ಬಲಿಗಾಗಿ ಕಾಯುತ್ತಿವೆ ಮರಗಳು!

 ಗೋಳಿಯಂಗಡಿ ವಂಡಾರು ವಾವಿನಕಟ್ಟೆ ಸಂಪರ್ಕದ ಮುಖ್ಯ ರಸ್ತೆ ಬಳಿ ಒಣಗಿದ ಹೆಮ್ಮರವೊಂದು ಅಪಾಯಕಾರಿ ಸ್ಥಿತಿಯಲ್ಲಿರುವುದು.
ಗೋಳಿಯಂಗಡಿ ವಂಡಾರು ವಾವಿನಕಟ್ಟೆ ಸಂಪರ್ಕದ ಮುಖ್ಯ ರಸ್ತೆ ಬಳಿ ಒಣಗಿದ ಹೆಮ್ಮರವೊಂದು ಅಪಾಯಕಾರಿ ಸ್ಥಿತಿಯಲ್ಲಿರುವುದು.
Published on

ಕೆ.ಸಂಜೀವ ಆರ್ಡಿ ಸಿದ್ದಾಪುರ

ಕೆಲ ದಿನಗಳ ಹಿಂದೆಯಷ್ಟೆ ಹೆಬ್ರಿ ಸಮೀಪ ಮರವೊಂದು ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದು ಕಾರಿನಲ್ಲಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುವ ದುರಂತ ಇನ್ನೂ ಜನಮಾನಸದಿಂದ ಮಾಸಿಲ್ಲ. ಇದೇ ಮಾದರಿಯ ರಸ್ತೆಗೆ ವಾಲಿಕೊಂಡಿರುವ ಅಪಾಯಕಾರಿ ಒಣ ಮತ್ತು ಹಸಿ ಮರಗಳು ಗೋಳಿಯಂಗಡಿ-ಮಾವಿನಕಟ್ಟೆ ಮಾರ್ಗದಲ್ಲಿ ಹಲವು ಇದ್ದು, ಬಲಿಗಾಗಿ ಕಾಯುತ್ತಿವೆ.
ಗೋಳಿಯಂಗಡಿ-ಹಿಲಿಯಾಣ-ಆವರ್ಸೆ-ವಂಡಾರು-ವಾವಿನಕಟ್ಟೆ ಸಂಪರ್ಕದ ಮುಖ್ಯ ರಸ್ತೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಒಣಗಿದ ಹಾಗೂ ವಾಲಿದ ಬೃಹದಾಕಾರದ ಅಪಾಯಕಾರಿ ಮರಗಳು ರಸ್ತೆಯ ಇಕ್ಕೆಲಗಳಲ್ಲಿವೆ. ಇಲ್ಲಿನ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ ವಹಿಸುತ್ತಿದೆ ಎಂಬ ಅಸಮಾಧಾನದ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಗೋಳಿಯಂಗಡಿ ಬಾಲಕರ ಸರ್ಕಾರಿ ಹಾಸ್ಟೆಲ್, ಹಿಲಿಯಾಣ ಶಾಲೆ, ಅಂಡಾರುಕಟ್ಟೆ ತಿರುವು, ಆವರ್ಸೆ ಗ್ರಾಮ ಪಂಚಾಯಿತಿ ಬಳಿ ಸೇರಿದಂತೆ ಹಲವಾರು ಭಾಗಗಳಲ್ಲಿ ಬೃಹತ್ ಗಾತ್ರದ ಒಣಗಿದ ಮರಗಳು ಗಾಳಿ-ಮಳೆಗೆ ರಸ್ತೆಗೆ ಉರುಳಿ ಬೀಳುವ ಹಂತದಲ್ಲಿವೆ. ಇದೇ ವಾರ್ಗದ ಕೆಲವು ಭಾಗಗಳಲ್ಲಿ ಬೃಹದಾಕಾರದ ಅಪಾಯಕಾರಿ ಮರ ಹಾಗೂ ಕೊಂಬೆಗಳು ರಸ್ತೆಯ ಇಕ್ಕೆಲಗಳಲ್ಲಿ ರಸ್ತೆಗೆ ವಾಲಿಕೊಂಡು ಬೀಳುವ ಹಂತದಲ್ಲಿವೆ.
ಇಲ್ಲಿನ ರಸ್ತೆಯಲ್ಲಿ ಪ್ರತಿನಿತ್ಯ ದ್ವಿಚಕ್ರ ವಾಹನಗಳು, ರಿಕ್ಷಾಗಳು, ಸರಕು ಸಾಗಾಣಿಕೆಯ ವಾಹನಗಳು, ಶಾಲಾ ವಾಹನಗಳು, ಬಸ್‌ಗಳು ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತಿವೆ. ನಿತ್ಯ ಸಂಚಾರಿಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಓಡಾಡುತ್ತಾರೆ. ಕೆಲವು ಭಾಗಗಳಲ್ಲಿ ವಿದ್ಯುತ್ ಕಂಬದ ಮೇಲೆ ಸತ್ತು ಒಣಗಿದ ಮರಗಳು ಬೀಳುವ ಸ್ಥಿತಿಯಲ್ಲಿವೆ.

