ಉಡುಪಿಯಲ್ಲಿ ಆಯೋಜಿಸಿದ್ದ ಜಿಲ್ಲಾ ರೆಡ್ ಕ್ರಾಸ್ ಘಟಕಗಳ ನಾಯಕರ ತರಬೇತಿ ಶಿಬಿರವನ್ನು ಡಾ. ದೇವಿದಾಸ್ ನಾಯಕ್ ಉದ್ಘಾಟಿಸಿದರು. ಬಸ್ರೂರು ರಾಜೀವ್ ಶೆಟ್ಟಿ, ಡಾ. ಅಶೋಕ್ ವೈ.ಜಿ., ಪ್ರಶಾಂತ್ ನೀಲಾವರ, ಡಾ. ಗಣನಾಥ್ ಶೆಟ್ಟಿ ಎಕ್ಕಾರು ಇದ್ದರು.
Published on:
Copied
Follow Us
* ಪ್ರಾಂಶುಪಾಲ ಡಾ. ದೇವಿದಾಸ್ ನಾಯಕ್ ಅನಿಸಿಕೆ
* ಉಡುಪಿ ಜಿಲ್ಲಾ ರೆಡ್ ಕ್ರಾಸ್ ಘಟಕಗಳಿಗೆ ತರಬೇತಿ
ಉಡುಪಿ: ನಾಯಕತ್ವವು ಶೂನ್ಯದಿಂದ ಸೃಷ್ಟಿಯಾಗದು. ವಿವಿಧ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿದಾಗ ಅಂತರ್ಗತವಾಗಿರುವ ನಾಯಕತ್ವದ ಬೆಳವಣಿಗೆ ಸಾಧ್ಯ. ಹೀಗಾಗಿ ವಿದ್ಯಾರ್ಥಿ ಸಮೂಹಕ್ಕೆ ನಾಯಕತ್ವದ ಕುರಿತಾಗಿ ಮಾರ್ಗದರ್ಶನದ ಅಗತ್ಯವಿದೆ ಎಂದು ಮಹಾತ್ಮಾಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ನಾಯಕ್ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಬ್ರಹ್ಮಗಿರಿಯಲ್ಲಿರುವ ಭಾರತೀಯ ರೆಡ್ ಕ್ರಾಸ್ನ ಜಿಲ್ಲಾ ಘಟಕದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ರೆಡ್ ಕ್ರಾಸ್ ಘಟಕದ ಸಹಕಾರದಲ್ಲಿ ಉಡುಪಿ ಜಿಲ್ಲಾ ರೆಡ್ ಕ್ರಾಸ್ ಘಟಕಗಳ ನಾಯಕರಿಗೆ ಆಯೋಜಿಸಿದ್ದ ತರಬೇತಿ ಶಿಬಿರ ಉದ್ಘಾಟಿಸಿ ಮಾತಾನಾಡಿದರು.
ರೆಡ್ ಕ್ರಾಸ್ನ ರಾಜ್ಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಮಾತನಾಡಿ, ಯುವ ಘಟಕಗಳೇ ರೆಡ್ ಕ್ರಾಸ್ನ ನಿಜವಾದ ಶಕ್ತಿ. ತರಬೇತಿಯ ಸದುಪಯೋಗ ಮಾಡಿಕೊಂಡು ಸಮರ್ಥ ನಾಯಕತ್ವದ ಗುಣ ಬೆಳೆಸಿಕೊಂಡು ಸಮಾಜದ ಏಳಿಗೆಗೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ರೆಡ್ ಕ್ರಾಸ್ನ ಜಿಲ್ಲಾ ಸಭಾಪತಿ ಡಾ. ಅಶೋಕ್ ವೈ.ಜಿ. ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿಯ ಸದಸ್ಯ ವಿ.ಜಿ. ಶೆಟ್ಟಿ ಉಪಸ್ಥಿತರಿದ್ದರು. ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್ ಕ್ರಾಸ್ ಅಧಿಕಾರಿ ಪ್ರಶಾಂತ್ ನೀಲಾವರ ಅವರು ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿದರು.
ಸ್ವಯಂಸೇವಕರು ರೆಡ್ ಕ್ರಾಸ್ನ ಪ್ರಾರ್ಥನಾ ಗೀತೆ ಹಾಡಿದರು. ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಡಾ. ಗಣನಾಥ್ ಶೆಟ್ಟಿ ಎಕ್ಕಾರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರೆಡ್ ಕ್ರಾಸ್ ಸದಸ್ಯ ದಯಾನಂದ ಡಿ. ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಮಂಡಳಿಯ ಸದಸ್ಯ ಚಂದ್ರಶೇಖರ್ ಟಿ. ವಂದಿಸಿದರು.