ಗ್ರಾಮೀಣ ಪತ್ರಕರ್ತರಿಗೆ ಮಾದರಿ ನಾಗೇಶ್​ ಗಾಣಿಗ

ಉಡುಪಿಯ ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಾಗೇಶ್​ ಗಾಣಿಗ ಅವರಿಗೆ ನುಡಿನಮನ ಸಲ್ಲಿಸಲಾಯಿತು.
ಉಡುಪಿಯ ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಾಗೇಶ್​ ಗಾಣಿಗ ಅವರಿಗೆ ನುಡಿನಮನ ಸಲ್ಲಿಸಲಾಯಿತು.
Published on

ಪತ್ರಕರ್ತ ಗಣೇಶ್​ ಬಿಜಾಡಿ ಅಭಿಪ್ರಾಯ

* ಉಡುಪಿ ಪತ್ರಿಕಾ ಭವನದಲ್ಲಿ ನುಡಿನಮನ ಸಭೆ

ಉಡುಪಿ: ಬಡಕುಟುಂಬದಲ್ಲಿ ಜನಿಸಿ ಅನೇಕ ಕಷ್ಟಗಳನ್ನು ಎದುರಿಸುತ್ತ ಸಂತಸದಿಂದಲೇ ಬದುಕಿದ್ದ ಸಿದ್ದಾಪುರದ ಪತ್ರಕರ್ತ ನಾಗೇಶ್​ ಗಾಣಿಗ ಅವರ ಅಕಾಲಿಕ ನಿಧನ ಅತ್ಯಂತ ನೋವಿನ ಸಂಗತಿ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದ ಅವರಿಗೆ ಐವರು ಸಹೋದರಿಯರು, ವಿಶೇಷ ಚೇತನರಾದ ಹಿರಿಯ ಸಹೋದರ ಹಾಗೂ ತಾಯಿಯ ಆರೈಕೆಯ ಬಹುದೊಡ್ಡ ಜವಾಬ್ದಾರಿ ಹೊತ್ತಿದ್ದರು. ವರದಿಗಾರಿಕೆಯಲ್ಲಿ ಉತ್ತಮ ಕೌಶಲ ಹೊಂದಿದ್ದ ಅವರು ಗ್ರಾಮೀಣ ಪತ್ರಕರ್ತರಿಗೆ ಮಾದರಿಯಾಗಿದ್ದರು ಎಂದು ಪತ್ರಕರ್ತ ಗಣೇಶ್​ ಬಿಜಾಡಿ ಅಭಿಪ್ರಾಯಪಟ್ಟರು.
ಕಳೆದ ಬುಧವಾರ ಹೃದಯಾಘಾತದಿಂದ ನಿಧನರಾದ ಸಿದ್ದಾಪುರದ ಪತ್ರಕರ್ತ ನಾಗೇಶ್​ ಗಾಣಿಗ ಅವರಿಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿಯ ಪತ್ರಿಕಾ ಭವನದಲ್ಲಿ ಶನಿವಾರ (ಜು.18) ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ಕುಟುಂಬಕ್ಕೆ ಮತ್ತೊಂದು ಆಘಾತ

ಮೂಲತ; ಕೃಷಿಕರಾಗಿದ್ದ ನಾಗೇಶ್​ ಅವರು ಪತ್ರಿಕೆಯ ಪ್ರಸಾರಾಂಗ ವಿಭಾಗದಲ್ಲಿ ಹಲವು ವರ್ಷ ಕೆಲಸ ಮಾಡಿದ್ದು, ಸಿದ್ದಾಪುರದ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ತನ್ನ ಗ್ರಾಮದ ಅಭಿವೃದ್ಧಿಗಾಗಿ ಹಾಗೂ ಸ್ಥಳೀಯ ಆಡಳಿತಕ್ಕೆ ಕಾರ್ಯಸೂಚಿಯಾಗಿ ಬರೆದಿದ್ದ ವಿಶೇಷ ವರದಿ ಅವರು ನಿಧನರಾದ ದಿನದಂದೇ ಬೆಳಗ್ಗೆ ಪ್ರಕಟಗೊಂಡಿತ್ತು. ಇದು ಗ್ರಾಮಕ್ಕೆ ಭಾವನಾತ್ಮಕ ಸಂಗತಿಯಾಗಿದ್ದರೆ, ಅವರ ಕುಟುಂಬಕ್ಕೆ ಇಂದು (ಜು.19) ಇನ್ನೊಂದು ಆಘಾತವಾಗಿದೆ. ಅವರ ಅಕ್ಕನ ಗಂಡನೂ ಸಹ ಹೃದಯಾಘಾತದಿಂದ ಮೃತಪಟ್ಟಿದ್ದು ಸಹಿಸಲಾಗದ ದು;ಖ ಆವರಿಸಿದೆ ಎಂದರು.

ಮನೆ ಪೂರ್ಣಗೊಳಿಸೋಣ

ಪತ್ರಕರ್ತ ರಾಜೇಶ್​ ಗಾಣಿಗ ಅಚ್ಲಾಡಿ ಮಾತನಾಡಿ, ಕುಟುಂಬದ ನಿರ್ವಹಣೆಯ ಹೊಣೆ ಇದ್ದುದರಿಂದ ನಾಗೇಶ್​ ವಿವಾಹ ಮಾಡಿಕೊಂಡಿರಲಿಲ್ಲ. ಜೀವನದಲ್ಲಿ ಮುಂದೆ ಒಳ್ಳೆಯ ದಿನ ಬರಬಹುದೆಂಬ ದೊಡ್ಡ ಕನಸಿನೊಂದಿಗೆ ಮನೆ ಕಟ್ಟಿಸುತ್ತಿದ್ದರು. ಶೇ.75 ಕಾಮಗಾರಿ ಮುಗಿದಿದ್ದು ಇದೀಗ ನಾಗೇಶ್​ ಇಲ್ಲವಾಗಿದ್ದಾರೆ. ಅವರ ಸ್ಮರಣೆಗಾದರೂ ದಾನಿಗಳು ಹಾಗೂ ನಾವೆಲ್ಲ ಸೇರಿ ಆ ಕನಸಿನ ಮನೆಯನ್ನು ಪೂರ್ಣಗೊಳಿಸೋಣ ಎಂದರು.
ನಾಗೇಶ್​ ಗಾಣಿಗ ಅವರ ಆತ್ಮಕ್ಕೆ ಶಾಂತಿ ಕೋರಿ 2 ನಿಮಿಷ ಮೌನ ಆಚರಿಸಲಾಯಿತು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಕಾರ್ಯಕ್ರಮ ನಿರ್ವಹಿಸಿದರು. ಸಂದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net