ಮೂಡುಬಿದಿರೆ ಪಟ್ಟಣದ ಮೂಲಕ ನಿಯಮ ಉಲ್ಲಂಘಿಸಿ ಸಂಚರಿಸುವ ಅದಿರು ಸಾಗಾಟದ ಬೃಹತ್ ಲಾರಿಗಳಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದ್ದು, ಈ ಕುರಿತು ಉದ್ಯಮಿಗಳು, ಲಾರಿ ಮಾಲೀಕರು ಹಾಗೂ ಗಣಿ ಇಲಾಖೆಯ ಅಧಿಕಾರಿಗಳ ಜಂಟಿ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ ಶ್ರೀಧರ ಮುಂದಲಮನಿ ತಿಳಿಸಿದರು.
ಮಂಗಳವಾರ ತಹಸೀಲಾರ್ ಅಧ್ಯಕ್ಷತೆಯಲ್ಲಿ ನಡೆದ ಟ್ರಾಫಿಕ್ ಸಮಸ್ಯೆ ಕುರಿತ ಸಭೆಯಲ್ಲಿ ಬಸ್ ನಿರ್ವಾಹಕರ ಪರವಾಗಿ ಸಂತೋಷ್ ಶೆಟ್ಟಿ ಈ ವಿಚಾರ ಪ್ರಸ್ತಾಪಿಸಿ, ಬೃಹತ್ ಲಾರಿಗಳ ನಿಯಮ ಉಲ್ಲಂಘನೆಯಿಂದ ಖಾಸಗಿ ಬಸ್ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ ಎಂದು ಗಮನ ಸೆಳೆದರು.
ನಾಗರಿಕ ಸಲಹಾ ಸಮಿತಿಯ ಸಂಚಾಲಕ ಅಕ್ಷಯ್ ಜೈನ್ ಮಾತನಾಡಿ, ಏಕಮುಖ ಸಂಚಾರ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು, ಸಿಸಿ ಕ್ಯಾಮೆರಾ ಅಳವಡಿಕೆ, ಡಿಜಿಟಲ್ ದೂರು ವ್ಯವಸ್ಥೆ ಹಾಗೂ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳಿಗೆ ಪ್ರತ್ಯೇಕ ಪಾಕಿರ್ಂಗ್ ವ್ಯವಸ್ಥೆ ಕಲ್ಪಿಸುವಂತೆ ಸಲಹೆ ನೀಡಿದರು.
ಕೆನರಾ ಬಸ್ ಮಾಲೀಕರ ಸಂಘದ ಮೂಡುಬಿದಿರೆ ಅಧ್ಯಕ್ಷ ನಾರಾಯಣ ಎ.ಎಂ., ಉದ್ಯಮಿ ಅಭಿಜಿತ್ ಎಂ., ಉಪ ತಹಸೀಲ್ದಾರ್ ಪುಟ್ಟರಾಜು, ಕೆಎಸ್‌ಆರ್‌ಟಿಸಿ ಸಹಾಯಕ ಇಂಜಿನಿಯರ್ ಹರೀಶ್, ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ತಾಸಿಫ್, ಅಹಮ್ಮದ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಕೆಎಸ್‌ಆರ್‌ಟಿಸಿ ಬಸ್ ಸೇವೆ ಆರಂಭಿಸಿ
ರಾತ್ರಿ 7.30ರ ಬಳಿಕ ಮಂಗಳೂರಿಗೆ ಖಾಸಗಿ ಬಸ್ ಸೇವೆ ಇಲ್ಲದಿರುವುದರಿಂದ ರಾತ್ರಿ 8.30ಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಿಸಬೇಕು ಎಂದು ಪುರಸಭೆಯ ಮಾಜಿ ವಿಪಕ್ಷ ನಾಯಕ ಪಿ.ಕೆ.ಥೋಮಸ್ ಮನವಿ ಮಾಡಿದರು. ಮುಖ್ಯರಸ್ತೆಯ ಫುಟ್‌ಪಾತ್ ಅತಿಕ್ರಮಣ ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದು, ಪುರಸಭೆ ಮುಖ್ಯಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ ಕಾಲಾವಕಾಶ ನೀಡಿ ಬಳಿಕ ತೆರವು ಕಾರ್ಯಾಚರಣೆ ಕೈಗೊಳ್ಳುವುದಾಗಿ ತಿಳಿಸಿದರು.