ರತಿಭಟನೆ ನಡೆಯಿತು.
ಕೇಂದ್ರ ಸರ್ಕಾರ ಸಂಪೂರ್ಣ ವಿಲವಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಇದೊಂದು ಅಘೋಷಿತ ತುರ್ತು ಪರಿಸ್ಥಿತಿಯಾಗಿದೆ. ವರ್ಷಗಳ ಕಾಲ ಹಗಲಿರುಳು ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಿಕರಿಗೆ ಅನ್ಯಾಯ ಮಾಡಿದಂತಾಗಿದೆ. ದೇಶದ ಶಿಕ್ಷಣ ವ್ಯವಸ್ಥೆ ಮೇಲಿನ ವಿಶ್ವಾಸಕ್ಕೆ ಧಕ್ಕೆ ತಂದಿದೆ. ಕೂಡಲೇ ತಪ್ಪತಸ್ಥರನ್ನು ಬಂಧಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಂಪಿ ಕಚೇರಿಗೆ ಮುತ್ತಿಗೆ ಯತ್ನ
ಡಿಸಿ ಕಚೇರಿಯ ಹೊರಭಾಗದಲ್ಲಿ ಪ್ರತಿಭಟಿಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಯ ಒಳಗಿರುವ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿ, ಧಿಕ್ಕಾರ ಕೂಗಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಡಿಸಿ ಕಚೇರಿಯ ಪ್ರವೇಶ ದ್ವಾರದ ಗೇಟ್ ಹಾಕಿ ಪ್ರತಿಭಟನಾಕಾರರನ್ನು ತಡೆದರು. ಆದರೂ ಮುನ್ನುಗ್ಗಲು ಯತ್ನಿಸಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ ಹಾಗೂ ಇನ್ನಿತರರನ್ನು ಗೇಟ್ ಬಳಿಯೇ ವಶಕ್ಕೆ ಪಡೆದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಸುರಯ್ಯ ಅಂಜುಮ್, ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಮುಖಂಡರಾದ ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರ, ಜಿಲ್ಲಾ ಯುವ ಕಾಂಗ್ರೆಸ್ನ ಕಾರ್ಯಕರ್ತರು ಉಪಸ್ಥಿತರಿದ್ದರು.
"
ಕಷ್ಟಪಟ್ಟು ಉನ್ನತ ಶಿಕ್ಷಣ ಗಳಿಸುತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಕೇಂದ್ರ ಸರ್ಕಾರ ಚಲ್ಲಾಟ ಆಡುತ್ತಿದೆ. ವೈದ್ಯಕೀಯ ಪ್ರವೇಶಕ್ಕೆ ಪೂರಕ ಪರೀಕ್ಷೆಯಾದ ನೀಟ್ನ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಇದು ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದೆ. ಮತ್ತೆ ಜೂನ್ 26ರಂದು ನೀಟ್ ಪರೀಕ್ಷೆಗೆ ದಿನಾಂಕ ನಿಗದಿ ಮಾಡಿದ್ದು, ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ ಬರೆಯುವಂತಾಗಿದೆ. ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಭಾರತ ಬೆಳಗುತ್ತಿದೆ ಎನ್ನುತ್ತಾರೆ. ಕೇಂದ್ರ ಸರ್ಕಾರಕ್ಕೆ ಸರಿಯಾಗಿ ಪರೀಕ್ಷೆ ನಡೆಸಲೂ ಆಗದ ಸ್ಥಿತಿ ಇದೆ.
— ಕೃಷ್ಣ ಶೆಟ್ಟಿ ಬಜಗೋಳಿ. ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ.