ಒಂದೇ ಗ್ರಾಮದಲ್ಲಿ ಎರಡು ಪಿಯು ಕಾಲೇಜು!

 ಲಿಂಟೆಲ್ ಹಂತದಲ್ಲಿರುವ ಹರೇಕಳ ಹಾಜಬ್ಬರ ಕಾಲೇಜು ಕಟ್ಟಡ
ಲಿಂಟೆಲ್ ಹಂತದಲ್ಲಿರುವ ಹರೇಕಳ ಹಾಜಬ್ಬರ ಕಾಲೇಜು ಕಟ್ಟಡ
Published on
ಅನ್ಸಾರ್ ಇನೊಳಿ ಉಳ್ಳಾಲ
ಸಾಕಷ್ಟು ಮಕ್ಕಳಿದ್ದು ಬೇಡಿಕೆ ಇರುವಲ್ಲೇ ಪಿಯು ಕಾಲೇಜು ಬೇಡಿಕೆ ಸ್ಥಾಪಿಸುವುದು ಕಷ್ಟ ಎನಿಸಿದೆ. ಈಗಾಗಲೇ ಇರುವ ಕಾಲೇಜುಗಳಿಗೆ ಮೂಲಸೌಕರ್ಯ ಒದಗಿಸುವುದು ಸವಾಲೆನಿಸಿದೆ. ಈ ನಡುವೆ ನರಿಂಗಾನ ಗ್ರಾಮದಲ್ಲಿ ಎರಡನೇ ಪದವಿ ಪೂರ್ವ ಕಾಲೇಜು ಆರಂಭಗೊಂಡಿದ್ದು, ಸೋಮವಾರದಿಂದ ಅಧಿಕೃತವಾಗಿ ಕಾರ್ಯಾರಂಭಗೊಂಡಿದೆ.

ಗಡಿಭಾಗದ ಮಕ್ಕಳಿಗೆ ಅನುಕೂಲ

ನರಿಂಗಾನ ಗ್ರಾಮದ ಮೊಂಟೆಪದವಿನಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಈಗಾಗಲೇ ಎಲ್ ಕೆಜಿಯಿಂದ ಪದವಿ ಕಾಲೇಜುವರೆಗೆ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇದ್ದಾರೆ. ಈಗ ಕಲ್ಲರಕೋಡಿಯಲ್ಲಿ ವಾಣಿಜ್ಯ ವಿಭಾಗದ ಮೂಲಕ ಪಿಯು ಕಾಲೇಜು ಆರಂಭಿಸಲಾಗಿದ್ದು, 25 ಮಕ್ಕಳು ದಾಖಲಾಗಿದ್ದಾರೆ. ಕಳೆದ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ 26 ಮಕ್ಕಳಿದ್ದರೆ, ಈ ಬಾರಿ 25 ಮಕ್ಕಳಿದ್ದಾರೆ.
ಈ ಶಾಲೆಯಲ್ಲಿ ಎಲ್‌ಕೆಜಿಯಿಂದ ಹತ್ತನೇ ತರಗತಿವರೆಗೆ 220 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಒಟ್ಟು ಐದು ಎಕರೆ ಜಮೀನು ಇದೆ. ಪ್ರೌಢಶಾಲೆಯ ಕಟ್ಟಡದ ಮೇಲ್ಭಾಗದಲ್ಲೇ ಪಿಯು ಕಾಲೇಜಿಗೆ ಕೋಣೆಗಳನ್ನು ನಿರ್ಮಿಸಲಾಗಿದೆ. ಕೇರಳ- ಕರ್ನಾಟಕ ಗಡಿಭಾಗದಲ್ಲಿರುವ ಕಾಲೇಜು ಸ್ಥಳೀಯ ಮಕ್ಕಳ ಎಸ್ಸೆಸ್ಸೆಲ್ಸಿ ನಂತರದ ಶಿಕ್ಷಣ ಮುಂದುವರಿಸಲು ಅನುಕೂಲ ಆಗಲಿದೆ.

