

ಉಡುಪಿ: ಯುನೆಸ್ಕೋ ಗುರುತಿಸಿರುವ ಭಾಷೆಗಳಲ್ಲಿ ಕರಾವಳಿಯ ತುಳು ಭಾಷೆಯೂ ಇದ್ದು, ಇತ್ತೀಚೆಗೆ ರಾಜ್ಯ ಸರ್ಕಾರ ಈ ಭಾಷೆಗೆ ಮಾನ್ಯತೆ ನೀಡಿದೆ. ಇದು ಭಾಷೆಗಷ್ಟೇ ಅಲ್ಲ ಇಲ್ಲಿನ ತುಳು ಸಂಸ್ಕೃತಿ ದಕ್ಕಿದ ಗೌರವವಾಗಿದೆ. ಇದು ತುಳು ಭಾಷೆ ಉಳಿಸಿ ಬೆಳೆಸುವ ಕುರಿತು ರಚನಾತ್ಮಕ ಹೆಜ್ಜೆ ಇಡಲು ಪೂರಕವಾಗಿದೆ. ಆ ನಿಟ್ಟಿನಲ್ಲಿ ಸಂಭಾಷಣಾ ತರಗತಿ ಆಯೋಜಿಸಿರುವುದು ಅರ್ಥಪೂರ್ಣ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಮಣಿಪಾಲದ ಮಾಹೆಯ ಸವೋರ್ದಯ ಹಾಲ್ನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಕಾರದಲ್ಲಿ ಶುಕ್ರವಾರ (ಆ.16) ಆಯೋಜಿಸಿದ್ದ ತುಳು ಸಂಭಾಷಣಾ ತರಗತಿಯ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಉಡುಪಿಯ ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ತುಳು ಭಾಷೆಗೆ ಸಿಕ್ಕಿರುವ ಮಾನ್ಯತೆಯಿಂದಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಈ ಭಾಷೆ ಬೆಳೆಸಲು ಅನುಕೂಲಕರ ವಾತಾವರಣ ಕಲ್ಪಿಸಿದಂತಾಗಿದೆ ಎಂದರು.
ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ಬಾಸೆಲ್ ಮಿಷನ್ನ ಕಾಲದಿಂದ ಇಂದಿನವರೆಗೆ ತುಳು ಭಾಷೆ ಮತ್ತು ಸಾಹಿತ್ಯ ಉಳಿಸುವ ಪ್ರಯತ್ನದ ಫಲವಾಗಿ ರಾಜ್ಯ ಸರ್ಕಾರದ ಮಾನ್ಯತೆ ಲಭಿಸಿದೆ ಎಂದರು.
ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್, ಹ್ಯುಮಾನಿಟೀಸ್ ಆ್ಯಂಡ್ ಆರ್ಟ್ಸ್ನ ನಿರ್ದೇಶಕಿ ಪ್ರೊ. ಗಾಯತ್ರಿ ಪ್ರಭು ಅಧ್ಯಕ್ಷತೆ ವಹಿಸಿದ್ದರು.
ಅಜ್ಜರಕಾಡು ಜಿ.ಶಂಕರ ಕಾಲೇಜ್ನ ಪ್ರಾಂಶುಪಾಲೆ ಡಾ. ನಿಕೇತನಾ, ತುಳು ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ, ಸದಸ್ಯ ಸಂಚಾಲಕ ಸಂತೋಷ ಶೆಟ್ಟಿ ಹಿರಿಯಡ್ಕ, ಸಿಕೆಆರ್ಎಲ್ನ ಸಂಯೋಜಕ ಪೃಥ್ವಿರಾಜ ಕವತ್ತಾರು ಉಪಸ್ಥಿತರಿದ್ದರು.
ತುಳು ತರಗತಿಯ ವಿದ್ಯಾರ್ಥಿಗಳಾದ ಭಾಗ್ಯಜ್ಯೋತಿ, ಸೈಮನ್ ಥಾಮಸ್, ಅಭ್ಯುದಯ ಮತ್ತು ಮಾನಸಾ ಎಸ್. ಇತರರು ತುಳು ನಾಟಕ ಪ್ರಸ್ತುತ ಪಡಿಸಿದರು. ಲೆ. ಕರ್ನಲ್ ರಾಘವೇಂದ್ರ ಎಂ.ಕೆ., ಡಾ. ಆನಂದ ವಿ., ಶ್ರೀರಕ್ಷಾ ಭಂಡಾರ್ಕಾರ, ಸುಮಿತ್ ಇತರರು ತರಗತಿಯ ಅನುಭವ ಹಂಚಿಕೊಂಡರು.
ಸುವರ್ಣಾ ಪ್ರಾರ್ಥಿಸಿದರು. ಅಶ್ನಾ ಶೆಟ್ಟಿ ಸ್ವಾಗತಿಸಿದರು. ಡಾ. ಮಾತಂಗಿಕುಮಾರ್ ಕಾರ್ಯಕ್ರಮ ಸಂಯೋಜಿಸಿದರು.