ಪ್ರಥಮ 'ರ್ಯಾಂಕ್​' ಕನಸು ಭಗ್ನ

ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿ ಪ್ರೀತಮ್​ ಜಿ. ಪೂಜಾರಿಯನ್ನು ಶಾಲೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಡಿಡಿಪಿಐ ಲೋಕೇಶ್​ ಸಿ., ಶಾಲೆಯ ಸಂಸ್ಥಾಪಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಯ ತಾಯಿ ನಾಗರತ್ನಾ ಇದ್ದರು.
ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿ ಪ್ರೀತಮ್​ ಜಿ. ಪೂಜಾರಿಯನ್ನು ಶಾಲೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಡಿಡಿಪಿಐ ಲೋಕೇಶ್​ ಸಿ., ಶಾಲೆಯ ಸಂಸ್ಥಾಪಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಯ ತಾಯಿ ನಾಗರತ್ನಾ ಇದ್ದರು.
Published on

* ಮತ್ತೆ ದ್ವಿತೀಯ ಸ್ಥಾನ ಕಾಪಾಡಿಕೊಂಡ ಉಡುಪಿ ಜಿಲ್ಲೆ

* ಎಸ್​ಎಸ್​ಎಲ್​ಸಿಯಲ್ಲಿ ಫಲಿತಾಂಶ ಏರಿಕೆಯ ಸಂತಸ

ಉಡುಪಿ: ಈ ಬಾರಿಯ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 'ಪ್ರಥಮ ರ್ಯಾಂಕ್​' ಗಳಿಸಲೇಬೇಕೆಂಬ ಉಡುಪಿ ಜಿಲ್ಲೆಯ ಕನಸು ಭಗ್ನಗೊಂಡಿದೆ. ಆದರೆ, ಶೈಕ್ಷಣಿಕ ಸಾಧನೆ ಮೂಲಕ ರಾಜ್ಯದ ಗಮನ ಸೆಳೆಯುವ ಇಲ್ಲಿನ ವಿದ್ಯಾರ್ಥಿಗಳು, ಜಿಲ್ಲೆಗೆ 2ನೇ ಸ್ಥಾನ ಕೈತಪ್ಪಿ ಹೋಗದಂತೆ ಕಾಪಾಡಿದ್ದಾರೆ. ತನ್ಮೂಲಕ ಜಿಲ್ಲೆಯ ಸಾಧನೆಯನ್ನು ಸ್ಥಿರವಾಗಿ ಇಡುವಲ್ಲಿ ಯಶರಾಗಿದ್ದಾರೆ.
ಕಳೆದ ಹತ್ತು ವರ್ಷದಲ್ಲಿ 4 ಬಾರಿ ಪ್ರಥಮ, 2 ಬಾರಿ ದ್ವಿತೀಯ ಹಾಗೂ 2 ಬಾರಿ ಟಾಪ್​ ಟೆನ್​ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದ ಉಡುಪಿ ಜಿಲ್ಲೆ ಈ ಬಾರಿ ಮತ್ತೊಮ್ಮೆ 'ಫಸ್ಟ್​ ಪ್ಲೇಸ್​'ನತ್ತ ಚಿತ್ತ ನೆಟ್ಟಿತ್ತು. ಅದಕ್ಕೆಂದೇ ಇಲಾಖೆ ಹಲವು ರೀತಿಯಲ್ಲಿ ಶೈಕ್ಷಣಿಕ ಚಟುವಟಿಕೆ ನಡೆಸಿ, ಮಕ್ಕಳನ್ನು ಸಜ್ಜುಗೊಳಿಸಿತ್ತು.

ಶೇಕಡಾವಾರು ಫಲಿತಾಂಶ ಹೆಚ್ಚಳ

ಉಡುಪಿ ಜಿಲ್ಲೆಯ 51 ಕೇಂದ್ರಗಳಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆದಿದ್ದು, ಒಟ್ಟು 14,151 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು. ಕಳೆದ ವರ್ಷ (2024-25) ಉಡುಪಿ ಜಿಲ್ಲೆಯು ಶೇ.93.94 ಫಲಿತಾಂಶ ಗಳಿಸುವ ಮೂಲಕ ರಾಜ್ಯಕ್ಕೆ 2ನೇ ಸ್ಥಾನ ಗಳಿಸಿತ್ತು. ಈ ಬಾರಿ ಶೇ. 98.18 ಫಲಿತಾಂಶ ಗಳಿಸಿ ಮತ್ತೊಮ್ಮೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಬಂದಿದೆ. ಶೇ.4.24 ಹೆಚ್ಚು ಫಲಿತಾಂಶ ಗಳಿಸಿರುವುದು ಉಡುಪಿ ಜಿಲ್ಲೆಯ ಹೆಗ್ಗಳಿಕೆಯಾಗಿದೆ.

