ಪಂಚಾಯಿತಿ ಕೆಲಸಕ್ಕೆ 5 ಕಿ.ಮೀ. ಪ್ರಯಾಣ!

ಮುಳ್ಳಿಕಟ್ಟೆಯಲ್ಲಿರುವ ಹೊಸಾಡು ಗ್ರಾಪಂ ಕಾರ್ಯಾಲಯ.
ಮುಳ್ಳಿಕಟ್ಟೆಯಲ್ಲಿರುವ ಹೊಸಾಡು ಗ್ರಾಪಂ ಕಾರ್ಯಾಲಯ.
Published on

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ

ತಾಲೂಕಿನ ಹೊಸಾಡು ಗ್ರಾಪಂ ವ್ಯಾಪ್ತಿಯ ವಾರ್ಡ್ ನಂ.1ರ ಕಂಚುಗೋಡು, ಜನತಾ ಕಾಲೋನಿ ಹಾಗೂ ಭಗತ ನಗರ ಪ್ರದೇಶಗಳನ್ನು ತ್ರಾಸಿ ಗ್ರಾಪಂ ವ್ಯಾಪ್ತಿಗೆ ಸೇರಿಸುವಂತೆ ಸ್ಥಳೀಯರು ಹಲವು ವರ್ಷಗಳಿಂದ ಸಲ್ಲಿಸುತ್ತಿರುವ ಬೇಡಿಕೆ ಇನ್ನೂ ಈಡೇರಿಲ್ಲ.

ಪ್ರಸ್ತುತ ಈ ಮೂರು ಪ್ರದೇಶಗಳು ಹೊಸಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದ್ದು, ಪಂಚಾಯಿತಿ ಕಚೇರಿ ಸುವಾರು 5 ಕಿ.ಮೀ. ದೂರದಲ್ಲಿದೆ. ಹೀಗಾಗಿ ಜನರು, ಪಂಚಾಯಿತಿನ ವಿವಿಧ ಸೇವೆಗಳನ್ನು ಪಡೆದುಕೊಳ್ಳಲು ತೊಂದರೆಯಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಕುಂದಾಪುರ ತಹಸೀಲ್ದಾರ್‌ಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಕಂಚುಗೋಡು, ಭಗತ್ ನಗರ ಪ್ರದೇಶಗಳು ತ್ರಾಸಿ ಗ್ರಾಪಂ ಕಚೇರಿಯಿಂದ ಕೇವಲ 1 ಕಿ.ಮೀ. ದೂರದಲ್ಲಿದೆ. ಆದ್ದರಿಂದ ಈ ಪ್ರದೇಶಗಳನ್ನು ತ್ರಾಸಿ ಪಂಚಾಯಿತಿಗೆ ಸೇರ್ಪಡೆ ವಾಡಿದರೆ ಆಡಳಿತಾತ್ಮಕ ಸೇವೆಗಳು ಸುಲಭವಾಗಿ ಲಭ್ಯವಾಗಲಿದ್ದು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬುದು ಸ್ಥಳೀಯರ ಅಭಿಪ್ರಾಯ.

ನೇರ ಬಸ್ ಸಂಪರ್ಕವಿಲ್ಲ

ಕಂಚುಗೋಡು ಭಾಗದವರು ಹೊಸಾಡು ಪಂಚಾಯಿತಿಗೆ ಹೋಗಬೇಕಾದರೆ ತ್ರಾಸಿಗೆ ರಿಕ್ಷಾದ ಮೂಲಕ ಬಂದು, ಅಲ್ಲಿಂದ ಕುಂದಾಪುರ ಕಡೆಗೆ ಹೋಗುವ ಬಸ್ ಹತ್ತಿ ಮುಳ್ಳಿಕಟ್ಟೆ ಜಂಕ್ಷನ್‌ನಲ್ಲಿ ಇಳಿಯಬೇಕು. ಇಲ್ಲದಿದ್ದರೆ ಕಂಚುಗೋಡಿನಿಂದ ಗುಜ್ಜಾಡಿಯ ನಾಯಕವಾಡಿವರೆಗೆ ಬಸ್‌ನಲ್ಲಿ ಬಂದು, ಅಲ್ಲಿಂದ ಮುಳ್ಳಿಕಟ್ಟೆಯವರೆಗೆ ರಿಕ್ಷಾದಲ್ಲಿ ಬರಬೇಕಾದ ಪರಿಸ್ಥಿತಿಯಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಹೊಸಾಡು ಗ್ರಾಪಂ ವ್ಯಾಪ್ತಿಯ ಕಂಚುಗೋಡು, ಖಾರ್ವಿಕೇರಿ ಹಾಗೂ ಭಗತನಗರ ಪ್ರದೇಶಗಳನ್ನು ತ್ರಾಸಿ ಗ್ರಾಪಂ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕಾಗಿ ಆ ಭಾಗದ ಗ್ರಾಮಸ್ಥರು ಮನವಿ ಸಲ್ಲಿಸಿದ್ದು, ಆ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ನಮ್ಮಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ.

— ಪ್ರದೀಪ್ ಕುರ್ಡೇಕರ್ ಕುಂದಾಪುರ ತಹಸೀಲ್ದಾರ್

ಹೊಸಾಡು ಗ್ರಾಪಂ ಕಚೇರಿ ದೂರ ಇರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಹತ್ತಿರದ ತ್ರಾಸಿ ಗ್ರಾಪಂಗೆ ನಮ್ಮ ಪ್ರದೇಶವನ್ನು ಸೇರ್ಪಡೆಗೊಳಿಸಬೇಕು. ಜತೆಗೆ ಶಾಲಾ ಮಕ್ಕಳ ಅನುಕೂಲಕ್ಕಾಗಿ ಸರ್ಕಾರಿ ಬಸ್ ಸಂಚಾರವೂ ಆರಂಭವಾಗಬೇಕು. ಈ ಬಗ್ಗೆ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಗಬೇಕಿದೆ.

— ನಾಗರಾಜ್ ಎಸ್.ಖಾರ್ವಿ ಸ್ಥಳೀಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net