

ಉಡುಪಿ: ಹುಲ್ಲು ಮೇಯುತ್ತಿದ್ದ 4 ದನಗಳನ್ನು ಕದ್ದು, ಕಸಾಯಿಖಾನೆಗೆ ಮಾರಾಟ ಮಾಡಲು ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ವಾಹನದ ಚಾಲಕ ಅಬ್ದುಲ್ ಸತ್ತರ್ (54) ಹಾಗೂ ಯೋಗೀಶ್ ನಾಯ್ಕ್ (49) ಎಂಬವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹಿರಿಯಡ್ಕ ಜೈಲಿಗೆ ರವಾನಿಸಲಾಗಿದೆ.
ಹರಿಖಂಡಿಗೆ ಕಡೆಯಿಂದ ಹಿರಿಯಡ್ಕ ಕಡೆಗೆ ಅ.9ರಂದು ಸಂಜೆ ಗೂಡ್ಸ್ ಟೆಂಪೋದಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿಯ ಮೇರೆಗೆ ಹಿರಿಯಡ್ಕ ಠಾಣೆಯ ಸಿಬ್ಬಂದಿ ಜಂಕ್ಷನ್ ಬಳಿ ಆ ವಾಹನವನ್ನು ತಡೆದು ತಪಾಸಣೆ ನಡೆಸಿದರು. ವಾಹನದೊಳಗೆ ಒಟ್ಟು 4 ಜಾನುವಾರಗಳಿದ್ದವು.
ಕಾರ್ಕಳ ತಾಲೂಕು ಕುಕ್ಕುಜೆ ಗ್ರಾಮದ ಪಲಬೆಟ್ಟು ನಿವಾಸಿ ಕೃಷ್ಣ ಪೂಜಾರಿ ಎಂಬವವರ ಮನೆಯ ಸಮೀಪ ಹುಲ್ಲು ಮೇಯುತ್ತಿದ್ದ ಆ ಜಾನುವಾರುಗಳನ್ನು ಕಳವು ಮಾಡಿದ್ದು, ಅದನ್ನು ಪಿಕಪ್ ಗೂಡ್ಸ್ ವಾಹನದಲ್ಲಿ ಕಸಾಯಿಖಾನೆಗೆ ಮಾರಾಟ ಮಾಡಲು ಸಾಗಿಸುತ್ತಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಾಣಿಹಿಂಸಾ ಮತ್ತು ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿದೆ.