

ಉಡುಪಿ: ಉಡುಪಿಯ ನೂತನ ಜಿಲ್ಲಾಸ್ಪತ್ರೆ ಕಟ್ಟಡ ಉದ್ಘಾಟನೆಗೊಳಿಸಿ ಬಡವರಿಗೆ ಹಾಗೂ ಅಗತ್ಯ ಇರುವವರಿಗೆ ಚಿಕಿತ್ಸೆ ಕೊಡಿ ಎಂಬ ಬೇಡಿಕೆಯೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ವತಿಯಿಂದ ನಡೆಯುತ್ತಿದ್ದ ಉಪವಾಸ ಸತ್ಯಾಗ್ರಹ ಅಂತ್ಯಗೊಂಡಿದೆ. ಐದನೇ ದಿನವಾದ ಸೋಮವಾರ ಜಿಲ್ಲಾಡಳಿತದ ಭರವಸೆ ಹಿನ್ನೆಯಲ್ಲಿ ಪ್ರತಿಭಟನೆ ಮುಕ್ತಾಯಗೊಳಿಸಲಾಯಿತು.
ಉಡುಪಿಯ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಬಸವರಾಜ್ ಹುಬ್ಬಳ್ಳಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ನೂತನ ಜಿಲ್ಲಾಸ್ಪತ್ರೆಗೆ ಯಂತ್ರೋಪಕರಣಗಳ ಅಳವಡಿಕೆ ಕಾರ್ಯವನ್ನು ನಾಳೆಯಿಂದಲೇ ಆರಂಭಿಸುವುದಾಗಿ ತಿಳಿಸಿದರು. ಅಲ್ಲದೆ, ನ.5ರೊಳಗೆ ಚಿಕಿತ್ಸೆ ಆರಂಭಿಸುವ ಭರವಸೆಯನ್ನೂ ನೀಡಿದರು.
ತಾವುಗಳು ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸಬೇಕೆಂದು ತಿಳಿಸಿದ ಎಡಿಸಿ ಅಬೀದ್ ಗದ್ಯಾಳ್, ತಂಪು ಪಾನೀಯವನ್ನು ಪ್ರತಿಭಟನಾ ನಿರತರಿಗೆ ಕುಡಿಸಿದರು. ಬಳಿಕ ಕರವೇ ಕಾರ್ಯಕರ್ತರು ಪ್ರತಿಭಟನೆ ಮುಕ್ತಾಯಗೊಳಿಸಿದರು.
ರಾಜ್ಯ ಸಂಚಾಲಕ ಪ್ರಸನ್ನಕುಮಾರ್ ಶೆಟ್ಟಿ, ಜಿಲ್ಲಾ ಗೌರವಾಧ್ಯಕ್ಷ ಅನ್ಸಾರ್ ಅಹಮ್ಮದ್, ಜಿಲ್ಲಾಧ್ಯಕ್ಷ ಸುಧೀರ್ ಪೂಜಾರಿ, ಮಹಿಳಾ ಜಿಲ್ಲಾಧ್ಯಕ್ಷೆ ದೇವಕಿ ಬಾರ್ಕೂರು, ಜಿಲ್ಲಾ ಸಂಚಾಲಕ ಎಂ.ಎಸ್. ಸೈಯದ್ ನಿಜಾಮುದ್ದೀನ್, ಉಪಾಧ್ಯಕ್ಷ ಅಲ್ಫಾನ್ಸೋ ಮೆನೇಜಸ್ ಸೇರಿದಂತೆ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.