ಶೈಕ್ಷಣಿಕ ಒತ್ತಡ ನಿವಾರಣೆಗೆ ಡ್ರಗ್ಸ್​ ಸೇವನೆ ಪರಿಹಾರವಲ್ಲ

ಜಿಲ್ಲಾಮಟ್ಟದ ಕಾಲೇಜು ಮಾದಕ ವ್ಯಸನ ವಿರೋಧಿ ಮತ್ತು ಜಾಗೃತಿ ಸಮಿತಿ ಸದಸ್ಯರ ಕಾರ್ಯಗಾರದಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಜಾಗೃತಿ ಫಲಕ ಬಿಡುಗಡೆಗೊಳಿಸಿದರು.
ಜಿಲ್ಲಾಮಟ್ಟದ ಕಾಲೇಜು ಮಾದಕ ವ್ಯಸನ ವಿರೋಧಿ ಮತ್ತು ಜಾಗೃತಿ ಸಮಿತಿ ಸದಸ್ಯರ ಕಾರ್ಯಗಾರದಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಜಾಗೃತಿ ಫಲಕ ಬಿಡುಗಡೆಗೊಳಿಸಿದರು.
Published on
ಉಡುಪಿ: ದೇಶದ ಯುವಜನತೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮಾದಕ ದ್ರವ್ಯ ಸೇವನೆ ವ್ಯಸನವು ಹೆಚ್ಚಾಗಿದ್ದು, ಜಿಲ್ಲೆಯಲ್ಲಿಯೂ ನೂರಾರು ಪ್ರಕರಣಗಳು ಕಂಡುಬಂದಿವೆ. ಕುಟುಂಬ ಸಮಸ್ಯೆ, ಸ್ನೇಹಿತರ ಒತ್ತಾಯ, ಶೈಕ್ಷಣಿಕ ಒತ್ತಡ ನಿವಾರಣೆಗೆ ಡ್ರಗ್ಸ್​ ಪರಿಹಾರವಲ್ಲ ಎಂದು ಹಿರಿಯ ಸಿವಿಲ್​ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನಿತಿನ್​ ರಾವ್​ ವೈ. ಹೇಳಿದರು.

ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್​ ಇಲಾಖೆ ವತಿಯಿಂದ ರೈಸ್​ ಮತ್ತು ಬೇಡ ಬ್ರೋ ಮಾದಕ ವ್ಯಸನ ಜಾಗೃತಿ ಕಾರ್ಯಕ್ರಮ ಅಂಗವಾಗಿ ಜಿಲ್ಲಾಮಟ್ಟದ ಕಾಲೇಜು ಮಾದಕ ವ್ಯಸನ ವಿರೋಧಿ ಮತ್ತು ಜಾಗೃತಿ ಸಮಿತಿ ಸದಸ್ಯರ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಚಲನಚಿತ್ರಗಳಿಂದ ಯುವ ಜನರುಪ್ರೇರಣೆ ಪಡೆದು ದುಶ್ಚಟಗಳ ದಾಸರಾಗಬಾರದು. ಎನ್​.ಡಿ.ಪಿ.ಎಸ್​ ಕಾಯ್ದೆ ಪ್ರಕಾರ ಮಾದಕ ವಸ್ತುಗಳ ಉತ್ಪಾದನೆ, ಸಾಗಾಣಿಕೆ, ಸೇವನೆ ಮತ್ತು ಇಟ್ಟುಕೊಳ್ಳುವಿಕೆ ಶಿಕ್ಷಾರ್ಹ ಅಪರಾಧ. ಹೆಚ್ಚಿನ ಮಾದಕ ವಸ್ತುಗಳನ್ನು ಹೊಂದಿದ್ದರೆ ಜಾಮೀನು ಕೂಡಾ ಸಿಗುವುದಿಲ್ಲ. ಇದರಿಂದ ಭವಿಷ್ಯದಲ್ಲಿ ಬಹಳಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಯಾರಾದರೂ ಮಾದಕ ವಸ್ತುಗಳನ್ನು ಸೇವಿಸುವುದು ಅಥವಾ ಮಾರಾಟ ಮಾಡುವುದು ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಜಾಗೃತಿ ಫಲಕ ಬಿಡುಗಡೆಗೊಳಿಸಿ ಮಾತನಾಡಿ, ಯುವಜನತೆಯಲ್ಲಿ ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮದ ಅವಶ್ಯಕತೆ ಇದೆ. ಯುವ ಜನರು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಕಾರ್ಯಾಗಾರದಲ್ಲಿ ಪಡೆದ ಮಾಹಿತಿಯನ್ನು ಸ್ನೇಹಿತರು ಮತ್ತು ಕುಟುಂಬದವರ ಜೊತೆ ಹಂಚಿಕೊಂಡು ಎಲ್ಲರೂ ಮಾದಕ ವಸ್ತುಗಳಿಂದ ದೂರ ಇರುವಂತೆ ಮಾಡಬೇಕು ಎಂದರು.

ಹೆಚ್ಚುವರಿ ಪೊಲೀಸ್​ ಅಧೀಕ್ಷಕ ಸುಧಾಕರ್​ ನಾಯಕ್​ ಪ್ರತಿಜ್ಞಾವಿಧಿ ಬೋಧಿಸಿದರು. ಮನೋವೈದ್ಯ ಡಾ. ಪಿ. ವಿ. ಭಂಡಾರಿ, ಶ್ರೀ ಮಾತಾ ಆಸ್ಪತ್ರೆಯ ಪ್ರಕಾಶ್​ ತೋಳಾರ್​, ಮನೋ ವೈದ್ಯ ಡಾ. ವಿರೂಪಾಕ್ಷಪ್ಪ ದೇವರಮನೆ ಹಾಗೂ ಪೊಲೀಸ್​ ನಿರೀಕ್ಷಕ ಮಹೇಶ್​ ಪ್ರಸಾದ್​ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಸರ್ಜನ್​ ಡಾ. ಅಶೋಕ್​, ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ಡಾ. ರೋಶನ್​ ಶೆಟ್ಟಿ, ಪದವಿ ಕಾಲೇಜುಗಳ ಸಮನ್ವಯಕಾರ ರವೀಂದ್ರ ಉಪಾಧ್ಯಾಯ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಮಂಜುನಾಥ್​ ಭಟ್​, ಜಿ.ಶಂಕರ್​ ಸರ್ಕಾರಿ ಮಹಿಳಾ ಕಾಲೇಜು ಪ್ರಾಂಶುಪಾಲೆ ಡಾ. ನಿಕೇತನ, ತೆಂಕನಿಡಿಯೂರು ಕಾಲೇಜು ಪ್ರಾಂಶುಪಾಲ ನಿತ್ಯಾನಂದ ಗಾಂವ್ಕರ್​ ಮತ್ತಿತರರು ಉಪಸ್ಥಿತರಿದ್ದರು.

ಕುಂದಾಪುರ ಉಪ ವಿಭಾಗ ಉಪ ನಿರೀಕ್ಷಕ ಎಚ್​.ಡಿ ಕುಲಕರ್ಣಿ ಸ್ವಾಗತಿಸಿ, ಮಹಿಳಾ ಪೊಲೀಸ್​ ಠಾಣೆ ನಿರೀಕ್ಷಕ ರಾಘವೇಂದ್ರ ವಂದಿಸಿ, ಎಪಿಸಿ ಯೋಗೀಶ್​ ನಿರೂಪಿಸಿದರು.
"

ಯುವಕರಿಗೆ ಮಾದಕ ವಸ್ತುಗಳನ್ನು ನೀಡಿ ಅಪರಾಧ ಪ್ರಕರಣಗಳನ್ನು ಕೈಗೊಳ್ಳಲಾಗುತ್ತಿದೆ. ಇದು ಕೇವಲ ವೈಯಕ್ತಿಕ ಮತ್ತು ಸಾಮಾಜಿಕ ಸಮಸ್ಯೆ ಮಾತ್ರವಲ್ಲ ಇದು ದೇಶದ ಆಂತರಿಕ ಭದ್ರತೆಯ ಸಮಸ್ಯೆಯಾಗಿದೆ. ಶತ್ರು ದೇಶಗಳು ಯುವಕರನ್ನು ಮಾದಕ ವಸ್ತುಗಳ ದಾಸರಾಗಿಸಿ ದೇಶದ ಅರ್ಥ ವ್ಯವಸ್ಥೆಯನ್ನು ಹಾಳು ಮಾಡುವ ಹುನ್ನಾರ ನಡೆಸುತ್ತಿದ್ದಾರೆ. ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ ತಡೆಯಲು ಕ್ಯೂಆರ್​ ಕೋಡ್​ ಬಿಡುಗಡೆ ಮಾಡಿದ್ದು, ಈಗಾಗಲೇ 205 ಮಾಹಿತಿ ಬಂದಿದ್ದು 42 ಪ್ರಕರಣ ದಾಖಲಾಗಿದೆ.

— ಹರಿರಾಂ ಶಂಕರ್​, ಜಿಲ್ಲಾ ಪೊಲೀಸ್​ ಅಧೀಕ್ಷಕ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net