ಎಂಡಿಎಂಎ ಸಹಿತ ಇಬ್ಬರ ಬಂಧನ

Crime
Crime
Published on
ಕಾಸರಗೋಡು: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ 139.29 ಗ್ರಾಂ ಮಾದಕದ್ರವ್ಯ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ವಿದೇಶಿ ಪ್ರಜೆ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಘಾನಾ ನಿವಾಸಿ ವಿಕ್ಟರ್ ದಸಾಬೆ(37) ಹಾಗೂ ಗುಜರಾತ್ ಅಹಮ್ಮದಾಬಾದ್ ಲಾಬ್ ನಿವಾಸಿ, ಪ್ರಸ್ತುತ ಪಶ್ಚಿಮ ಬಂಗಾಳ ಹೌರ ಜಿಲ್ಲೆಯ ನರೇಂದ್ರಪುರ್‌ನಲ್ಲಿ ವಾಸಿಸುತ್ತಿರುವ ರಿಯಾಬಾನ್ಸ್ ಅಲಿಯಾಸ್ ದಾಸ್ ಬೇಬಿ(31) ಬಂಧಿತರು. ಎಸ್‌ಪಿ ನಿತಿನ್‌ರಾಜ್ ನಿರ್ದೇಶನದಂತೆ ಡಿವೈಎಸ್‌ಪಿ ಅನಿಲ್ ಕುಮಾರ್ ನೇತೃತ್ವದ 17 ಮಂದಿ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಆರೋಪಿಗಳನ್ನು ಬಂಧಿಸಿದೆ.
ವಿಕ್ಟರ್ ದಸಾಬೆ ಅಂತಾರಾಷ್ಟ್ರೀಯ ಮಾದಕದ್ರವ್ಯ ಸಾಗಾಟದ ಪ್ರಧಾನ ಕೊಂಡಿಯಾಗಿದ್ದರೆ, ರಿಯಾಬಾನ್ಸ್ ಕೇರಳದಲ್ಲಿ ಮಾದಕದ್ರವ್ಯ ಸಾಗಾಟ ದಂಧೆಯ ಪ್ರಧಾನ ಕೊಂಡಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕೆಮ್ಮಿದ್ದಕ್ಕೆ ಅಡುಗೆ ಕೋಣೆಗೆ ನುಗ್ಗಿ ಹಲ್ಲೆ

ಕಾಸರಗೋಡು: ಉಪ್ಪಳದಲ್ಲಿ ಮನೆಯೊಂದರ ಅಡುಗೆ ಕೊಣೆಗೆ ನುಗ್ಗಿ ಪಾತ್ರೆಯಿಂದ ತಲೆಗೆ ಹೊಡೆದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ವಣಿಮುಂಡ ನಿವಾಸಿ ಜಂಶೀರ್ ಎಂಬಾತನ ವಿರುದ್ಧ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನನ್ನ ಮನೆಯೊಳಗೆ ನಾನು ಕೆಮ್ಮುತ್ತಿದ್ದ ದ್ವೇಷದಿಂದ ಆರೋಪಿ ಜಂಶೀರ್ ಹಲ್ಲೆ ನಡೆಸಿರುವುದಾಗಿ ಉಪ್ಪಳ ಮಂಗ್ಲಾಡಿ ಮಣಿಮುಂಡ ಸೈನಬ ಮಂಜಿಲ್‌ನ ಹಸೈನಾರ್ ಎ. ದೂರಿನಲ್ಲಿ ತಿಳಿಸಿದ್ದಾರೆ.

ಮನೆಯಿಂದ ವೃದ್ಧೆ ನಾಪತ್ತೆ

ಕಾಸರಗೋಡು: ಪಾಡಿಬೆಳ್ಳೂರು ನಗರದ ಇಮ್ರಾನ್ ವಳಪ್ಪು ನಿವಾಸಿ ಡಿ.ಗೋಪಾಲನ್ ನಾಯರ್ ಎಂಬುವರ ಪತ್ನಿ ದಾಕ್ಷಾಯಿಣಿ ಅಮ್ಮ (78) ನಾಪತ್ತೆಯಾಗಿರುವ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ರಾತ್ರಿ ಮನೆಯಿಂದ ನಾಪತ್ತೆಯಾಗಿದ್ದು, ಕಾಸರಗೋಡು ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಮನೆ ಆಸುಪಾಸಿನ ಮೂರು ಕೆರೆಗಳಲ್ಲಿ ಸ್ಕೂೃಬಾ ಸಹಾಯದಿಂದ ಶೋಧ ನಡೆಸಿದರೂ ಪತ್ತೆಯಾಗಿಲ್ಲ. ಮನೆಯವರು ನೀಡಿದ ದೂರಿನಂತೆ ವಿದ್ಯಾನಗರ ಠಾಣೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಯುವಕನ ಮೃತದೇಹ ಪತ್ತೆ

ಕಾಸರಗೋಡು: ತ್ರೈಕಡಪುರ ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನಾಪತ್ತೆಯಾಗಿದ್ದ ಕಾಲಿಚ್ಛಾನಡ್ಕ ನಿವಾಸಿ ಹನೀಫ-ರಹ್ಮತ್ ದಂಪತಿ ಪುತ್ರ ಅಜ್ಮಲ್ ಮೃತದೇಹ ಪತ್ತೆಯಾಗಿದೆ. ತ್ರೈಕಡಪುರದಲ್ಲಿ ಮಂಗಳವಾರ ಬೆಳಗ್ಗೆ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ಅಳಿವೆ ಬಾಗಿಲು ಸಮೀಪ ಸಮುದ್ರದಲ್ಲಿ ತೇಲುತ್ತಿದ್ದ ಮೃತದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರ ನಿರ್ದೇಶನದಂತೆ ಮೀನುಗಾರರು ಬೋಟ್‌ನಲ್ಲಿ ಮೃತದೇಹವನ್ನು ದಡಕ್ಕೆ ತಲುಪಿಸಿದ್ದಾರೆ. ಮೃತದೇಹವನ್ನು ಕಾಞಂಗಾಡ್‌ನ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ. ಕಳೆದ ಶನಿವಾರ ಸಂಜೆ ಅಜ್ಮಲ್ ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಅಲೆಗಳಿಗೆ ಸಿಲುಕಿ ನಾಪತ್ತೆಯಾಗಿದ್ದರು. ಕರಾವಳಿ ಪೊಲೀಸರ ರಕ್ಷಣಾ ಬೋಟ್‌ಗಳ ಮೂಲಕ ಸಮುದ್ರದಲ್ಲಿ ಹುಡುಕಾಟ ನಡೆಸಿದರೂ ಅಜ್ಮಲ್ ಪತ್ತೆಯಾಗಿರಲಿಲ್ಲ.

ಮನೆ ಬೀಗ ಒಡೆದು ನಗದು ಕಳವು

ಕಾಸರಗೋಡು: ಕುಂಜತ್ತೂರು ಸನಿಹದ ತೂಮಿನಾಡು ನಿವಾಸಿ ಸತೀಶ್ ಎಂಬುವರ ಮನೆ ಬೀಗ ಒಡೆದು ನುಗ್ಗಿದ ಕಳ್ಳರು ಕಪಾಟಿನಲ್ಲಿರಿಸಿದ್ದ 3 ಸಾವಿರ ರೂ. ನಗದು ದೋಚಿದ್ದಾರೆ. ಓಣಂ ಹಬ್ಬದ ಹಿನ್ನೆಲೆ ಸತೀಶ್ ಅವರ ಕುಟುಂಬ ಕಳೆದ ಬುಧವಾರ ಸಂಬಂಧಿಕರ ಮನೆಗೆ ತೆರಳಿದ್ದು, ಸೋಮವಾರ ಬೆಳಗ್ಗೆ ಮನೆಗೆ ವಾಪಸಾದಾಗ ಬಾಗಿಲಿನ ಬೀಗ ಮುರಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಒಳಗೆ ತೆರಳಿ ನೋಡಿದಾಗ ಮೂರು ಕೊಠಡಿಗಳಲ್ಲಿರುವ ಕಪಾಟುಗಳ ಬೀಗ ಮುರಿದು ಬಟ್ಟೆ ಚೆಲ್ಲಾಪಿಲ್ಲಿಗೊಳಿಸಿದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಮಂಜೇಶ್ವರ ಠಾಣೆ ಸಿಐ ಎಂ.ವಿ.ವಿಷ್ಣುಪ್ರಸಾದ್ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿ ತಪಾಸಣೆ ನಡೆಸಿದೆ.

ವ್ಯಾಪಾರಿಗೆ ಹಲ್ಲೆಗೈದು ಕಾರಿನೊಂದಿಗೆ ತಂಡ ಪರಾರಿ

ಕಾಸರಗೋಡು: ಬಂದ್ಯೋಡಿನಲ್ಲಿ ಸೋಮವಾರ ಸಂಜೆ ವ್ಯಾಪಾರಿಯನ್ನು ತಡೆದು ನಿಲ್ಲಿಸಿ ಹಲ್ಲೆಗೈದ ತಂಡವೊಂದು ಬಳಿಕ ವ್ಯಾಪಾರಿಯ ಕಾರನ್ನು ಅಪಹರಿಸಿರುವ ಬಗ್ಗೆ ಕುಂಬಳೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂದ್ಯೋಡು ಮಲ್ಲಂಗೈ ನಿವಾಸಿ, ಬಂದ್ಯೋಡು ಹಾಗೂ ಮಂಗಳೂರಿನಲ್ಲಿ ವ್ಯಾಪಾರ ಸಂಸ್ಥೆ ಹೊಂದಿರುವ ಅಲಿ ಮುಕ್ತಾರ್(34) ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲಿ ಮುಕ್ತಾರ್ ಬಂದ್ಯೋಡಿನಿಂದ ಮನೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ದಾರಿ ಮಧ್ಯೆ ಕಾರನ್ನು ಅಡ್ಡಗಟ್ಟಿದ ಮೂರು ಮಂದಿಯ ತಂಡ, 50 ಸಾವಿರ ರೂ.ಗೆ ಬೇಡಿಕೆಯಿರಿಸಿದೆ. ಹಣ ನೀಡಲು ನಿರಾಕರಿಸಿದಾಗ ಅಲಿ ಮುಕ್ತಾರ್ ಅವರನ್ನು ಕಾರಿನಿಂದ ಎಳೆದು ಹಾಕಿ ಹಲ್ಲೆಗೈದ ತಂಡ ಅವರ ಐಫೋನ್ ಕಸಿದು ಅವರದೇ ಕಾರಿನಲ್ಲಿ ಪರಾರಿಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ಶಂಸೀರ್, ಅಯಾಸ್ ಸೇರಿದಂತೆ ಮೂರು ಮಂದಿ ಕೃತ್ಯವೆಸಗಿರುವುದಾಗಿ ಆಲಿ ಮುಕ್ತಾರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಕೆಲಸದ ಭರವಸೆಯೊಡ್ಡಿ ಅತ್ಯಾಚಾರ

ಕಾಸರಗೋಡು: ಉದ್ಯೋಗದ ಭರವಸೆ ನೀಡಿ 30ರ ಹರೆಯದ ಮಹಿಳೆಯನ್ನು ಅಂಬಲತ್ತರಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿ ಇರಿಯದ ಬಶೀರ್, ಪಳ್ಳಿಕೆರೆಯ ಆಶಿಕ್ ಎಂಬುವರ ವಿರುದ್ಧ ಅಂಬಲತ್ತರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕೆಲಸ ಕೊಡಿಸುವುದಾಗಿ ಯುವತಿಯ ತಾಯಿಗೆ ಭರವಸೆ ನೀಡಿ, ಆರೋಪಿಗಳಲ್ಲಿ ಓರ್ವ ಯುವತಿಯನ್ನು ಜತೆಗೆ ಕರೆದೊಯ್ದು, ಅಂಬಲತ್ತರದ ಒಂದು ಮನೆಯಲ್ಲಿ ವಾಸಕ್ಕೆ ವ್ಯವಸ್ಥೆ ಮಾಡಿಕೊಟ್ಟು ನಂತರ ಅತ್ಯಾಚಾರ ಎಸಗಿದ್ದನು. ಬಳಿಕ ಮನೆ ಕೆಲಸಕ್ಕೆಂದು ತಿಳಿಸಿ ಯುವತಿಯನ್ನು ಪಳ್ಳಿಕೆರೆ ನಿವಾಸಿಗೆ ಹಸ್ತಾಂತರಿಸಿದ್ದಾನೆ. ಅಲ್ಲಿಯೂ ದೌರ್ಜನ್ಯವೆಸಗಿರುವುದಾಗಿ ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ಆರೋಪಿಗಳ ಪತ್ತೆಗೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net