ಕಾವಳಮೂಡೂರು ಗ್ರಾಮ ಪಂಚಾಯಿತಿ ಕಚೇರಿಯ ಮುಂಭಾಗದಲ್ಲೇ ಹಾದು ಹೋಗುವ ಕಾವಳಕಟ್ಟೆ ಬಳಿಯ ದೂಮಳಿಕೆ ರಸ್ತೆಯಲ್ಲಿ ಬೃಹತ್ ಗುಂಡಿಗಳು ಸೃಷ್ಟಿಯಾಗಿ ಮಳೆ ನೀರು ನಿಂತು ಕೆಸರುಮಯವಾಗಿದ್ದು ಸಂಚಾರ ಅಸಹನೀಯವಾಗಿದೆ. ಈ ಭಾಗದ ಜನರು ಮಳೆಗಾಲದಲ್ಲಿ ಪ್ರತಿವರ್ಷವೂ ಹೊಂಡಗುಂಡಿಗಳಲ್ಲೇ ಸರ್ಕಸ್ ಮಾಡುತ್ತ ಸಂಚರಿಸಬೇಕಾದ ದುಸ್ಥಿತಿ ಇಲ್ಲಿದೆ.
ಐನೂರಕ್ಕೂ ಅಧಿಕ ಮನೆಗಳ ಜನರು, ವಿದ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ಹಿರಿಯ ನಾಗರಿಕರು ಈ ರಸ್ತೆಯನ್ನೇ ಮುಖ್ಯ ಸಂಪರ್ಕ ಮಾರ್ಗವಾಗಿ ಅವಲಂಬಿಸಿದ್ದಾರೆ. ಆದರೆ ರಸ್ತೆಯುದ್ದಕ್ಕೂ ಉಂಟಾಗಿರುವ ಹೊಂಡಗಳಲ್ಲಿ ಕೆಸರು ತುಂಬಿ ಮತ್ತು ಕಲ್ಲುಗಳು ಮೇಲೆದ್ದು ಜನರು ಜೀವ ಕೈಯಲ್ಲಿಡಿದು ಸಂಚರಿಸುವಂತಾಗಿದೆ.
ಹನ್ನೆರಡು ವರ್ಷಗಳಿಂದ ಸಮರ್ಪಕ ಡಾಂಬರೀಕರಣ ನಡೆಯದೆ ರಸ್ತೆಯ ಅಸ್ತಿತ್ವವೇ ಕಣ್ಮರೆಯಾಗಿದ್ದು, ಹೊಂಡಗಳ ನಡುವೆ ರಸ್ತೆ ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಕೆಸರುಮಯವಾಗುತ್ತಿದ್ದು, ದ್ವಿಚಕ್ರ ವಾಹನ ಸವಾರರು ಜಾರಿ ಬೀಳುವುದು ಸಾಮಾನ್ಯ ಎಂಬಂತಾಗಿದೆ.
ಅಭಿವೃದ್ಧಿ ವಂಚಿತ
ತಾಲೂಕಿನ ಅನೇಕ ಕಚ್ಚಾ ರಸ್ತೆಗಳು ಕಾಂಕ್ರೀಟೀಕರಣಗೊಂಡು ಮೇಲ್ದರ್ಜೆಗೇರಿದ್ದರೂ ಗ್ರಾಪಂ ಕಚೇರಿ ಎದುರಿನಲ್ಲೇ ಇರುವ ಈ ರಸ್ತೆ ಮಾತ್ರ ಅಭಿವೃದ್ಧಿಯಿಂದ ವಂಚಿತವಾಗಿದೆ. ಹಲವು ವರ್ಷಗಳಿಂದ ಗ್ರಾಮಸ್ಥರು ಪಂಚಾಯಿತಿಗೆ ಮನವಿ ಸಲ್ಲಿಸುತ್ತಿದ್ದರೂ ಶಾಶ್ವತ ಪರಿಹಾರ ದೊರೆತಿಲ್ಲ. ಪ್ರತಿ ವರ್ಷ ಹೊಂಡಗಳಿಗೆ ಮಣ್ಣು ಹಾಕಿ ತಾತ್ಕಾಲಿಕವಾಗಿ ದುರಸ್ತಿ ಮಾಡುತ್ತಾರೆ. ಮಳೆ ಬಂದ ಕೂಡಲೇ ಅದು ಮತ್ತೆ ಮೊದಲಿನ ಸ್ಥಿತಿಗೆ ಮರಳುತ್ತಿದೆ.
