ಬೈಂದೂರಲ್ಲಿ ಸಂಚಾರ ಕಿರಿಕಿರಿ!

 ಬೈಂದೂರು ರಥಬೀದಿಯ ವಾಹನ ದಟ್ಟಣೆ ದೃಶ್ಯ.
ಬೈಂದೂರು ರಥಬೀದಿಯ ವಾಹನ ದಟ್ಟಣೆ ದೃಶ್ಯ.
Published on
ನರಸಿಂಹ ನಾಯಕ್ ಬೈಂದೂರು
ಯಾವುದೇ ವ್ಯವಸ್ಥೆಯನ್ನು ಸರಿದೂಗಿಸಿಕೊಂಡು ಹೋಗುವುದು ಕೇವಲ ಸರ್ಕಾರ ಹಾಗೂ ಅಧಿಕಾರಿಗಳಿಗೆ ಮಾತ್ರ ಸೀಮಿತವಲ್ಲ. ಇದರಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಪ್ರಮುಖವಾಗಿರುತ್ತದೆ. ಆದರೆ ಬೈಂದೂರಿನಲ್ಲಿ ಕೆಲ ವಾಹನ ಚಾಲಕರಿಗೆ ಸಂಚಾರ ನಿಯಮವೇ ತಿಳಿಯದಿರುವುದು, ಎಲ್ಲೆಂದರಲ್ಲಿ ವಾಹನ ಚಲಾಯಿಸುವುದು, ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡಿ ಪಾದಚಾರಿಗಳಿಗೆ ಹಾಗೂ ಇತರರಿಗೆ ಕಿರಿಕಿರಿ ಉಂಟು ಮಾಡುತ್ತಿರುವುದು ದಿನನಿತ್ಯದ ಪರಿಪಾಠವಾಗಿದೆ.
ತಾಲೂಕು ಕೇಂದ್ರವಾಗಿ ಬೆಳೆಯುತ್ತಿರುವ ಬೈಂದೂರು ಪೇಟೆಯ ಮುಖ್ಯ ರಸ್ತೆಗಳು ತುಂಬಾ ಕಿರಿದಾಗಿ ಜನದಟ್ಟಣೆ, ಟ್ರಾಫಿಕ್ ಸಮಸ್ಯೆಯಿಂದ ನಲುಗುತ್ತಿವೆ. ಶ್ರೀ ಸೇನೇಶ್ವರ ದೇವಸ್ಥಾನದಿಂದ ರಾಷ್ಟ್ರೀಯ ಹೆದ್ದಾರಿವರೆಗೆ ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜಿನಿಂದ ರಥಬೀದಿವರೆಗೆ ಹಗಲು ವೇಳೆ ಅತಿ ಹೆಚ್ಚು ವಾಹನ ದಟ್ಟಣೆ, ಜನದಟ್ಟಣೆ ಇರುತ್ತದೆ. ರಸ್ತೆ ಇಕ್ಕೆಲಗಳಲ್ಲಿ ದ್ವಿಚಕ್ರ, ನಾಲ್ಕುಚಕ್ರ ವಾಹನ ಪಾರ್ಕಿಂಗ್ ಮಾಡುವುದರಿಂದ ಪಾದಚಾರಿಗಳಿಗೆ ಓಡಾಡಲು ತುಂಬಾ ಕಷ್ಟವಾಗುತ್ತಿದೆ. ಮಹಿಳೆಯರು, ಮಕ್ಕಳು, ವೃದ್ಧರು ಭಯಪಡುತ್ತಾ ರಸ್ತೆಯಲ್ಲಿ ನಡೆದಾಡಬೇಕಿದೆ. ಮಳೆಗಾಲದಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚಾಗಿ ಕಾಡುತ್ತಿದೆ. ಬೈಂದೂರಿನಲ್ಲಿ ಸದ್ಯ ಪಟ್ಟಣ ಪಂಚಾಯಿತಿಯಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದೆ, ಮುಖ್ಯಾಧಿಕಾರಿಯ ಆಡಳಿತವಿದೆ. ಈ ಸಮಸ್ಯೆ ಬಗ್ಗೆ ‘ವಿಜಯವಾಣಿ’ ಈ ಹಿಂದೆ ಸರಣಿ ವರದಿ ಮಾಡಿತ್ತು.

ಬೀದಿಬದಿ ವ್ಯಾಪಾರಿಗಳಿಂದ ಅತಿಕ್ರಮಣ

ಇಲ್ಲಿನ ಮುಖ್ಯರಸ್ತೆಯ ಹೆಚ್ಚಿನ ನಡೆದಾಡುವ ಸ್ಥಳವನ್ನು ಬೀದಿ ಬದಿ ವ್ಯಾಪಾರಿಗಳು, ಹೂ-ತರಕಾರಿ ಮಾರಾಟಗಾರರು ಅತಿಕ್ರಮಿಸಿಕೊಂಡಿದ್ದಾರೆ ಎಂಬ ಆರೋಪವಿದೆ. ಅವರಿಗೆ ಮಾನವೀಯ ದೃಷ್ಟಿಯಿಂದ ಪರ್ಯಾಯ ಸ್ಥಳ ಗುರುತಿಸುವ ಕುರಿತು ಜಿಲ್ಲಾಡಳಿತ, ತಾಲೂಕು ಆಡಳಿತ, ಶಾಸಕರು ಚಿಂತನ- ಮಂಥನ ನಡೆಸಬೇಕು. ಪಾದಚಾರಿಗಳಿಗೆ ಸುಗಮವಾಗಿ ನಡೆದಾಡಲು ಅವಕಾಶ ಮಾಡಿಕೊಡಬೇಕೇಂದು ಸುಪ್ರೀಂಕೋರ್ಟ್ ಇತ್ತೀಚೆಗೆ ತನ್ನ ಆದೇಶದಲ್ಲಿ ಹೇಳಿದ್ದನ್ನು ಸ್ಮರಿಸಬಹುದು.