ಹಲವೆಡೆ ಎದುರಾಗಿತ್ತು ಅಪಾಯ

ಬಂಡ್ಸಾಲೆಯಲ್ಲಿ ಇತ್ತೀಚೆಗೆ ವಿದ್ಯುತ್ ಕಂಬದ ಮೇಲೆ ಮರ ಬಿದ್ದಿದೆ. ಗೋಳಿಯಂಗಡಿ ಸರ್ಕಾರಿ ಬಾಲಕರ ಹಾಸ್ಟೆಲ್ ಬಳಿ ನಸುಕಿನ ಸಮಯ ರಸ್ತೆ ಮೇಲೆ ಮರ ಬಿದ್ದಿದೆ. ಇಲ್ಲಿ ಸತ್ತ ಮರವನ್ನು ತೆರವುಗೊಳಿಸದೆ ಬಿಡಲಾಗಿದೆ. ಕೆಲವು ದಿನಗಳ ಹಿಂದೆ ಸಮೀಪದ ಹೆಬ್ರಿಯಲ್ಲಿ ಕಾರಿನ ಮೇಲೆ ಮರ ಬಿದ್ದು ವ್ಯಕ್ತಿ ಮರಣ ಹೊಂದಿದ ಬಳಿಕ ಇಲ್ಲಿನ ಜನರು ಮಳೆ ಗಾಳಿ ಬಂದಾಗ ಜೀವ ಭಯದಲ್ಲಿ ಸಂಚರಿಸುವಂತಾಗಿದೆ. ಜನರ ಸುರಕ್ಷೆ ಹಿತದೃಷ್ಟಿಯಿಂದ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಲ್ಲಿ ಸಂಬಂಧಿಸಿದವರು ಶ್ರೀವಾಗಿ ಸ್ಪಂದಿಸಬೇಕಾಗಿದೆ.

ಗೋಳಿಯಂಗಡಿಯಿಂದ ಆವರ್ಸೆ ಸಂಚಾರ ವಾರ್ಗದ ರಸ್ತೆಯಂಚಿನಲ್ಲಿ ಅಪಾಯಕಾರಿ ಮರಗಳಿವೆ. ಇವುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಆವರ್ಸೆ ಗ್ರಾಮ ಪಂಚಾಯಿತಿಗೆ ಮನವಿ ನೀಡಲಾಗಿದೆ. ಇಲ್ಲಿ ಅಪಾಯಕಾರಿಯಾಗಿರುವ ಮರಗಳನ್ನು ಕೂಡಲೇ ತೆರವುಗೊಳಿಸಿ ಸ್ಪಂದಿಸಬೇಕು.

— ಕರುಣಾಕರ ಶೆಟ್ಟಿ ದಕ್ಕೇರ್‌ಬೆಟ್ಟು ಹಿಲಿಯಾಣ

ಗೋಳಿಯಂಗಡಿ-ವಂಡಾರು-ವಾವಿನಕಟ್ಟೆ ಸಂಪರ್ಕ ರಸ್ತೆ ಸಮೀಪದಲ್ಲಿ ಒಣಗಿದ ಹಾಗೂ ವಾಲಿದ ಅಪಾಯಕಾರಿ ಮರಗಳಿಂದ ಜನರಿಗೆ ತೊಂದರೆಯಾಗುತ್ತಿರುವ ಬಗ್ಗೆ ವಾಹಿತಿಯಿದೆ. ಈ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

— ಉದಯ ಹಾಲಾಡಿ ಟಕದ ಉಪ ವಲಯ ಅರಣ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net