ಶಾಶ್ವತ ಪರಿಹಾರಕ್ಕೆ ಆಗ್ರಹ
ಈಗ ಶಾಲೆಗಳು ಆರಂಭವಾಗಿರುವುದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಶಾಲಾ ಮಕ್ಕಳು ಪ್ರತಿದಿನ ಇದೇ ರಸ್ತೆಯಲ್ಲಿ ಸಂಚರಿಸಬೇಕಾಗಿದ್ದು, ಇಳಿಜಾರು ಪ್ರದೇಶಗಳಲ್ಲಿ ಜಾರಿ ಬೀಳುವ ಘಟನೆ ಹೆಚ್ಚುತ್ತಿದೆ. ಪಾದಚಾರಿಗಳ ಮೇಲೆ ವಾಹನಗಳಿಂದ ಕೆಸರು ಚಿಮ್ಮುವುದು ನಿತ್ಯದ ಸಮಸ್ಯೆಯಾಗಿದೆ. ತುರ್ತು ಸಂದರ್ಭ ಆಂಬುಲೆನ್ಸ್ ಸೇರಿದಂತೆ ಅಗತ್ಯ ಸೇವೆಗಳ ವಾಹನ ಸಂಚಾರಕ್ಕೂ ಅಡ್ಡಿಯಾಗುತ್ತಿದೆ. ನೂರಾರು ಜನರು ಅವಲಂಬಿಸಿರುವ ರಸ್ತೆ ಅಭಿವೃದ್ಧಿಗೆ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನಹರಿಸಿ ಶಾಶ್ವತ ಕಾಮಗಾರಿ ನಡೆಸಿ ಸಂಚಾರ ಸುಗಮಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಹಲವು ವರ್ಷಗಳಿಂದರೂ ಈ ರಸ್ತೆಯ ಸ್ಥಿತಿ ಇದೇ ರೀತಿ ಇದೆ. ಪ್ರತಿ ಮಳೆಗಾಲದಲ್ಲೂ ರಸ್ತೆ ಕೆಸರುಗದ್ದೆಯಾಗಿ ಮಾರ್ಪಡುತ್ತದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು, ಹಿರಿಯರನ್ನು ಆಸ್ಪತ್ರೆಗೆ ಕರೆದೊಯ್ಯಲು ತುಂಬಾ ಕಷ್ಟವಾಗುತ್ತದೆ. ವಾಹನಗಳು ಹಾದುಹೋದಾಗ ಕೆಸರು ಚಿಮ್ಮಿ ಬಟ್ಟೆಯೆಲ್ಲ ಮಣ್ಣಾಗುತ್ತದೆ. ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಪ್ರತಿವರ್ಷವೂ ಸಮಸ್ಯೆ ಮುಂದುವರಿಯುತ್ತಲೇ ಇರುತ್ತದೆ.
— ಮಹಮ್ಮದ್ ಇಸಾಕ್, ದೂಮಳಿಕೆ
ಶಾಲೆಗೆ ಹೋಗುವಾಗ ಪ್ರತಿದಿನ ಈ ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕು. ಮಳೆಗಾಲದಲ್ಲಿ ಕೆಸರಿನಿಂದ ಬಟ್ಟೆ, ಶೂಗಳು ಹಾಳಾಗುತ್ತವೆ. ಕೆಲವೊಮ್ಮೆ ಜಾರಿ ಬೀಳುವ ಸಂಭವವೂ ಇದೆ. ವಿದ್ಯಾರ್ಥಿಗಳ ಕಷ್ಟ ಗಮನಿಸಿ ರಸ್ತೆ ಅಭಿವೃದ್ಧಿಪಡಿಸಬೇಕು.
— ರೇಖಾ, ವಿದ್ಯಾರ್ಥಿನಿ
ಪ್ರತಿವರ್ಷವೂ ಮನವಿ ಕೊಡುತ್ತಿದ್ದೇವೆ. ಈವರೆಗೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಹೊಂಡಗಳಿಗೆ ಮಣ್ಣು ಹಾಕುವುದು ಸಮಸ್ಯೆಗೆ ಪರಿಹಾರವಲ್ಲ. ಸಾವಿರಾರು ಜನರು ಬಳಸುವ ಈ ರಸ್ತೆಗೆ ಸರ್ಕಾರ ವಿಶೇಷ ಅನುದಾನ ನೀಡಿ ಕಾಂಕ್ರೀಟ್ ರಸ್ತೆ ನಿರ್ಮಿಸಬೇಕು. ರಸ್ತೆಯಲ್ಲಿರುವ ದೊಡ್ಡ ಹೊಂಡಗಳನ್ನು ತಪ್ಪಿಸಲು ಹೋಗಿ ಅನೇಕ ಬಾರಿ ವಾಹನ ಸವಾರರು ಅಪಘಾತಕ್ಕೀಡಾಗಿದ್ದಾರೆ. ರಾತ್ರಿ ವೇಳೆ ಸಂಚಾರ ಇನ್ನೂ ಅಪಾಯಕಾರಿಯಾಗಿದೆ. ಪಂಚಾಯಿತಿ ಕಚೇರಿ ಎದುರಿನಲ್ಲೇ ಇರುವ ರಸ್ತೆ ಈ ದುಸ್ಥಿತಿ ನಿಜಕ್ಕೂ ಬೇಸರದ ಸಂಗತಿ.