ವನ್ಯಜೀವಿಗಳಿಗೆ 'ಜಲ' ಆಸರೆ

ಸಿದ್ಧಾಪುರ ವನ್ಯಜೀವಿ ವಲಯದಲ್ಲಿ ಅರಣ್ಯಾಧಿಕಾರಿಗಳು ನಿರ್ಮಿಸಿರುವ ತೊಟ್ಟಿಯಲ್ಲಿ ನೀರು ಕುಡಿಯುತ್ತಿರುವ ಕಾಡುಪ್ರಾಣಿಗಳು.
ಸಿದ್ಧಾಪುರ ವನ್ಯಜೀವಿ ವಲಯದಲ್ಲಿ ಅರಣ್ಯಾಧಿಕಾರಿಗಳು ನಿರ್ಮಿಸಿರುವ ತೊಟ್ಟಿಯಲ್ಲಿ ನೀರು ಕುಡಿಯುತ್ತಿರುವ ಕಾಡುಪ್ರಾಣಿಗಳು.
Published on

* ಮಾನವೀಯತೆ ಮೆರೆದ ಅರಣ್ಯಾಧಿಕಾರಿಗಳು

* ಕಾಡಿನಲ್ಲಿ ಶಾಶ್ವತ ನೀರಿನ ತೊಟ್ಟಿ ನಿರ್ಮಾಣ

ಪ್ರಶಾಂತ ಭಾಗ್ವತ ಉಡುಪಿ
ಕರಾವಳಿಯ ನಗರ-ಗ್ರಾಮೀಣ ಭಾಗದಲ್ಲಿ ಕಾಡುತ್ತಿರುವ ಬೇಸಿಗೆಯ ತಾಪ ಅರಣ್ಯದೊಳಗಿರುವ ಪ್ರಾಣಿ-ಪಕ್ಷಿಗಳನ್ನೂ ಹೈರಾಣಾಗಿಸಿದೆ. ಬಿಸಿಲ ಝಳದಿಂದಾಗಿ ಕಾನನದೊಳಗಿನ ಜಲಮೂಲ ಹಾಗೂ ನೀರಿನ ಸೆಲೆಗಳು ಬತ್ತಿಹೋಗಿದ್ದು ವನ್ಯಜೀವಿಗಳ ಜೀವಹಿಂಡತೊಡಗಿದೆ.
ನೀರಿಲ್ಲದೆ ಕಂಗಾಲಾಗಿರುವ ಕಾಡುಪ್ರಾಣಿಗಳಿಗೆ ಕುದುರೆಮುಖ ವನ್ಯಜೀವಿ ವಿಭಾಗದ ಕೊಲ್ಲೂರು ಅಭಯಾರಣ್ಯದ ಸಿದ್ಧಾಪುರ ವನ್ಯಜೀವಿ ವಲಯದ ಅರಣ್ಯಾಧಿಕಾರಿಗಳು ಆಸರೆಯಾಗಿದ್ದಾರೆ. ಕಾಡಿನೊಳಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಮೂಕಪ್ರಾಣಿಗಳ ಜಲದಾಹ ನೀಗಿಸಿ ಮಾನವೀಯತೆ ತೋರಿದ್ದಾರೆ.
ಕಾಡಿನಲ್ಲಿ ಅರಣ್ಯಾಧಿಕಾರಿಗಳು ನಿರ್ಮಿಸಿರುವ ನೀರಿನ ತೊಟ್ಟಿ.
ನೀರಿನ ತೊಟ್ಟಿ ನಿರ್ಮಾಣ
ಬಿಸಿಲಿನ ತೀವ್ರತೆಯಿಂದಾಗಿ ಅರಣ್ಯದಲ್ಲಿರುವ ಸಣ್ಣಪುಟ್ಟ ತೊರೆಗಳು ಬತ್ತಿಹೋಗಿವೆ. ಹೀಗಾಗಿ ದಾಹ ನೀಗಿಸಿಕೊಳ್ಳಲು ಪ್ರಾಣಿಗಳಿಗೆ ನೀರು ಸಿಗದಾಗಿದೆ. ಕುಡಿಯುವ ನೀರು ಅರಸುತ್ತ ಕಾಡಿನೊಳಗೆ ಅವು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನರಿತ ಅರಣ್ಯಾಧಿಕಾರಿಗಳು ಸಿದ್ಧಾಪುರ ವಲಯ ವ್ಯಾಪ್ತಿಯ ಕಾಡಿನ ಮಧ್ಯದಲ್ಲಿ 10ರಿಂದ 20 ಕಿಮೀ ದೂರದಲ್ಲಿ ಸಿಮೆಂಟ್​ನ ಶಾಶ್ವತ ತೊಟ್ಟಿ ನಿರ್ಮಿಸಿದ್ದಾರೆ. 
ಟ್ಯಾಂಕರ್​ ಮೂಲಕ ನೀರು
ಸಿದ್ಧಾಪುರ ವನ್ಯಜೀವಿ ವಲಯದ ಕಮಲಶಿಲೆ, ಮೂಡಗಲ್​ ಪಾರೆ, ದೊಡ್ಡಹಾರ (ಕೆರಾಡಿ) ಹಾಗೂ ಬಣ್ಣದಪಾರೆ ಎಂಬಲ್ಲಿ ನಾಲ್ಕು ಕಡೆ ಆಯ್ದ ಪ್ರದೇಶಗಳಲ್ಲಿ ಕಾಂಕ್ರೀಟ್​ ಟ್ಯಾಂಕ್​ ನಿರ್ಮಿಸಲಾಗಿದೆ. ಎರಡು ದಿನಕ್ಕೊಮ್ಮೆ ಟ್ಯಾಂಕರ್​ ಮೂಲಕ ಕಾಡಿನ ಮಧ್ಯಭಾಗಕ್ಕೆ ನೀರು ಸಾಗಿಸಿ ಅಲ್ಲಿ ನಿರ್ಮಿಸಿರುವ ಟ್ಯಾಂಕ್​ಗಳನ್ನು ತುಂಬಿಸಲಾಗುತ್ತಿದೆ. ಕಾಡಿನ ಒಳಭಾಗದಲ್ಲೇ ಅರಣ್ಯಾಧಿಕಾರಿಗಳು ನಿರ್ಮಿಸಿದ ಈ ಜಲತೊಟ್ಟಿಗಳು ಇದೀಗ ಕಾಡುಜೀವಿಗಳಿಗೆ ಜೀವದಾನ ನೀಡುತ್ತಿವೆ.
ತೊಟ್ಟಿಗೆ ಟ್ಯಾಂಕರ್​ ಮೂಲಕ ನೀರು ಹಾಕುತ್ತಿರುವುದು.
ಸಿದ್ದಾಪುರ ವಲಯ ವನ್ಯಜೀವಿ ವಿಭಾಗ ಕೈಗೊಂಡಿರುವ ಈ ಕಾರ್ಯಕ್ಕೆ ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಟ್ರ್ಯಾಪ್​ ಕ್ಯಾಮರಾಗಳಲ್ಲಿ ವನ್ಯಜೀವಿಗಳು ಸೆರೆ

