ಒಂದೂವರೆ ಗಂಟೆಯಲ್ಲಿ ಬೇಬಿ ಫ್ರಾಕ್​ ಹೊಲಿದು ಸಾಧನೆ

ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಟೈಲರಿಂಗ್​ ಸಮ್ಮೇಳನದಲ್ಲಿ ಉಡುಪಿಯ ರಮ್ಯಾ ಎ.ಸಿ. ಅವರಿಗೆ 'ಕಲಾಶ್ರೀ' ಪ್ರಶಸ್ತಿ ವಿತರಿಸಲಾಯಿತು. ಐಟಿಸಿಯ ಪ್ರಮುಖರಾದ ಅರವಿಂದ, ರಾಜ್ಯ ಕಾರ್ಯದರ್ಶಿ ಕೀರ್ತನಾ ಇತರರಿದ್ದರು.
ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಟೈಲರಿಂಗ್​ ಸಮ್ಮೇಳನದಲ್ಲಿ ಉಡುಪಿಯ ರಮ್ಯಾ ಎ.ಸಿ. ಅವರಿಗೆ 'ಕಲಾಶ್ರೀ' ಪ್ರಶಸ್ತಿ ವಿತರಿಸಲಾಯಿತು. ಐಟಿಸಿಯ ಪ್ರಮುಖರಾದ ಅರವಿಂದ, ರಾಜ್ಯ ಕಾರ್ಯದರ್ಶಿ ಕೀರ್ತನಾ ಇತರರಿದ್ದರು.
Published on: 

* ಗಮನ ಸೆಳೆದ ಉಡುಪಿ ಜಿಲ್ಲೆ ಕಲಾವಿದರು

* ಬೆಂಗಳೂರಿನಲ್ಲಿ ರಾಷ್ಟ್ರೀಯ ಟೈಲರಿಂಗ್​ ಸಮ್ಮೇಳನ

ಉಡುಪಿ: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ 2ನೇ ರಾಷ್ಟ್ರೀಯ ಟೈಲರಿಂಗ್​ ಸಮ್ಮೇಳನದಲ್ಲಿ ಉಡುಪಿ ಜಿಲ್ಲೆಯಿಂದ 90ಕ್ಕೂ ಅಧಿಕ ಮಂದಿ ಕಲಾವಿದರು ಭಾಗವಹಿಸಿ, ಹೊಲಿಗೆ ಕಲೆಯಲ್ಲಿರುವ ತಮ್ಮ ಕೌಶಲ ಪ್ರದರ್ಶಿಸಿ ಗಮನ ಸೆಳೆದರು.

ಒಂದೂವರೆ ಗಂಟೆಯ ಅವಧಿಯಲ್ಲಿ ಕೈಹೊಲಿಗೆಯ ಮೂಲಕ 2ರಿಂದ 4 ವರ್ಷದ ಮಗುವಿನ 'ಬೇಬಿ ಫ್ರಾಕ್​' ಹೊಲಿಯುವ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯಿಂದ ಭಾಗವಹಿಸಿದ್ದ ಎಲ್ಲ ಕಲಾವಿದರು ಸವಾಲನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.

ಈ ಸಾಧನೆಗಾಗಿ ಎಲ್ಲರಿಗೂ ಆಸ್ಕರ್​ ಬುಕ್​ ಆಫ್​ ರೆಕಾರ್ಡ್ಸ್​ ವತಿಯಿಂದ ಪ್ರಮಾಣಪತ್ರ ಹಾಗೂ ಪದಕ ನೀಡಲಾಯಿತು. ಅಲ್ಲದೆ, ಇಂಡಿಯನ್​ ಟೈಲರಿಂಗ್​ ಕೌನ್ಸಿಲ್​ (ಐಟಿಸಿ)ನ ಸದಸ್ಯತ್ವದ ಪ್ರಮಾಣಪತ್ರವನ್ನೂ ವಿತರಿಸಲಾಯಿತು.

ಕಲಾಶ್ರೀ ಪ್ರಶಸ್ತಿ

ಸಮ್ಮೇಳನದಲ್ಲಿ ಉಡುಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ಸಿದ್ಧಿ ಕ್ರಿಯೇಟಿವ್​ ಸ್ಕಿಲ್​ ಅಕಾಡೆಮಿ ಉಡುಪಿಯ ಸ್ಥಾಪಕಿ ರಮ್ಯಾ ಎ.ಸಿ. ಅವರಿಗೆ ಟೈಲರಿಂಗ್​ ಕ್ಷೇತ್ರದ ಸಾಧನೆಗಾಗಿ 'ಕಲಾಶ್ರೀ' ಪ್ರಶಸ್ತಿ ವಿತರಿಸಲಾಯಿತು. ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕಾಡೆಮಿಯ ಶಿಕ್ಷಕಿ ರೇವತಿ ಅವರಿಗೆ 'ಉತ್ತಮ ಶಿಕ್ಷಕಿ' ಪ್ರಶಸ್ತಿ ನೀಡಲಾಯಿತು.

ಇದೇ ಸಂದರ್ಭದಲ್ಲಿ ವಿವಿಧ ಸಂಸ್ಥೆಗಳಿಂದ ಭಾಗವಹಿಸಿದ್ದ ಮೂವರು ಶಿಕ್ಷಕಿಯರಿಗೂ ಉತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನಿಸಲಾಯಿತು.

ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಸಮ್ಮೇಳನ ಉದ್ಘಾಟಿಸಿದರು. ಕರ್ನಾಟಕದ ವಿವಿಧ ಜಿಲ್ಲೆಗಳಿಂದ 2 ಸಾವಿರಕ್ಕೂ ಅಧಿಕ ಟೈಲರ್​ಗಳು ಹಾಗೂ ತರಬೇತುದಾರರು ಭಾಗವಹಿಸಿದ್ದರು.

ಜೀವನದಲ್ಲಿ ಶಿಕ್ಷಣ ಅತ್ಯಂತ ಮುಖ್ಯ. ಲಿಂಗಭೇದವಿಲ್ಲದೆ ಎಲ್ಲರಿಗೂ ಶಿಕ್ಷಣ ಮತ್ತು ಕೌಶಲ ತರಬೇತಿ ನೀಡಬೇಕು. ಅದರಿಂದ ಆತ್ಮವಿಶ್ವಾಸ ವೃದ್ಧಿಯಾಗಲಿದೆ. ಪ್ರತಿಯೊಬ್ಬರೂ ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳುವಂತಾಗಬೇಕು.ಎಂತಹ ಕಷ್ಟದ ಪರಿಸ್ಥಿತಿ ಎದುರಾದರೂ ಧೈರ್ಯದಿಂದ ಮುನ್ನಡೆಯಬೇಕು.
ಮಂಜಮ್ಮ ಜೋಗತಿ. ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದೆ.