ಕೆಎಂಸಿಯಲ್ಲಿ ಜೆಂಡರ್​ ಅಫರ್ಮಿಂಗ್​ ಶಸ್ತ್ರಚಿಕಿತ್ಸೆ ಯಶಸ್ವಿ

(ಸಾಂದರ್ಭಿಕ ಚಿತ್ರ).
(ಸಾಂದರ್ಭಿಕ ಚಿತ್ರ).
Published on

* ಪ್ರಥಮ ಬಾರಿಗೆ ಲಿಂಗ ದೃಢೀಕರಣ, ಜನನಾಂಗದ ಆಪರೇಷನ್​ 

* ಮಣಿಪಾಲ ಆಸ್ಪತ್ರೆಯ ಪ್ಲಾಸ್ಟಿಕ್​ ಸರ್ಜರಿ ತಂಡದ ಸಾಧನೆ

ಉಡುಪಿ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ (ಕೆಎಂಸಿ)ಯು ಟ್ರಾನ್ಸ್​ಜೆಂಡರ್​ ಮಹಿಳೆಗೆ ಜೆಂಡರ್​ ಅಫರ್ಮಿಂಗ್​ ಶಸ್ತ್ರಚಿಕಿತ್ಸೆಯನ್ನು ಇತ್ತೀಚೆಗೆ ಯಶಸ್ವಿಯಾಗಿ ನಡೆಸಿದ್ದು, ರೋಗಿ ಚೇತರಿಸಿಕೊಳ್ಳುತ್ತಿದ್ದಾರೆ. ಪ್ರತಿ ರೋಗಿಯ ಹಿನ್ನೆಲೆ ಏನೇ ಇದ್ದರೂ ಅವರು ಕೆಎಂಸಿಯಲ್ಲಿ ಉತ್ತಮ ಆರೈಕೆ ಪಡೆಯುತ್ತಾರೆ ಎಂಬ ದೃಢ ವಿಶ್ವಾಸ ಹಾಗೂ ಬದ್ಧತೆಗೆ ಇದು ಪ್ರಮುಖ ಹೆಜ್ಜೆಯಾಗಿದೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.
ಆಸ್ಪತ್ರೆಯ ಪ್ಲಾಸ್ಟಿಕ್​ ಸರ್ಜರಿ ವಿಭಾಗವು ಮುಖದ ಸ್ತ್ರೀಕರಣ ಮತ್ತು ಸ್ತನಗಳ ವರ್ಧನೆ ಸೇರಿದಂತೆ ಲಿಂಗ ದೃಢೀಕರಣ ಕಾರ್ಯವಿಧಾನ ಮಾಡುತ್ತಿದೆ. ಇದು ಹಲವಾರು ವರ್ಷದಿಂದ ಟ್ರಾನ್ಸ್​ಜೆಂಡರ್​ ರೋಗಿಗಳಿಗೆ ಸಹಾಯವಾಗಿದೆ. ಆಸ್ಪತ್ರೆಯ ಪ್ಲಾಸ್ಟಿಕ್​ ಸರ್ಜರಿ ತಂಡ ಮತ್ತು ಮೂತ್ರಶಾಸ್ತ್ರ ವಿಭಾಗದ ತಂಡವು ಸಂಪೂರ್ಣವಾಗಿ ಲಿಂಗ ದೃಢೀಕರಣ ಹಾಗೂ ಜನನಾಂಗದ ಶಸ್ತ್ರಚಿಕಿತ್ಸೆ ನಡೆಸುತ್ತಿರುವುದು ಇದೇ ಮೊದಲು ಎಂದು ಆಸ್ಪತ್ರೆ ತಿಳಿಸಿದೆ.
ಪ್ಲಾಸ್ಟಿಕ್​ ಸರ್ಜರಿಯ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಜೋಸೆಫ್​ ಥಾಮಸ್​, ಸಹ ಪ್ರಾಧ್ಯಾಪಕ  ಡಾ. ಹರ್ಷವರ್ಧನ್​ ಶೆಟ್ಟಿ, ಮೂತ್ರಶಾಸ್ತ್ರ ವಿಭಾಗದ ಡಾ. ಅನುಪಮ್​ ಚೌಧರಿ ಹಾಗೂ ಇನ್ನಿತರ ವೈದ್ಯರ ತಂಡವು ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿತ್ತು.

ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆಯಿಂದ ನೆಮ್ಮದಿ

ಅನೇಕ ಟ್ರಾನ್ಸ್​ಜೆಂಡರ್​ಗಳಿಗೆ ಅವರ ದೈಹಿಕ ಬೆಳವಣಿಗೆಯಿಂದ ಅವರಿಗೇ ತಾವು ಯಾರೆಂದು ನಿಜವಾಗಿಯೂ ಅರ್ಥವಾಗುತ್ತಿಲ್ಲ. ಆ ಗೊಂದಲಗಳ ನಡುವೆಯೇ ಬೆಳೆಯುತ್ತಿರುತ್ತಾರೆ. ಇದು ಅನೇಕರಿಗೆ ಅವರ ತೂಕ ಅಥವಾ ನೋಟದ ಬಗ್ಗೆ ಹೊಂದಿರುವ ದೈನಂದಿನ ದೇಹದ ಚಿತ್ರಣಕ್ಕಿಂತ ಭಿನ್ನವಾಗಿರುತ್ತದೆ. ಮುಂದೆ ಅವರಿಗೆ ತಮ್ಮ ಸ್ವಂತ ಲಿಂಗವು ಹುಟ್ಟಿನಿಂದಲೇ ಹೊಂದಿರುವ ದೇಹಕ್ಕೆ ಹೊಂದಿಕೆಯಾಗುವುದಿಲ್ಲ ಎಂಬ ಭಾವನೆ ಅವರಲ್ಲಿ ಆಳವಾಗುತ್ತ ಹೋಗುತ್ತದೆ. ವೈದ್ಯರು ಇದನ್ನು ಲಿಂಗ ಡಿಸ್ಫೋರಿಯಾ ಎಂದು ಕರೆಯುತ್ತಾರೆ. ಇಂತಹವರು ಸರಿಯಾದ ವೈದ್ಯಕೀಯ ಸಹಾಯ ಕಂಡುಕೊಳ್ಳುವ ಮೊದಲು ಅವರ ಮಾನಸಿಕ ಆರೋಗ್ಯ, ಸಂಬಂಧ, ಶಿಕ್ಷಣ ಮತ್ತು ಕೆಲಸದ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದರೆ, ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆಯು ಈ ಎಲ್ಲ ತೊಂದರೆಗಳನ್ನು ನಿವಾರಿಸುತ್ತದೆ. ಅವರು ಆರಾಮದಾಯಕವಾಗಿರಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ ಪ್ಲಾಸ್ಟಿಕ್​ ಸರ್ಜರಿಯ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಜೋಸೆಫ್​ ಥಾಮಸ್​.
"

ಈ ಶಸ್ತ್ರಚಿಕಿತ್ಸೆಯು ಟ್ರಾನ್ಸ್​ಜೆಂಡರ್​ಗಳಲ್ಲಿ ಆತ್ಮವಿಶ್ವಾಸ ಮೂಡಿಸಲಿದ್ದು, ಅಂತಹ ರೋಗಿಗಳಿಗೆ ಆರೈಕೆಯ ಪ್ರಯಾಣದಲ್ಲಿ ಮಹತ್ವಪೂರ್ಣ ಹೆಜ್ಜೆಯಾಗಿದೆ. ಅಂತಹ ಸಮುದಾಯದವರಿಗೆ ಮುಂದೆ ಬಂದು ಅವರಿಗೆ ಅಗತ್ಯವಿರುವ ಆರೈಕೆ ಪಡೆಯಲು ಇದು ಪ್ರೋತ್ಸಾಹಿಸುತ್ತದೆ ಎಂದು ನಾವು ಭಾವಿಸುತ್ತೇವೆ. ನಾವುಗಳು ಒಂಟಿ ಎಂಬ ಭಾವನೆ ಅವರಲ್ಲಿ ಮೂಡದಂತೆ ನೋಡಿಕೊಳ್ಳಲು ತರಬೇತಿ ಹೊಂದಿದ ಸಿಬ್ಬಂದಿ ಇಲ್ಲಿದ್ದಾರೆ. ಅವರನ್ನು ಗೌರವದಿಂದ ನಡೆಸಿಕೊಳ್ಳಲಾಗುತ್ತದೆ.

— ಡಾ. ಸುಧಾಕರ್​ ಕಂಟಿಪುಡಿ. ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net