ಮಾ.3ರಂದು ಪೂರ್ಣಗ್ರಾಸ ಗ್ರಸ್ತೋದಯ ಚಂದ್ರಗ್ರಹಣ

ಪಂಚಾಂಗದಲ್ಲಿ ತಿಳಿಸಿರುವ ಚಂದ್ರಗ್ರಹಣದ ಮಾಹಿತಿ.
ಪಂಚಾಂಗದಲ್ಲಿ ತಿಳಿಸಿರುವ ಚಂದ್ರಗ್ರಹಣದ ಮಾಹಿತಿ.
Published on

* ಕೇವಲ 8 ನಿಮಿಷ ಗೋಚರ

ಉಡುಪಿ: ವಿಶ್ವಾವಸು ಸಂವತ್ಸರದ ಫಾಲ್ಗುಣ ಶುಕ್ಲ ಹುಣ್ಣಿಮೆ (ಮಾ.3)ಯಂದು ಪೂರ್ವಾ ನಕ್ಷತ್ರ, ಸಿಂಹ ರಾಶಿಯಲ್ಲಿ ಚಂದ್ರನಿಗೆ ಪೂರ್ಣಗ್ರಾಸ ಕೇತು ಗ್ರಹಣ ಸಂಭವಿಸಲಿದೆ. ಗ್ರಸ್ತೋದಯ ಗ್ರಹಣ ಆಗಿದ್ದರಿಂದ ಈ ದಿನ ಹಗಲು ಭೋಜನ ನಿಷಿದ್ಧ. ಗ್ರಹಣ ಬಳಿಕ ಸ್ನಾನ ಮಾಡಿ ಆಹಾರ ಸ್ವೀಕರಿಸಬಹುದು ಎಂದು ಪಂಚಾಂಗಗಳಲ್ಲಿ ಉಲ್ಲೇಖಿಸಲಾಗಿದೆ.
ಮಧ್ಯಾಹ್ನ 3:19ಕ್ಕೆ ಚಂದ್ರನಿಗೆ ಗ್ರಹಣದ ಸ್ಪರ್ಶವಾಗಲಿದ್ದು, ಸಂಜೆ 6:38ಕ್ಕೆ ಸೂರ್ಯಾಸ್ತವಾಗಲಿದೆ. ಸಂಜೆ 6:39ಕ್ಕೆ ಚಂದ್ರೋದಯ ಆಗಲಿದೆ. ರಾತ್ರಿ 6:47ಕ್ಕೆ ಗ್ರಹಣ ಮುಗಿಯಲಿದ್ದು, ಕೇವಲ 8 ನಿಮಿಷ ಮಾತ್ರ ಗ್ರಹಣ ಗೋಚರಿಸಲಿದೆ.

ಗೋಚರ ಕಷ್ಟಸಾಧ್ಯ

ಈ ವರ್ಷದ ಒಂದೇ ಚಂದ್ರಗ್ರಹಣ ಇದಾಗಿದ್ದು ಕೇವಲ 8 ನಿಮಿಷ ಮಾತ್ರ ಇರುವುದರಿಂದ ಗೋಚರ ಕಷ್ಟಸಾಧ್ಯ. ಗ್ರಹಣ ಸಂಪೂರ್ಣ ಮುಗಿಯುವ ಹಂತದಲ್ಲಿ ಚಂದ್ರೋದಯ ಆಗುವುದರಿಂದ ಭಾರತೀಯರಿಗೆ ಇದು ಗ್ರಹಣವೆಂದು ಅನಿಸದು. ಪಶ್ಚಿಮದಲ್ಲಿ ಸೂರ್ಯಾಸ್ತ 6:38ಕ್ಕೆ ಆಗಲಿದ್ದು, ಪೂರ್ವದಲ್ಲಿ ಪಾರ್ಶ್ವ ಗ್ರಹಣದ ಚಂದ್ರೋದಯ ಆಗಿರುತ್ತದೆ. ಇದು ಗ್ರಹಣದ ಚಂದಿರ ಹೌದೋ ಅಲ್ಲವೋ ಎಂದು ಯೋಚಿಸಿ, ನೋಡುವಷ್ಟರಲ್ಲಿ ಗ್ರಹಣ ಮುಗಿದಿರುತ್ತದೆ. ಹೀಗಾಗಿ ಎಲ್ಲರಿಗೂ ಗ್ರಹಣದ ಚಂದಿರನನ್ನು ನೋಡಲು ಅಸಾಧ್ಯವಾಗಬಹುದು ಎನ್ನುತ್ತಾರೆ ಭೌತಶಾಸ್ತ್ರಜ್ಞ ಉಡುಪಿಯ ಡಾ. ಎ.ಪಿ. ಭಟ್​.