ಮೂರು ತಿಂಗಳಲ್ಲೇ ಕಾರ್ಯಗತ

ಕಳೆದ ಫೆ.16ರಂದು ಕಲ್ಲರಕೋಡಿ ಪ್ರೌಢಶಾಲೆಗೆ ನೂತನ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸಕ್ಕೆಂದು ಶಾಸಕರು ಆಗಮಿಸಿದ್ದ ಸಂದರ್ಭ ಪದವಿ ಪೂರ್ವ ಕಾಲೇಜು ಮಂಜೂರುಗೊಳಿಸುವ ಭರವಸೆ ನೀಡಿದ ಕೇವಲ ಒಂದು ತಿಂಗಳೊಳಗೆ ಕಾಲೇಜು ಮಂಜೂರು ಮಾಡಿಸಿದ್ದರು. ಸರ್ಕಾರದ ಆದೇಶದಂತೆ ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಲಾದ ರಾಜ್ಯದ 51 ಸರ್ಕಾರಿ ಪ್ರೌಢಶಾಲೆಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಿಂದ ವಿಟ್ಲ ಪ್ರೌಢಶಾಲೆ ಹಾಗೂ ನರಿಂಗಾನ ಗ್ರಾಮದ ಕಲ್ಲರಕೋಡಿ ಪ್ರೌಢಶಾಲೆಗೆ ಪಿಯು ಕಾಲೇಜು ಭಾಗ್ಯ ಲಭಿಸಿತ್ತು. ಈ ಶೈಕ್ಷಣಿಕ ಸಾಲಿನಿಂದಲೇ ಕಾಲೇಜು ಆರಂಭಗೊಳ್ಳುವುದು ಬಹುತೇಕ ಖಚಿತ ಆಗಿದ್ದರಿಂದ ಕಾಲೇಜು ಅಭಿವೃದ್ಧಿ ಸಮಿತಿ ನಾಲ್ಕು ತರಗತಿಗೆ ಕೊಠಡಿಗಳ ಸಹಿತ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿತ್ತು.
ಮೇ 30ರಂದು ಕಾಲೇಜು ಆರಂಭಕ್ಕೆ ಸರ್ಕಾರದಿಂದ ಅಧಿಕೃತ ಆದೇಶ ಬಂದಿದ್ದು, ಮೊಂಟೆಪದವು ಕೆಪಿಎಸ್‌ನ ವಾಣಿಜ್ಯ ವಿಭಾಗ ಉಪನ್ಯಾಸಕಿ ಹರಿಣಾಕ್ಷಿ ಬಿ. ಅವರನ್ನು ಪ್ರಾಂಶುಪಾಲರನ್ನಾಗಿ ನಿಯೋಜಿಸಲಾಗಿದೆ. ಇತರ ಉಪನ್ಯಾಸಕರ ನೇಮಕಾತಿಯನ್ನೂ ಸರ್ಕಾರ ಪೂರ್ಣಗೊಳಿಸಿದೆ. ಕಚೇರಿ ಸಿಬ್ಬಂದಿಗಾಗಿ ಸ್ಥಳೀಯರನ್ನು ನೇಮಿಸಲಾಗಿದೆ. ಈ ವರ್ಷ ವಾಣಿಜ್ಯ ವಿಭಾಗ ಆರಂಭಗೊಂಡಿದ್ದು ಕಂಪ್ಯೂಟರ್ ಸೈನ್ಸ್ ಕಲಿಯುವ ಅವಕಾಶವೂ ಇದೆ. ಮುಂದಿನ ವರ್ಷ ವಿಜ್ಞಾನ ವಿಭಾಗ ಆರಂಭಿಸುವ ಯೋಚನೆ ಇದೆ.

ಕಾಲೇಜು ಮಂಜೂರುಗೊಳಿಸಿದರೂ ಅದರ ಬೆನ್ನುಬಿದ್ದು ಕಾರ್ಯಗತಗೊಳಿಸುವಲ್ಲಿ ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಸ್ಥಳೀಯರ ಪರಿಶ್ರಮ ಪ್ರಮುಖ. ಇಂತಹ ವ್ಯವಸ್ಥೆ ಆಗುತ್ತದೆ ಎಂದು ಯಾರೂ ಕನಸಲ್ಲೂ ನೆನೆಸಿರಲಿಲ್ಲ. ಯಾವುದು ಮಾಡಲು ಅಸಾಧ್ಯವೋ ಅದನ್ನು ಸಾಧ್ಯವಾಗಿಸುವುದೇ ನಮ್ಮ ಉದ್ದೇಶ.

ಗ್ರಾಮಕ್ಕೆ ಏನೆಲ್ಲಾ ಬೇಕೋ ಅವೆಲ್ಲವನ್ನೂ ಮಾಡುವವರಿದ್ದರೆ ಅಂತಹ ಗ್ರಾಮವನ್ನು ಅಭಿವೃದ್ಧಿಯಿಂದ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನರಿಂಗಾನ ಗ್ರಾಮಕ್ಕೆ ಬೇಕಾದ ಮೂಲಸೌಕರ್ಯ ಕಲ್ಪಿಸುವಲ್ಲಿ ನವಾಜ್ ಮತ್ತವರ ತಂಡ ಶ್ರಮಿಸಿದ ಫಲವಾಗಿ ಇಂದು ಎರಡನೇ ಪಿಯು ಕಾಲೇಜು ಆರಂಭಗೊಳ್ಳುವಂತಾಗಿದೆ.

ಕಲ್ಲರಕೋಡಿ ಹಾಗೂ ಸುತ್ತಮುತ್ತಲಿನ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಅನೇಕ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ನಂತರದ ಶಿಕ್ಷಣಕ್ಕಾಗಿ ಎರಡ್ಮೂರು ಬಸ್ಸುಗಳನ್ನು ಬದಲಾ ಯಿಸಬೇಕಾಗುತ್ತದೆ ಎನ್ನುವ ಕಾರಣಕ್ಕೆ ಶಿಕ್ಷಣ ಮೊಟಕುಗೊಳಿಸುತ್ತಿದ್ದರು. ಇದರಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಅಧಿಕವಾಗಿತ್ತು. ನೂತನ ಕಾಲೇಜಿನಿಂದ ಆಸುಪಾಸಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net