ಶಿಕ್ಷಕರಿಗೂ ತರಬೇತಿ

ಈ ಬಾರಿಯ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಲೇಬೇಕೆಂಬ ನಿಟ್ಟಿನಲ್ಲಿ 2025-26ನೇ ಸಾಲಿನ ಶೈಕ್ಷಣಿಕ ದಿನದ ಆರಂಭದಿಂದಲೇ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಎಸ್​ಎಸ್​ಎಲ್​ಸಿ ಮಕ್ಕಳಿಗೆ ವಿಶೇಷ ತರಗತಿ ನಡೆಸಲಾಗಿತ್ತು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ, ಅವರೂ ಹೆಚ್ಚು ಅಂಕ ಗಳಿಸುವಂತಾಗಲು ವಿಷಯವಾರು ಹೆಚ್ಚುವರಿ ಕ್ಲಾಸ್​ ನಡೆಸಲಾಗಿತ್ತು. ಫಲಿತಾಂಶದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದ್ದರಿಂದ ಎಲ್ಲ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರಿಗೂ ಡಯಟ್​ನಿಂದ 'ಪ್ರೇರಣಾ' ತರಬೇತಿ ನೀಡಲಾಗಿತ್ತು. ಇದರ ಪರಿಣಾಮದಿಂದ ಪ್ರಥಮ ಸ್ಥಾನಕ್ಕೇರಲು ಸಾಧ್ಯವಾಗದಿದ್ದರೂ ದ್ವಿತೀಯ ಸ್ಥಾನ ಉಳಿಸಿಕೊಂಡು, ಫಲಿತಾಂಶ ಹೆಚ್ಚಳ ಮಾಡಿಕೊಳ್ಳಲು ಸಹಕಾರಿಯಾಗಿದೆ.

ಬಸ್​ ಕಂಡಕ್ಟರ್​ನ ಮಗ ಟಾಪರ್​!

ಪ್ರಸಕ್ತ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಖಾಸಗಿ ಬಸ್​ ಕಂಡಕ್ಟರ್​ನ ಪುತ್ರ, ಕುಂದಾಪುರ ತಾಲೂಕಿನ ಶಂಕರನಾರಾಯಣದ ಮದರ್​ ಥೆರೆಸಾ ಮೆಮೋರಿಯಲ್​ ಪ್ರೌಢಶಾಲೆಯ ವಿದ್ಯಾರ್ಥಿ ಪ್ರೀತಮ್​ ಜಿ. ಪೂಜಾರಿ 625ಕ್ಕೆ 625 ಅಂಕ ಗಳಿಸಿದ್ದು, ರಾಜ್ಯದ 7 ಟಾಪರ್​ಗಳಲ್ಲಿ ಒಬ್ಬನಾಗಿದ್ದಾನೆ. ಅಲ್ಲದೆ, ಉಡುಪಿ ಜಿಲ್ಲೆಗೂ ಪ್ರಥಮ ಸ್ಥಾನ ಗಳಿಸಿಕೊಟ್ಟಿದ್ದಾನೆ. ಬಿದ್ಕಲ್ಕಟ್ಟೆ ನಿವಾಸಿ ಗಣಪತಿ ಪೂಜಾರಿ, ನಾಗರತ್ನಾ ದಂಪತಿಯ ಇಬ್ಬರ ಮಕ್ಕಳಲ್ಲಿ ಪ್ರೀತಮ್​ ಹಿರಿಯ ಪುತ್ರನಾಗಿದ್ದಾನೆ. ತಂದೆ ಗಣಪತಿ ಅವರು ಶ್ರೀಲಕ್ಷ್ಮೀ ಎಕ್ಸ್​ಪ್ರೆಸ್​ ಖಾಸಗಿ ಬಸ್​ನ ಕಂಡಕ್ಟರ್​ ಆಗಿದ್ದಾರೆ. ತಾಯಿ ಗೃಹಿಣಿಯಾಗಿದ್ದಾರೆ. ಎಲ್​ಕೆಜಿಯಿಂದಲೂ ಮದರ್​ ಥೆರೆಸಾ ಶಾಲೆಯಲ್ಲೇ ಪ್ರೀತಮ್​  ಕಲಿತಿದ್ದನು.

ಹತ್ತು ವರ್ಷದ  ಲಿತಾಂಶ ವಿವರ

ಕ್ರ.ಸಂ.          ವರ್ಷ           ಲಿತಾಂಶ %          ಸ್ಥಾನ
1)               2015           93.37                   1
2)              2016            89.64                   2
3)              2017            84.23                   1
4)              2018            88.30                    1
5)              2019            89.49                    5
6)              2020            86.48                    9
7)              2021            100                   ಕರೊನಾ
8)              2022            89.46                  13
9)              2023            91.00                  17
10)            2024            88.69                   1
11)             2025           93.94                   2   
"

