

ಉಡುಪಿ: ವಿಶಿಷ್ಟ ಕಥಾಹಂದರ ಒಳಗೊಂಡಿರುವ ಸಾಂಸಾರಿಕ ತುಳು ಚಿತ್ರ 'ಬೆಲ್ಲದಗಟ್ಟಿ' ನ.20ರಂದು ತುಳುನಾಡಿನಾದ್ಯಂತ ಬಿಡುಗಡೆಗೊಳ್ಳಲಿದೆ. ಮಾತುಮಾತಿಗೂ ದೇವರ ಹೆಸರಿನಲ್ಲಿ ಆಣೆ-ಪ್ರಮಾಣ ಮಾಡುವುದರಿಂದ ಹಾಗೂ ಆಹಂಕಾರದಿಂದ ಆಗುವ ದುಷ್ಪರಿಣಾಮಗಳ ಕುರಿತು ಈ ಚಿತ್ರ ಜನರಿಗೆ ಸಂದೇಶ ನೀಡಲಿದೆ ಎಂದು ಸಿನಿಮಾದ ನಿರ್ದೇಶಕ ರಾಜಾ ಕಟಪಾಡಿ ತಿಳಿಸಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 9:30ಕ್ಕೆ ಉಡುಪಿಯ ಟೈಮ್ಸ್ ಸ್ಕ್ವೇರ್ ಮಾಲ್ನಲ್ಲಿರುವ ಭಾರತ ಸಿನಿಮಾ ಥಿಯೇಟರ್ನಲ್ಲಿ ಚಲನಚಿತ್ರ ಪ್ರದರ್ಶನ ಕಾರ್ಯಕ್ರಮವನ್ನು ಕೇಂಜ ಗರಡಿಯ ಗಡಿ ಪ್ರಧಾನ ಉಮೇಶ ಕೋಟ್ಯಾನ್ ಉದ್ಘಾಟಿಸಲಿದ್ದಾರೆ. ಕಟಪಾಡಿ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಅಧ್ಯಕ್ಷ ಅಶೋಕ ರಾವ್, ಬ್ಲ್ಯೂ ಸ್ಕೈ ಮೈಕ್ರೋ ಸರ್ವೀಸಸ್ ಫೌಂಡೇಷನ್ನ ಎಂಡಿ ಕೃಷ್ಣ ಪೂಜಾರಿ ಪಾಲ್ಗೊಳ್ಳಲಿದ್ದಾರೆ ಎಂದರು.
ನಮ್ಮದೇ ನಾಟಕ ತಂಡದ ಕಲಾವಿದರಿಗೆ ಮುಖ್ಯ ಭೂಮಿಕೆ ಒದಗಿಸಲು ಚಿತ್ರ ನಿರ್ಮಿಸಿದ್ದು, ರಾಮಕೃಷ್ಣ ಸುಜೀರ್ ಬಾರ್ದಿಲಾ ನಿರ್ಮಾಪಕರಾಗಿದ್ದಾರೆ. ಕಥೆ-ಸಂಭಾಷಣೆ ರಾಜಾ ಕಟಪಾಡಿ, ಸಂಕಲನ ಮತ್ತು ಛಾಯಾಗ್ರಹಣ ಪ್ರಜ್ವಲ್ ಸುವರ್ಣ, ಸಂಗೀತ ನಿರ್ದೇಶನ ಸಂದೇಶ ಬಾಬಣ್ಣ, ಹಿನ್ನಲೆ ಗಾಯನ ಸಮನ್ವಿ ರೈ ಪುತ್ತೂರು, ಕೆ.ಪಿ. ಮಿಲನ್ ಸಹಕರಿಸಿದ್ದಾರೆ. ಚಿತ್ರದಲ್ಲಿ ಮನೋಹರ ಶೆಟ್ಟಿ ನಂದಳಿಕೆ, ಸುಜಾತಾ ಶಕ್ತಿನಗರ, ಸುನೀಲ ನೆಲ್ಲಿಗುಡ್ಡೆ, ನಿತೇಶ ರಾಜ್, ಅಪೇಕ್ಷಾ ಶೆಟ್ಟಿ, ಸುಜಾತಾ ಶೆಟ್ಟಿ, ಸೊಹಾನಾ ಶಂಕರ ಇತರರು ನಟಿಸಿದ್ದಾರೆ ಎಂದರು.
ಯಾವುದೇ ಆಡಂಬರವಿಲ್ಲ
ಸಿನಿಮಾದ ನಾಯಕ ವಿಜಿತ್ ಕೋಟ್ಯಾನ್ ಮಾತನಾಡಿ, ಮಸ್ಕತ್ನಲ್ಲಿ ಈಗಾಗಲೇ 2 ಬಾರಿ ಪ್ರೀಮಿಯಂ ಶೋ ಕಂಡಿದ್ದು ಮತ್ತೊಮ್ಮೆ ಆಹ್ವಾನ ಬಂದಿದೆ. ಈ ಸಿನಿಮಾದಲ್ಲಿ ಯಾವುದೇ ಆಡಂಬರ ಇಲ್ಲ. ಕಥೆಯ ಮೂಲಕವೇ ಚಿತ್ರ ಸಾಗಲಿದೆ. ಹೊಸ ನಟರೊಂದಿಗೆ ಹೊಸ ಪ್ರಯತ್ನ ಮಾಡಲಾಗಿದೆ. ಕೃಷಿ ಪ್ರಧಾನ ಕುಟುಂಬದ ಸಾಂಸಾರಿಕ ಜೀವನದ ಪರಿಕಲ್ಪನೆಯಲ್ಲಿ ದೈವಾರಾಧನೆ, ಕಟ್ಟುಪಾಡುಗಳು, ಪರಂಪರಾಗತ ಆಚರಣೆಯ ಸುತ್ತಲೂ ಹೆಣೆದ ರೋಚಕ ಕಥೆಯಿದೆ. ಸಿನಿಮಾ ವೀಕ್ಷಿಸುವ ಮೂಲಕ ಚಿತ್ರಕ್ಕೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಕೆಟ್ಟ ಪದಗಳ ಬಳಕೆಯಿಲ್ಲ
ಚಿತ್ರದ ನಾಯಕಿ ಕಿಸ್ಮಿತಾ ನವೀಶ ಮಾತನಾಡಿ, ಈ ಚಿತ್ರಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಷನ್ ವತಿಯಿಂದ ಯುಎ ಪ್ರಮಾಣಪತ್ರ ಲಭಿಸಿರುವುದು ಹೆಗ್ಗಳಿಕೆಯಾಗಿದೆ. ಚಿತ್ರದಲ್ಲಿ ಯಾವುದೇ ರೀತಿಯ ಕೆಟ್ಟ ಪದ ಬಳಕೆ ಮಾಡಿಲ್ಲ. ಹೀಗಾಗಿ ಕಿರಿಯರಿಂದ ಹಿರಿಯರವರೆಗೆ ನೋಡಬಹುದಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಟ ಜಯಕರ ಕುಂದರ್, ಸುಜಲಾ ಎಸ್. ಸುವರ್ಣ ಉಪಸ್ಥಿತರಿದ್ದರು.