ವಸತಿ ಸಮುಚ್ಚಯಗಳಿಂದ ಜಲಮಾಲಿನ್ಯವಾದರೆ ಕಾನೂನು ಕ್ರಮ: ಜಿಲ್ಲಾಧಿಕಾರಿ

ಜಲತ್ಯಾಜ್ಯ ನಿರ್ವಹಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿದರು.
ಜಲತ್ಯಾಜ್ಯ ನಿರ್ವಹಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿದರು.
Published on
ಉಡುಪಿ: ವಸತಿ ಹಾಗೂ ಬಹುಮಹಡಿ ವಸತಿ ಸಮುಚ್ಛಯಗಳು ಕೊಳಚೆ ಹಾಗೂ ತ್ಯಾಜ್ಯ ನೀರುಗಳನ್ನು ಶುದ್ದೀಕರಣ ಮಾಡದೇ ತೋಡು, ನದಿಗೆ ಬಿಟ್ಟು ಜಲಮಾಲಿನ್ಯ ಉಂಟುಮಾಡಿದರೆ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ತಿಳಿಸಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಲತ್ಯಾಜ್ಯ ನಿರ್ವಹಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಗರಸಭೆ ವ್ಯಾಪ್ತಿಯಲ್ಲಿ ವಸತಿ ಸಮುಚ್ಛಯಗಳು ತ್ಯಾಜ್ಯ ನಿರ್ವಹಣಾ ಘಟಕವಿಲ್ಲದೆ ಕಲುಷಿತ ನೀರುಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡದೇ ತೋಡುಗಳಿಗೆ ಬಿಟ್ಟು ಇಂದ್ರಾಳಿ ನದಿಗೆ ಬಿಡುತ್ತಿದ್ದಾರೆ. ಈ ಬಗ್ಗೆ ಎಂ.ಐ.ಟಿ ಸಂಸ್ಥೆಯ ವತಿಯಿಂದ ಸವಿಸ್ತಾರವಾದ ಸರ್ವೇ ಕಾರ್ಯ ಕೈಗೊಂಡಿದ್ದು, ಕೆಲವು ವಸತಿ ಹಾಗೂ ಸಮುಚ್ಛಯಗಳು ನೇರವಾಗಿ ನದಿಗೆ ಬಿಡುತ್ತಿರುವ ಬಗ್ಗೆ ಡ್ರೋನ್​ ಸರ್ವೇಗಳಲ್ಲಿ ಕಂಡುಬಂದಿದೆ ಎಂದರು.

ಕಡ್ಡಾಯವಾಗಿ ಸೇಫ್ಟಿ ಟ್ಯಾಂಕ್​ಗಳ ಬಳಕೆಯೊಂದಿಗೆ ತ್ಯಾಜ್ಯ ನಿರ್ವಹಣೆಗೆ ಮುಂದಾಗಬೇಕು. ಸಕ್ಕಿಂಗ್​ ಯಂತ್ರಗಳ ಬಳಕೆಯೊಂದಿಗೆ ಘನ ತ್ಯಾಜ್ಯಗಳನ್ನು ವೈಜ್ಞಾನಿಕ ವಿಲೇವಾರಿಗೆ ಮುಂದಾಗಬೇಕು. ನಗರ ವ್ಯಾಪ್ತಿಯಲ್ಲಿ ಎಲ್ಲಾ ವಸತಿ ಸಮುಚ್ಚಯಗಳು ತ್ಯಾಜ್ಯ ನೀರಿನ ಶುದ್ಧಿಕರಣ ಘಟಕಗಳನ್ನು ನಿರ್ವಹಿಸುವುದರೊಂದಿಗೆ ಜಲಮಾಲಿನ್ಯ ಸಮಸ್ಯೆಯನ್ನು ಪರಿಹರಿಸಲು ಮುಂದಾಗಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಡಾ. ಉದಯ್​ ಕುಮಾರ್​ ಶೆಟ್ಟಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ, ಪೌರಾಯುಕ್ತ ಮಹಾಂತೇಶ ಹಂಗರಗಿ, ಎಂ.ಐ.ಟಿ ಅಸೋಸಿಯೇಟ್​ ಡೈರೆಕ್ಟರ್​ ಡಾ. ರಾಘವೇಂದ್ರ ಹೊಳ್ಳ, ಶಿಲ್ಪಾ ಭಟ್​ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net