ಕೆಸರುಮಯ ರಸ್ತೆಯಲ್ಲಿ ನರಕ ಸಂಚಾರ!

 ದೊಡ್ಡಹಿತ್ಲು ಬೈಲೂರ್‌ಕಾರ್ ಹಿತ್ಲು ಪರಿಸರದ ಕೆಸರುಮಯ ರಸ್ತೆ.
ದೊಡ್ಡಹಿತ್ಲು ಬೈಲೂರ್‌ಕಾರ್ ಹಿತ್ಲು ಪರಿಸರದ ಕೆಸರುಮಯ ರಸ್ತೆ.
Published on
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಗಂಗೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಹಿತ್ಲು ಬೈಲೂರ್‌ಕಾರ್ ಹಿತ್ಲು ರಸ್ತೆ ಅಭಿವೃದ್ಧಿ ಮರೀಚಿಕೆಯಾಗಿದೆ. 25 ವರ್ಷಗಳಿಂದ ರಸ್ತೆ ಅಭಿವೃದ್ಧಿ ನಿರೀಕ್ಷೆಯಲ್ಲಿರುವ ಇಲ್ಲಿನ ನಿವಾಸಿಗಳು ಪ್ರತಿದಿನ ದುಸ್ಥಿತಿಯ ರಸ್ತೆಯಲ್ಲೇ ಸಂಚರಿಸುತ್ತಿದ್ದಾರೆ.
ದೊಡ್ಡಹಿತ್ಲು ಸುತ್ತಮುತ್ತಲಿನ ಪ್ರದೇಶದ ಜನರು ಓಡಾಡಲು ಇದೇ ರಸ್ತೆಯನ್ನು ಅವಲಂಬಿಸಬೇಕು. ದಶಕಗಳಿಂದ ಸಮಸ್ಯೆ ಎದುರಾಗಿದ್ದರೂ ಶಾಶ್ವತ ಪರಿಹಾರ ಇನ್ನೂ ದೊರಕಿಲ್ಲ. ಕಾಯಕದ ಅನಿವಾರ್ಯತೆಯಿಂದಾಗಿ ಸಮಸ್ಯೆ ನಡುವೆಯೇ ಸಾಗಬೇಕಾದ ಪರಿಸ್ಥಿತಿ ಇಲ್ಲಿದೆ. ಸಮಸ್ಯೆ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನಿತ್ಯ ನೂರಾರು ಜನರ ಓಡಾಟ

ಈ ರಸ್ತೆಯಲ್ಲಿ ಮೀನುಗಾರರು, ಮೀನು ವ್ಯಾಪಾರ ವಾಡುವ ಮಹಿಳೆಯರು ಸೇರಿದಂತೆ ನೂರಾರು ಮಂದಿ ಪ್ರತಿ ದಿನ ಸಂಚರಿಸುತ್ತಾರೆ. ಬೇಸಿಗೆಯಲ್ಲಿ ಧೂಳು, ಮಳೆಗಾಲದಲ್ಲಿ ಕೆಸರು, ನೀರು ನಿಂತು ಉಂಟಾಗುವ ಹೊಂಡ ಗುಂಡಿಗಳಿಂದಾಗಿ ರಸ್ತೆ ಸಂಪೂರ್ಣ ಹದಗೆಟ್ಟಿದೆ.

ಸ್ಥಳೀಯರಿಂದ ತಾತ್ಕಾಲಿಕ ದುರಸ್ತಿ!

ರಸ್ತೆಯ ದುಸ್ಥಿತಿಯಿಂದ ಬೇಸತ್ತ ಸ್ಥಳೀಯ ನಿವಾಸಿಗಳು ಚುನಾವಣೆ ಪೂರ್ವದಲ್ಲಿ ತಮ್ಮ ಸ್ವಂತ ಹಣದಲ್ಲಿ ಮಣ್ಣು ಹಾಕಿ ತಾತ್ಕಾಲಿಕವಾಗಿ ದುರಸ್ತಿ ವಾಡಿದ್ದರು. ಆದರೆ ಈಗ ಅದು ಕೂಡ ಮಣ್ಣಿನೊಂದಿಗೆ ಬೆರೆತು ಮತ್ತೆ ರಸ್ತೆ ಕೆಸರುಮಯವಾಗಿದೆ.

ನಿತ್ಯವೂ ನೂರಾರು ಮಂದಿ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಮಳೆಗಾಲದಲ್ಲಿ ಇದೇ ಕೆಸರುಮಯ ರಸ್ತೆಯಲ್ಲೇ ಸಾಗಬೇಕಾದ ಪರಿಸ್ಥಿತಿ ನಿರ್ವಾಣವಾಗಿದೆ. ಸಮಸ್ಯೆ ಕುರಿತು ಹಲವು ಬಾರಿ ಸ್ಥಳೀಯಾಡಳಿತದ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯಾಡಳಿತ ಶ್ರೀ ಕ್ರಮ ಕೈಗೊಳ್ಳಬೇಕು.

— ಸೂರ್ಯಕಾಂತ ಖಾರ್ವಿ, ಸ್ಥಳೀಯ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net