ಉಡುಪಿ ಮಠದಲ್ಲಿಲ್ಲ ಪ್ರಸಾದ ಭೋಜನ

ಚಂದ್ರಗ್ರಹಣದ ದಿನ ಶ್ರೀಕೃಷ್ಣ ಮಠದಲ್ಲಿ ಏಕಾದಶಿಯ ದಿನದಂತೆ ಯಾವುದೇ ಆಹಾರ ಸ್ವೀಕಾರ ಇರದು. ರಾತ್ರಿ 7 ಗಂಟೆಯ ಬಳಿಕ ಸ್ನಾನಾದಿ ಕಾರ್ಯ ಮುಗಿಸಿದ ಬಳಿಕ ಶ್ರೀಕೃಷ್ಣನ ರಾತ್ರಿ ಪೂಜೆ ನಡೆಯಲಿದೆ. ಆ ದಿನ ಹೋಳಿ ಹುಣ್ಣಿಮೆ ಆಗಿದ್ದರಿಂದ ಸಾಯಂಕಾಲ 4 ಗಂಟೆಗೆ ಶ್ರೀಕೃಷ್ಣ ಮಠದಿಂದ ತಂಗಿಯ ಮನೆಯಾದ ಕಡಿಯಾಳಿ ಮಹಿಷಮರ್ಧಿನಿ ದೇಗುಲಕ್ಕೆ ಇಲ್ಲಿಂದ ಮೆರವಣಿಗೆಯಲ್ಲಿ ಹೋಳಿ ಹಿಡಿದು ಸಾಗುವ ಸಂಪ್ರದಾಯವಿದೆ. ಅಲ್ಲಿ ಬನ್ನಿಮರಕ್ಕೆ ಪೂಜೆ ನಡೆಸಿ, ರಾತ್ರಿ ಕಾಮದಹನ ನಡೆಯಲಿದೆ. ಮರುದಿನ ಬೆಳಗ್ಗೆ (ಮಾ.4) ಮತ್ತೆ ಹೋಳಿಯ ನಿಮಿತ್ತದ ಪೂಜೆ, ಮಧ್ಯಾಹ್ನ ಯಥಾಪ್ರಕಾರ ಮಹಾಪೂಜೆಯ ಬಳಿಕ ಅನ್ನದಾನ ನಡೆಯಲಿದೆ. ದೇವರ ದರ್ಶನಕ್ಕೆ ಯಾವುದೇ ತೊಂದರೆ ಇಲ್ಲ. ಹೀಗಾಗಿ ಗ್ರಹಣದ 8 ನಿಮಿಷದ ಪುಣ್ಯಕಾಲದಲ್ಲಿ ಸಾಧ್ಯವಿರುವವರು ಜೀವಕ್ಕೆ ಅಪಾಯ ಮಾಡಿಕೊಳ್ಳದೆ ನದಿ-ಸರೋವರದಲ್ಲಿ ಸ್ನಾನ ಮಾಡಿ, ಅನುಷ್ಠಾನಾದಿ ಕೈಗೊಳ್ಳುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಬೇಕು ಎಂದು ಪರ್ಯಾಯ ಶೀರೂರು ಮಠದ ದಿವಾನ ವಿದ್ವಾನ್​ ಡಾ. ಉದಯಕುಮಾರ್​ ಸರಳತ್ತಾಯ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net