ಪಾಳು ಬಿದ್ದಿದೆ ಸಬ್ ರಿಜಿಸ್ಟ್ರಾರ್ ಕಚೇರಿ

ಹೊಸ ತಾಲೂಕಾದ ನಂತರ ನಿರ್ಮಾಣವಾದ ತಾಲೂಕು ಆಡಳಿತ ಕಚೇರಿ ಕಟ್ಟಡಕ್ಕೆ ಸಬ್ ರಿಜಿಸ್ಟ್ರಾರ್ ಕಚೇರಿ ಸ್ಥಳಾಂತರಗೊಂಡಿದೆ. ಹಾಗಾಗಿ ಪೇಟೆಯ ಮಧ್ಯ ಭಾಗದಲ್ಲಿ ಜೀರ್ಣಾವಸ್ಥೆಯಲ್ಲಿರುವ ಹಳೆಯ ಸಬ್ ರಿಜಿಸ್ಟ್ರಾರ್ ಕಚೇರಿ ಆವರಣ ಕಳೆದ ಎರಡು ಮೂರು ವರ್ಷಗಳಿಂದ ಉಪಯೋಗವಿಲ್ಲದೆ ಪಾಳು ಬಿದ್ದಿದೆ. ಈ ಸ್ಥಳ ಸಾರ್ವಜನಿಕ ಬಳಕೆಗೆ ಸಿಗುವಂತಾಗಬೇಕು. ಸಾಕಷ್ಟು ವಿಶಾಲವಾದ ಈ ಸ್ಥಳ ತೆರವುಗೊಳಿಸಿ ಅಲ್ಲಿ ಅರ್ಧ ಭಾಗ ಹೂ-ಹಣ್ಣು ವ್ಯಾಪಾರಿಗಳಿಗೆ, ಮಿಕ್ಕುಳಿದ ಅರ್ಧ ಭಾಗ ಆಟೋ ನಿಲ್ದಾಣಕ್ಕೆ ಬಳಕೆಯಾಗುವಂತಾದರೆ ಪೇಟೆಯೊಳಗಿನ ಟ್ರಾಫಿಕ್ ಸಮಸ್ಯೆಗೆ ಕೊಂಚ ಪರಿಹಾರ ಸಿಕ್ಕಂತಾಗಬಹುದು. ಈ ಸ್ಥಳ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಅಧೀನದಲ್ಲಿದ್ದು, ತಹಸೀಲ್ದಾರ್ ಗಮನಹರಿಸಿ ಸ್ವಂತವಾಗಿ ಹಳೆಯ ಸಬ್ ರಿಜಿಸ್ಟ್ರಾರ್ ಕಚೇರಿಯ ಸ್ಥಳ ಸಾರ್ವಜನಿಕ ಬಳಕೆಗೆ ಸಿಗುವಂತೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬೈಂದೂರು ಪೇಟೆಯಲ್ಲಿ ಶಾಲಾ ಕಾಲೇಜು, ಕಚೇರಿ ಸಮಯದಲ್ಲಿ ವಾಹನ ದಟ್ಟಣೆ ಹೆಚ್ಚುತ್ತದೆ. ಪೇಟೆ ಒಳಗಿನ ಮುಖ್ಯರಸ್ತೆಗಳು ಕಿರಿದಾಗಿದ್ದು ವಾಹನ ಪಾರ್ಕಿಂಗ್ ಮತ್ತು ಬೀದಿ ಬದಿ ವ್ಯಾಪಾರಿಗಳ ಹಾವಳಿಯಿಂದ ಪಾದಚಾರಿಗಳಿಗೆ ಅನನುಕೂಲವಾಗುತ್ತಿದೆ. ಪೇಟೆ ಮಧ್ಯ ಇರುವ ಹಳೆಯ ಸಬ್ ರಿಜಿಸ್ಟ್ರಾರ್ ಕಚೇರಿ ದೀರ್ಘ ಸಮಯದಿಂದ ಉಪಯೋಗದಲ್ಲಿಲ್ಲ. ಈ ಸ್ಥಳವನ್ನು ನಾಗರಿಕ ಸೌಕರ್ಯಕ್ಕಾಗಿ ಪಡೆಯಲು ಪಟ್ಟಣ ಪಂಚಾಯಿತಿ ಮುಂದಾಗಬೇಕು. ಶಾಸಕರು, ಜನಪ್ರತಿನಿಧಿಗಳು ಈ ಕುರಿತು ಪ್ರಯತ್ನಿಸಲಿ.

— ಬೈಂದೂರು ಚಂದ್ರಶೇಖರ ನಾವಡ ನಿವೃತ್ತ ಯೋಧ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net