ಹೆಚ್ಚಿನ ಅಂಕ ಗಳಿಸಬೇಕೆಂದು ನಿರ್ಧರಿಸಿದ್ದೆ. ಅದಕ್ಕಾಗಿ ಅಂದಿನ ಪಾಠವನ್ನು ಅಂದೇ ಓದಿ ಮುಗಿಸಿಕೊಳ್ಳುತ್ತಿದ್ದೆ. ಅಂತಿಮ ಪರೀಕ್ಷೆಗಾಗಿ ಎಲ್ಲ ವಿಷಯದ ಪಠ್ಯವನ್ನು ಓದಲು ತಿಂಗಳ ಗುರಿ ಇಟ್ಟುಕೊಂಡಿದ್ದೆ. ಅದಕ್ಕೆ ಪಾಲಕರು, ಶಾಲೆಯ ಎಲ್ಲ ವಿಷಯ ಶಿಕ್ಷಕರು ಪ್ರೋತ್ಸಾಹ, ಮಾರ್ಗದರ್ಶನ ನೀಡಿದ್ದರು. ಇದು ಪೂರ್ಣ ಅಂಕ ಗಳಿಸಲು, ಸಾಧನೆ ಮಾಡಲು ಸಹಕಾರವಾಯಿತು. ಮುಂದೆ ವಿಜ್ಞಾನ ವಿಭಾಗದಲ್ಲಿ ಪಿಸಿಎಂಸಿಎಸ್​ ಓದಿ ಜೆಇಇ ಮಾಡುವ ಮನಸ್ಸಿದೆ.

"

ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಶೇ.98.18 ಫಲಿತಾಂಶ ಗಳಿಸಿ ರಾಜ್ಯಕ್ಕೆ ಎರಡನೇ ಸ್ಥಾನ ಭದ್ರಪಡಿಸಿಕೊಂಡ ಉಡುಪಿ ಜಿಲ್ಲೆಯ ಸಾಧನೆ ಸಂತಸ ತಂದಿದೆ. ಉಡುಪಿ ಶೈಕ್ಷಣಿಕವಾಗಿ ಮುಂದಿರುವ ಜಿಲ್ಲೆಯಾಗಿದ್ದರಿಂದ ಅನ್ಯ ಜಿಲ್ಲೆಗಳ ವಿದ್ಯಾರ್ಥಿಗಳೂ ಇಲ್ಲಿಗೆ ಬಂದು ವ್ಯಾಸಂಗ ಮಾಡುತ್ತಾರೆ. ಎರಡನೇ ಸ್ಥಾನ ಗಳಿಕೆಯಲ್ಲಿ ಕಾರಣೀಕರ್ತರಾದ ಜಿಲ್ಲಾ ಶಿಕ್ಷಣ ಇಲಾಖೆಯವರಿಗೆ, ಎಲ್ಲ ಪ್ರೌಢಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವ ಕುಂದಾಪುರದ ಶಂಕರನಾರಾಯಣ ಮದರ್​ ಥೆರೆಸಾ ಮೆಮೋರಿಯಲ್​ ಸ್ಕೂಲ್​ನ ಪ್ರೀತಮ್​ ಜಿ. ಪೂಜಾರಿ ಅವರಿಗೂ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ.

"

ರಾಜ್ಯಕ್ಕೆ ಈ ಬಾರಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಬರುತ್ತದೆಂಬ ಖಚಿತ ವಿಶ್ವಾಸ ನಮಗಿತ್ತು. ಆದರೆ, ಕೇವಲ 0.22 ಫಲಿತಾಂಶ ಹೆಚ್ಚಳದಲ್ಲಿ ದ.ಕ. ಜಿಲ್ಲೆ ಪ್ರಥಮ ಸ್ಥಾನ ಗಳಿಸಿದೆ. ನಮ್ಮ ಇಲಾಖೆಯ ಮೂಲಕ ಜಿಲ್ಲೆ, ತಾಲೂಕು, ಹೋಬಳಿ ಹಂತದ ಎಲ್ಲ ಅನುಷ್ಠಾನಾಧಿಕಾರಿಗಳು ಶಾಲೆ, ಮನೆ ಹಾಗೂ ಹಾಸ್ಟೆಲ್​ಗಳಿಗೆ ಭೇಟಿ ನೀಡಿ ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳಿಗೆ ಸಂವಾದದ ಮೂಲಕ ಅಗತ್ಯ ಮಾರ್ಗದರ್ಶನವನ್ನೂ ನೀಡಿದ್ದೆವು. ಈ ವರ್ಷ ಪ್ರಥಮ ಸ್ಥಾನ ಗಳಿಸಲು ಎಲ್ಲ ರೀತಿಯಲ್ಲೂ ಶೈಕ್ಷಣಿಕ ಚಟುವಟಿಕೆ ನಡೆಸಿದ್ದೆವು. ಪ್ರಥಮ ಸ್ಥಾನದ ಕನಸು ಕೂದಲೆಳೆಯಲ್ಲಿ ತಪ್ಪಿದ್ದರಿಂದ ಸಹಜವಾಗಿ ಸ್ವಲ್ಪ ಬೇಸರವಾಗಿದೆ. ಆದರೆ, ತಮ್ಮ ಸಾಮರ್ಥ್ಯ ತೋರಿದ ಎಲ್ಲ ವಿದ್ಯಾರ್ಥಿಗಳಿಗೆ, ಶಿಕ್ಷಕರು ಹಾಗೂ ಸಹಕರಿಸಿದ ಪಾಲಕರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net