ಮಣ್ಣು ಸಾಗಾಟದಿಂದ ತೊಂದರೆ

 ಪಡುಪೆರಾರ ಗ್ರಾಮಸಭೆಯಲ್ಲಿ ಪಿಡಿಒ ಅನಿತಾ ವಿ.ಕ್ಯಾಥರಿನ್ ಮಾತನಾಡಿದರು. ಪಂಚಾಯಿತಿ ಆಡಳಿತಾಧಿಕಾರಿ ವೀಣಾ ಕೆ. ಆರ್, ಪಶು ವೈದ್ಯಕೀಯ ಇಲಾಖೆಯ ಮನೋಹರ್ ಮತ್ತಿತರರಿದ್ದರು.
ಪಡುಪೆರಾರ ಗ್ರಾಮಸಭೆಯಲ್ಲಿ ಪಿಡಿಒ ಅನಿತಾ ವಿ.ಕ್ಯಾಥರಿನ್ ಮಾತನಾಡಿದರು. ಪಂಚಾಯಿತಿ ಆಡಳಿತಾಧಿಕಾರಿ ವೀಣಾ ಕೆ. ಆರ್, ಪಶು ವೈದ್ಯಕೀಯ ಇಲಾಖೆಯ ಮನೋಹರ್ ಮತ್ತಿತರರಿದ್ದರು.
Published on

ಗುರುಪುರ: ಪಡುಪೆರಾರ ಗ್ರಾಮ ಪಂಚಾಯಿತಿಯ 2026-27ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಪಂಚಾಯಿತಿ ಆಡಳಿತಾಧಿಕಾರಿ ವೀಣಾ ಕೆ.ಆರ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಜರುಗಿತು.

ಪಡುಪೆರಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಮೀನಿನ ವರದಿ ನೀಡುವಂತೆ ಕೋರಿದ ಪದ್ಮನಾಭ ಎಂಬುವರು, ಒಂದೊಮ್ಮೆ ಸರ್ಕಾರಿ ಜಾಗ ಗುರುತಿಸಿದಲ್ಲಿ ಅಂತಹ ಜಾಗದಲ್ಲಿ ಸಾರ್ವಜನಿಕ ಸೇವೆಗಳ ಕೇಂದ್ರ ತೆರೆಯಲು ಸಹಕಾರಿಯಾಗುತ್ತದೆ.
ಮೂಡುಪೆರಾರದ ದೆಂಜಿಲ ಎಂಬಲ್ಲಿ ಕೆಂಪುಕಲ್ಲಿನ ಕ್ವಾರಿಯಿಂದ ಮಣ್ಣು ಸಾಗಾಟ ಮಾಡಲಾಗುತ್ತಿದೆ. ಇಲ್ಲಿ ಶಬ್ದಮಾಲಿನ್ಯ ಹೆಚ್ಚಾಗಿದ್ದು, ಸುತ್ತಲ ಪ್ರದೇಶದ ಮನೆಮಂದಿಗೆ ತೀವ್ರ ತೊಂದರೆಯಾಗುತ್ತಿದೆ. ಇಲ್ಲಿನ ರಸ್ತೆಯೂ ಉತ್ತಮವಾಗಿಲ್ಲ ಎಂದು ದೂರಿದರು. ಈ ಬಗ್ಗೆ ಕಂದಾಯ ಇಲಾಖೆ ಮತ್ತು ಪಂಚಾಯಿತಿ ಜಂಟಿ ಪರಿಶೀಲನೆ ನಡೆಸಿ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಬರೆಯಲಾಗುವುದು ಎಂದು ಪಿಡಿಒ ಅನಿತಾ ವಿ.ಕ್ಯಾಥರಿನ್ ತಿಳಿಸಿದರು.
ಮೆಸ್ಕಾಂ ಸೆಕ್ಷನ್ ಅಧಿಕಾರಿ ದೇವಿಪ್ರಸಾದ್, ಮುಚ್ಚೂರು ಮೆಸ್ಕಾಂ ಅಧಿಕಾರಿ ಶಿವರಾಂ ಮತ್ತು ಬಜ್ಪೆ ಮೆಸ್ಕಾಂ ಅಧಿಕಾರಿ ಮೆಸ್ಕಾಂಗೆ ಸಂಬಂಧಿಸಿ ಗ್ರಾಮಸ್ಥರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಸೆಕ್ಷನ್ ವ್ಯಾಪ್ತಿಯಲ್ಲಿ ಗೃಹಜ್ಯೋತಿ ಸರ್ವೇ ಶೇ.70ರಷ್ಟು ಪೂರ್ಣಗೊಂಡಿದೆ. ಈ ಕಾರ್ಯ ಆ.30ರವರೆಗೆ ವಿಸ್ತರಣೆಗೊಂಡಿದೆ. ಪಂಚಾಯಿತಿ ವ್ಯಾಪ್ತಿ ಪ್ರದೇಶದ ಈಶ್ವರಕಟ್ಟೆಯಲ್ಲಿ ತಗ್ಗಿನಲ್ಲಿರುವ ವಿದ್ಯುತ್ ತಂತಿಗಳ ದುರಸ್ತಿ ಮಾಡಲಾಗುವುದು.
ಕೈಕಂಬದಲ್ಲಿ ವಿದ್ಯುತ್ ಬಿಲ್ ಕೌಂಟರ್ ತೆರೆಯುವ ಮತ್ತು ಗಣೇಶ್ ಗಂಜಿಮಠ ಅವರ ಸೂಚನೆಯಂತೆ, ಗುಡ್ಡ ಪ್ರದೇಶಗಳಲ್ಲಿ ಕಂಬಗಳ ಬದಲಿಗೆ ಭೂಮಿಯೊಳಗೆ ವಿದ್ಯುತ್‌ಲೈನ್ ಅಳವಡಿಸುವ ವಿಷಯದಲ್ಲಿ ಕಚೇರಿಗೆ ವರದಿ ಮಾಡಲಾಗುವುದು ಎಂದು ದೇವಿಪ್ರಸಾದ್ ಹೇಳಿದರು.
ವಿದ್ಯುತ್ ತಂತಿಗಳಿಗೆ ಮರದ ಕೊಂಬೆಗಳು ತಾಗಿಕೊಂಡು ಆಗಾಗ ವಿದ್ಯುತ್ ಸ್ಥಗಿತಗೊಳ್ಳುತ್ತಿದೆ. ಕೊಂಬೆಗಳನ್ನು ಕಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಪಶು ವೈದ್ಯಕೀಯ ಇಲಾಖೆಯ ಮನೋಹರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂಗಳೂರು ಗ್ರಾಮಾಂತರ, ತೋಟಗಾರಿಕೆ ಇಲಾಖೆ ಹಾಗೂ ಮತ್ತಿತರ ಇಲಾಖೆಗಳ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು, ಅಂಗನವಾಡಿ, ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರು, ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಅನಿತಾ ವಿ.ಕ್ಯಾಥರಿನ್ ಅನುಪಾಲನಾ ವರದಿ ಮಂಡಿಸಿದರು. ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ರೇವತಿ ವಾರ್ಡ್ ಸಭೆ ವರದಿ ಮಂಡಿಸಿದರು.

ಎಚ್‌ಪಿವಿ ಲಸಿಕೆ ತೆಗೆದುಕೊಳ್ಳಿ

14ರಿಂದ 15 ವರ್ಷದೊಳಗಿನ ಹೆಣ್ಣು ಮಕ್ಕಳು ಎಚ್‌ಪಿವಿ ಲಸಿಕೆ ತೆಗೆದುಕೊಳ್ಳುವುದರಿಂದ ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಾಧ್ಯವಿದೆ. ಇದಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ 4-5 ಸಾವಿರ ರೂ. ಇದ್ದರೆ, ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಭ್ಯವಿದೆ. ಇದರಿಂದ ಬಂಜೆತನ ಬರುತ್ತದೆ ಎಂಬ ಭೀತಿ ಬೇಡ. ಕ್ಷಯರೋಗಕ್ಕೆ 6 ತಿಂಗಳ ಔಷಧಿ ಪಡೆದುಕೊಂಡಲ್ಲಿ ಕ್ಷಯದಿಂದ ಸಾವು ತಡೆಗಟ್ಟಲು ಸಾಧ್ಯ ಎಂದು ಬಜ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಶಂಕರನಾಗ್ ತಿಳಿಸಿದರು.

ಸಾರ್ವಜನಿಕರು ಆನ್‌ಲೈನ್ ವಂಚನೆಗಳ ಬಗ್ಗೆ ಜಾಗೃತರಾಗಬೇಕು. ಎಪಿಕೆ ಲಿಂಕ್ ತೆರೆಯಬೇಡಿ, ಸೈಬರ್ ಅಪರಾಧ ಹೆಚ್ಚಾಗಿದೆ. ಒಟಿಪಿ ನಂಬರ್‌ಗಳ ಬಗ್ಗೆ ಎಚ್ಚರವಹಿಸಿ. ಕಳ್ಳರ ಕಾಟ ಹೆಚ್ಚಾಗಿದ್ದು, ಬಾಡಿಗೆ ಮನೆ ನೀಡುವಾಗ ಬಾಡಿಗೆದಾರರ ಸಂಪೂರ್ಣ ದಾಖಲೆ ಪಡೆದುಕೊಳ್ಳಬೇಕು

— ಅಯ್ಯಪ್ಪ ಪಾಟೀಲ್, ಬಜ್ಪೆ ಪೊಲೀಸ್ ಠಾಣೆ ಹೆಡ್‌ಕಾನ್‌ಸ್ಟೆಬಲ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net