ಆ.5ರಂದು ಮತದಾರರ ಕರಡು ಪಟ್ಟಿ ಪ್ರಕಟ

ಉಡುಪಿಯ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಎಸ್​ಐಆರ್​ 'ತಿಂಗಳ ಅಂಗಳ ಸಂವಾದ' ಕಾರ್ಯಕ್ರಮದಲ್ಲಿ ಸ್ವರೂಪಾ ಟಿ.ಕೆ ಅವರು 'ಸನ್ಮತಿ' ಸಂಚಿಕೆ ಬಿಡುಗಡೆ ಮಾಡಿದರು. ಸುಬ್ರಹ್ಮಣ್ಯ ಕುರ್ಯ, ನಝೀರ್​ ಪೊಲ್ಯ, ಆಸ್ಟ್ರೊ ಮೋಹನ್​, ಹರೀಶ್​ ಕುಂದರ್​, ಗಣೇಶ್​ ಕಲ್ಯಾಣಪುರ ಇದ್ದರು.
ಉಡುಪಿಯ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಎಸ್​ಐಆರ್​ 'ತಿಂಗಳ ಅಂಗಳ ಸಂವಾದ' ಕಾರ್ಯಕ್ರಮದಲ್ಲಿ ಸ್ವರೂಪಾ ಟಿ.ಕೆ ಅವರು 'ಸನ್ಮತಿ' ಸಂಚಿಕೆ ಬಿಡುಗಡೆ ಮಾಡಿದರು. ಸುಬ್ರಹ್ಮಣ್ಯ ಕುರ್ಯ, ನಝೀರ್​ ಪೊಲ್ಯ, ಆಸ್ಟ್ರೊ ಮೋಹನ್​, ಹರೀಶ್​ ಕುಂದರ್​, ಗಣೇಶ್​ ಕಲ್ಯಾಣಪುರ ಇದ್ದರು.
Published on

ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾಹಿತಿ

* ಎಸ್​ಐಆರ್​ 'ತಿಂಗಳ ಅಂಗಳ ಸಂವಾದ' ಕಾರ್ಯಕ್ರಮ

ಉಡುಪಿ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್​ಐಆರ್​)ಗೆ ಸಂಬಂಧಿಸಿ ಆ.5ರಂದು ಕರಡು ಪಟ್ಟಿ ಪ್ರಕಟಿಸಲಾಗುವುದು. ಅದರಲ್ಲಿ ಹೆಸರು ಬಿಟ್ಟು ಹೋಗಿದ್ದವರು ಮಾತ್ರ ಸಂಬಂಧಪಟ್ಟ 11 ದಾಖಲೆಗಳಲ್ಲಿ ಒಂದು ಸಲ್ಲಿಸಬೇಕು. ಪಟ್ಟಿಯಲ್ಲಿ ಹೆಸರು ಇದ್ದವರು ಯಾವುದೇ ದಾಖಲೆ ಸಲ್ಲಿಸಬೇಕಾದ ಅಗತ್ಯತೆ ಇರುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ತಿಳಿಸಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಕಾರದಲ್ಲಿ ಶುಕ್ರವಾರ (ಜು.10) ಆಯೋಜಿಸಿದ್ದ ಎಸ್​ಐಆರ್​ ವಿಷಯ ಕುರಿತು 'ತಿಂಗಳ ಅಂಗಳ ಸಂವಾದ' ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿಎಲ್​ಒಗಳಿಗೆ ನೋಟಿಸ್​
ಮನೆಮನೆಗೆ ಭೇಟಿ ನೀಡಿ ಫಾರ್ಮ್ ನೀಡಲು ಮತ್ತು ಭರ್ತಿ ಮಾಡಿರುವ ಫಾರ್ಮ್ ಸಂಗ್ರಹಿಸುವಂತೆ ಬಿಎಲ್​ಒಗಳಿಗೆ ಹಲವು ಬಾರಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಿಧಾನಗತಿಯಲ್ಲಿ ಕೆಲಸ ಮಾಡುತ್ತಿರುವ ಬಿಎಲ್​ಒಗಳಿಗೆ ಈಗಾಗಲೇ ನೋಟಿಸ್​ ನೀಡಲಾಗಿದೆ. ಸರಿಯಾಗಿ ಕರ್ತವ್ಯ ನಿರ್ವಹಿಸದ ಬಿಎಲ್​ಒಗಳ ಮಾಹಿತಿ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

'ಸನ್ಮತಿ' ಸಂಚಿಕೆ ಬಿಡುಗಡೆ

ಜಿಲ್ಲಾ ಸಂಘದ 'ಸನ್ಮತಿ' ಪತ್ರಿಕೆಯ ಜೂನ್​ ತಿಂಗಳ ಸಂಚಿಕೆಯನ್ನು ಡಿಸಿ ಸ್ವರೂಪಾ ಬಿಡುಗಡೆ ಮಾಡಿದರು. ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಅಧ್ಯಕ್ಷತೆ ವಹಿಸಿದ್ದರು. ವಾರ್ತಾಧಿಕಾರಿ ಮಂಜುನಾಥ್​, ಸಂಘದ ಜಿಲ್ಲಾ ಕೋಶಾಧಿಕಾರಿ ಹರೀಶ್​ ಕುಂದರ್​, ಪತ್ರಿಕಾ ಭವನ ಸಮಿತಿಯ ಸಹಸಂಚಾಲಕ ಗಣೇಶ್​ ಕಲ್ಯಾಣಪುರ ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್​ ಪೊಲ್ಯ ಸ್ವಾಗತಿಸಿದರು. ರಾಜ್ಯ ಸಮಿತಿಯ ಸದಸ್ಯ ಆಸ್ಟ್ರೊ ಮೋಹನ್​ ವಂದಿಸಿದರು. ಪತ್ರಕರ್ತ ರಹೀಂ ಉಜಿರೆ ಕಾರ್ಯಕ್ರಮ ನಿರೂಪಿಸಿದರು.

ಅ.7ರಂದು ಮತದಾರರ ಅಂತಿಮ ಪಟ್ಟಿ

ಫಾರ್ಮ್ ಸಲ್ಲಿಸಿಯೂ ಕರಡು ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಅವರು ತಮ್ಮಲ್ಲಿರುವ ಇನ್ನೊಂದು ಪ್ರತಿಯೊಂದಿಗೆ ಅರ್ಜಿ ಸಲ್ಲಿಸಬಹುದು. ಹೆಸರಿನಲ್ಲಿ ವ್ಯಾತ್ಯಾಸ ಇದ್ದವರಿಗೆ ನಾವೇ ನೋಟಿಸ್​ ನೀಡುತ್ತೇವೆ. ಹೆಸರು ಬದಲಾಗಿರುವುದಕ್ಕೆ ಸಂಬಂಧಿಸಿ ದಾಖಲೆ ಸಲ್ಲಿಸಬೇಕು. ಕರಡು ಪಟ್ಟಿಯಲ್ಲಿ ಇದ್ದವರ ಹೆಸರು ಅಂತಿಮ ಪಟ್ಟಿಯಲ್ಲಿ ಬಿಟ್ಟು ಹೋಗುವುದಿಲ್ಲ. ಅ.7ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದರು.
"

ಎಲ್ಲ ಬೂತ್​ಗಳಲ್ಲಿ ವೋಟಿಂಗ್​ ಫೆಸಿಲಿಟೇಶನ್​ ಸೆಂಟರ್​ (ಮತದಾರರ ನೆರವು ಕೇಂದ್ರ) ತೆರೆಯಲಾಗಿದ್ದು, ಇಲ್ಲಿ ಕಾಲೇಜ್​ಗಳ ಚುನಾವಣಾ ಸಾಕ್ಷರತಾ ಕ್ಲಬ್​ನ ಸದಸ್ಯರನ್ನು ನೇಮಿಸಲಾಗಿದೆ. ಬೆಳಗ್ಗೆ 7ರಿಂದ ರಾತ್ರಿ 9ರ ವರೆಗೆ ಕೇಂದ್ರ ತೆರೆದಿರುತ್ತದೆ. ಭಾನುವಾರವೂ ಸಹ ಓಪನ್​ ಇರಲಿದೆ. ಬಿಎಲ್​ಒ ಬಗ್ಗೆ ದೂರುಗಳಿದ್ದರೆ ಸೆಕ್ಟರ್​ ಅಧಿಕಾರಿ ಅಥವಾ ತಹಸೀಲ್ದಾರ್​ಗೆ ದೂರವಾಣಿ ಕರೆ ಮೂಲಕ ಮಾಹಿತಿ ನೀಡಬಹುದು. ಜಿಲ್ಲೆಯ ಆರು ಬೂತ್​ಗಳಲ್ಲಿ ಶೇ.100 ಫಾರ್ಮ್ ವಿತರಿಸಲಾಗಿದೆ.