ಕಾಡಿನಲ್ಲಿ ನಿರ್ಮಿಸಿರುವ ನೀರಿನ ಟ್ಯಾಂಕ್​ಗಳ ಸುತ್ತ ಟ್ರ್ಯಾಪ್​ ಕ್ಯಾಮರಾ ಅಳವಡಿಸಲಾಗಿದ್ದು, ನೀರು ಕುಡಿಯುತ್ತಿರುವ ಕಾಡುಪ್ರಾಣಿಗಳ ಸುಂದರ ದೃಶ್ಯಗಳು ಸೆರೆಯಾಗಿವೆ. ಜಿಂಕೆ, ಕಾಡುಹಂದಿ, ನವಿಲು, ಕಾಡುಕೋಣ, ಚಿರತೆ, ಮೊಲ, ಮಂಗಗಳ ಹಿಂಡು, ಹದ್ದು ಸೇರಿದಂತೆ ವಿವಿಧ ಪಗಳು ನೀರಿನ ತೊಟ್ಟಿಯತ್ತ ಬಂದು ನೀರು ಕುಡಿಯುತ್ತಿದೆ. ರಾತ್ರಿಯ ವೇಳೆಯಲ್ಲೂ ನೀರು ಕುಡಿಯಲು ಅವು ಆಗಮಿಸಿರುವ ದೃಶ್ಯ ಕ್ಯಾಮರಾದಲ್ಲಿ ದಾಖಲಾಗುತ್ತಿವೆ. ಕಳೆದ ವರ್ಷವೂ ಸಹ ಕಾಡುಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಮನುಷ್ಯರಾದರೆ ಎಲ್ಲಿಯಾದರೂ ಕೇಳಿ ಅಥವಾ ನೀರಿನ ಬಾಟಲಿ ಖರೀದಿಸಿ ಕುಡಿಯುತ್ತಾರೆ. ಆದರೆ, ಅಡವಿಯೊಳಗೆ ಇರುವ ಮೂಕಪ್ರಾಣಿಗಳು ಏನು ಮಾಡಲು ಸಾಧ್ಯ? ಅವುಗಳ ಜಲದಾಹ ನೀಗಿಸಲು ನೀರಿನ ತೊಟ್ಟಿ ನಿರ್ಮಿಸಿದ್ದೇವೆ ಎನ್ನುತ್ತಾರೆ ಸಿದ್ಧಾಪುರ ಉಪವಲಯ ಅರಣ್ಯಾಧಿಕಾರಿ ರವಿ.
"

ಬೇಸಿಗೆಯಲ್ಲಿ ಅರಣ್ಯದೊಳಗೂ ಸಹ ನೀರಿನ ಕೊರತೆ ಉಂಟಾಗುತ್ತವೆ. ಕಾಡುಪ್ರಾಣಿಗಳು ನೀರನ್ನು ಅರಸುತ್ತ ಬಹಳ ದೂರ ಸಂಚರಿಸುತ್ತವೆ. ಈ ವೇಳೆ ಗ್ರಾಮಗಳತ್ತ ಬರುವ ಸಾಧ್ಯತೆ ಇರುತ್ತದೆ. ಅದರಿಂದ ಮಾನವ-ವನ್ಯಜೀವಿ ಸಂಘರ್ಷವೂ ಉಂಟಾಗಬಹುದು. ಕಾಡಿನೊಳಗೇ ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸಿದರೆ ಪ್ರಾಣಿಗಳು ಕಾಡು ಬಿಟ್ಟು ಹೊರಬರದು. ನೀರಿಲ್ಲದೆ ಕಂಗಾಲಾಗಿದ್ದ ಈ ಭಾಗದ ಕಾಡುಪ್ರಾಣಿಗಳಿಗೆ ನಾವು ನಿರ್ಮಿಸಿರುವ ನೀರಿನ ತೊಟ್ಟಿಗಳು ಆಸರೆಯಾಗಿವೆ.

— ಗಣಪತಿ ವಿ. ನಾಯ್ಕ್​. ಸಿದ್ಧಾಪುರ ವಿಭಾಗ ವಲಯ ಅರಣ್ಯಾಧಿಕಾರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net