ಮಾವಿನಕಟ್ಟೆ ಸೌಕೂರು ದೇವಸ್ಥಾನ ಕಂಡ್ಲೂರು ಸಂಪರ್ಕಿಸುವ ಈ ಪ್ರಮುಖ ಸೇತುವೆ ಹಳೆಯದಾಗಿದೆ. ಇದು ಧಾರಣಾ ಸಾಮರ್ಥ್ಯ ಕಳೆದುಕೊಳ್ಳುತ್ತಿರುವ ಲಕ್ಷಣಗಳು ಕಂಡುಬರುತ್ತಿದ್ದು, ನಿತ್ಯವೂ ಜನರು ಭೀತಿಯಲ್ಲೇ ಸಂಚರಿಸುವ ಸ್ಥಿತಿಯಿದೆ. ಮಾಜಿ ಶಾಸಕ ಐ.ಎಂ.ಜಯರಾಮ್ ಶೆಟ್ಟಿ ಅವರ ಪ್ರಯತ್ನದಿಂದ 1996-97ರ ಅವಧಿಯಲ್ಲಿ ನಿರ್ಮಾಣಗೊಂಡ ಈ ಸೇತುವೆ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಂಡ್ಲೂರು ಹಾಗೂ ಗುಲ್ವಾಡಿ, ಬೋಳ್ಕಟ್ಟೆ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಯಾಗಿದೆ. ನಿತ್ಯವೂ ನೂರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಶಾಲೆ ಮತ್ತು ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೂ ಇದೇ ಜೀವನಾಡಿ.