— ಸ್ವರೂಪಾ ಟಿ.ಕೆ. ಉಡುಪಿ ಜಿಲ್ಲಾಧಿಕಾರಿ.

ಮಕ್ಕಳ ಮ್ಯಾಪಿಂಗ್​ ಕಾರ್ಯ ಪೂರ್ಣ


ಉಡುಪಿ ಜಿಲ್ಲೆಯಲ್ಲಿ ಒಟ್ಟು 10,63,876 ಮತದಾರರಿದ್ದಾರೆ. ಈವರೆಗೆ  ಶೇ.97.37 ಎನ್ಯುಮರೇಷನ್​ ಫಾರ್ಮ್​ ವಿತರಿಸಲಾಗಿದೆ. ಬಿಎಲ್​ಒಗಳೇ ಖುದ್ದು ಮನೆಗೇ ತೆರಳಿ ವಿತರಿಸಬೇಕು. ಸ್ಟಿಕರ್​ ಅಂಟಿಸಿ ದಿನಾಂಕ ನಮೂದಿಸಬೇಕು. ಭರ್ತಿ ಮಾಡಿದ ಅರ್ಜಿ ಸ್ವೀಕರಿಸಲೂ ಸಹ ಮನೆಗಳಿಗೆ ಭೇಟಿ ನೀಡಬೇಕು. ಆ ವೇಳೆಯಲ್ಲೂ ಸಹ ಮತ್ತೆ ಸ್ಟಿಕರ್​ ಹಚ್ಚಬೇಕು. 2025ರ ಮತದಾರರ ಪಟ್ಟಿ ಆಧಾರದಲ್ಲಿ 2002ರ ಮತದಾರರು ಹಾಗೂ ಅವರ 18 ವರ್ಷ ತುಂಬಿದ ಮಕ್ಕಳ ಮ್ಯಾಪಿಂಗ್​ ಕಾರ್ಯ ಪೂರ್ಣ ಆಗಿದೆ. ಬಿಎಲ್​ಒಗಳಿಗೆ ವಿವಿಧ ಹಂತಗಳಲ್ಲಿ ತರಬೇತಿ ನೀಡಲಾಗಿದೆ. ಯಾರ ಹೆಸರನ್ನೂ ಅನಗತ್ಯವಾಗಿ ತೆಗೆದುಹಾಕುವ ಅಧಿಕಾರ ಬಿಎಲ್​ಒ ಅಥವಾ ಆಧಿಕಾರಿಗಳಿಲ್ಲ. ಮತದಾರರು ಫಾರ್ಮ್ ಮರಳಿಸದಿದ್ದರೆ, ಭರ್ತಿ ಮಾಡಿದ ಫಾರ್ಮ್ ಅಪ್​ಲೋಡ್​ ಆಗದಿದ್ದರೆ ಅಂತಹವರ ಮತದಾನದ ಹಕ್ಕು ಮೊಟಕಾಗಬಹುದು. ಆ.5ರಿಂದ ಅ.1ರ ವರೆಗೆ ಅಹವಾಲು ಸ್ವೀಕಾರ ಮತ್ತು ಅಂತಿಮ ನಿರ್ಧಾರ ಮಾಡಲಾಗುವುದು. ಅ.7ಕ್ಕೆ ಅಂತಿಮ ಪಟ್ಟಿ ಸಿದ್ಧ ಮಾಡಲಾಗುವುದು ಎಂದು ಡಿಸಿ ಸ್ವರೂಪಾ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net