

ಉಡುಪಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಂದ ಟೋಲ್ ಶುಲ್ಕ ಪಡೆಯಲಾಗುತ್ತದೆ. ಅದಕ್ಕನುಗುಣವಾಗಿ ವಾಹನ ಸುಗಮ ಸಂಚಾರಕ್ಕಾಗಿ ವೈಜ್ಞಾನಿಕ ರೀತಿಯಲ್ಲಿ ರಸ್ತೆ ಕಾಮಗಾರಿ ಕೈಗೊಂಡು ಕಾಲಕಾಲಕ್ಕೆ ಅವುಗಳ ನಿರ್ವಹಣೆಯನ್ನೂ ಮಾಡಬೇಕು. ಟೋಲ್ ಸಂಗ್ರಹವೊಂದೇ ಗುರಿಯಾಗಬಾರದು ಎಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ (ಅ.30) ಆಯೋಜಿಸಿದ್ದ ರಾಷ್ಟ್ರೀಯ ಹೆದ್ದಾರಿ-66ರ ಕೋಟ, ಪಡುಬಿದ್ರೆ, ತೆಕ್ಕಟ್ಟೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸಂಭವಿಸುತ್ತಿರುವ ಸರಣಿ ಅಪಘಾತಗಳ ತಡೆ ಹಾಗೂ ಚರ್ಚೆಯ ಸಭೆಯಲ್ಲಿ ಮಾತನಾಡಿದರು.
ಕಾನೂನು ಕ್ರಮದ ಎಚ್ಚರಿಕೆ
ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಸಾವು-ನೋವು ಉಂಟಾಗುತ್ತಿವೆ. ನಿಯಮಾನುಸಾರ ಹೆದ್ದಾರಿಗಳ ನಿರ್ವಹಣೆ ನಡೆಸಿ ಅಪಘಾತಗಳ ಸಂಖ್ಯೆ ಇಳಿಕೆಯಾಗುವಂತೆ ಕ್ರಮ ಕೈಗೊಳ್ಳಬೇಕು. ನಿರ್ವಹಣೆಯ ಕೊರತೆಯಿಂದ ಅಪಘಾತ ಸಂಭವಿಸಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಗುತ್ತಿಗೆದಾರರ ವಿರುದ್ಧವೇ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
22 ಕಡೆಗಳಲ್ಲಿ ಬ್ಲ್ಯಾಕ್ ಸ್ಪಾಟ್ಸ್
ಜಿಲ್ಲೆಯಲ್ಲಿ ಸರ್ಕಾರದ ಮಾರ್ಗಸೂಚಿಯನ್ವಯ ಹೆದ್ದಾರಿಗಳ ನಿರ್ವಹಣೆ ಆಗುತ್ತಿಲ್ಲ. ಇದೇ ರೀತಿ ಮುಂದುವರಿದಲ್ಲಿ ಜನರು ಟೋಲ್ ಪಾವತಿಸದೇ ಇರಬಹುದು. ಜಿಲ್ಲೆಯ ಹೆದ್ದಾರಿಯಲ್ಲಿ 22 ಕಪ್ಪು ಚುಕ್ಕೆ (ಬ್ಲ್ಯಾಕ್ ಸ್ಪಾಟ್ಸ್) ಪ್ರದೇಶ ಗುರುತಿಸಲಾಗಿದ್ದು, ಸದರಿ ಸ್ಥಳ ಸೇರಿದಂತೆ ಪ್ರಮುಖ ಜಂಕ್ಷನ್ಗಳಲ್ಲಿ ದಾರಿದೀಪ, ಸೂಚನಾ ಫಲಕ, ಬ್ಯಾರಿಕೇಡ್, ಅಗತ್ಯ ಇರುವೆಡೆ ಹಂಪ್ಸ್ ಇನ್ನಿತರ ಸಂಚಾರ ಮಾರ್ಗದರ್ಶಿ ಫಲಕ ಅಳವಡಿಸಬೇಕು ಎಂದು ಹೆದ್ದಾರಿ ಅಭಿಯಂತ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ಸರ್ವೀಸ್ ರಸ್ತೆ ಪ್ರಗತಿಯಲ್ಲಿ
ನಗರದ ಅಂಬಾಗಿಲುನಿಂದ ಎಲ್ವಿಟಿ ವರೆಗೆ ಸರ್ವೀಸ್ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಮರಗಳ ತೆರವು, ಚರಂಡಿ ನಿರ್ಮಾಣ ಕೆಲಸ ಆರಂಭವಾಗಿದ್ದು ಅದನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಅಂಬಾಗಿಲು ಪ್ರಮುಖ ಜಂಕ್ಷನ್ ಆಗಿದ್ದು ವಾಹನ ದಟ್ಟಣೆಯಿಂದ ಅಪಘಾತಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ನಿಟ್ಟೂರು, ತೆಕ್ಕಟ್ಟೆ, ಕುಂಭಾಶಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದು ಅವುಗಳನ್ನೂ ಆದ್ಯತೆ ಹಾಗೂ ಗುಣಮಟ್ಟದೊಂದಿಗೆ ತ್ವರಿತವಾಗಿ ಪೂರ್ಣಗೊಳಿಸಿ ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಮ ಶಂಕರ, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಡಿಎಫ್ಒ ರುಥ್ರೇನ್ ಪಿ., ಸಹಾಯಕ ಕಮಿಷನರ್ ಮಹೇಶ ಪಿ.ಎಸ್., ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್ ಅಜ್ಮಿ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ಅಭಿಯಂತರರು, ಗುತ್ತಿಗೆದಾರರು ಉಪಸ್ಥಿತರಿದ್ದರು.
ಕಲ್ಯಾಣಪುರ-ಸಂತೆಕಟ್ಟೆ ಅಂಡರ್ಪಾಸ್ನಲ್ಲಿ ಅಳವಡಿಸಿರುವ ಬೀದಿ ದೀಪ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ರಾತ್ರಿ ವೇಳೆ ಸಂಚರಿಸುವವರಿಗೆ ತೊಂದರೆಯಾಗುತ್ತಿದೆ. ಮೆಸ್ಕಾಂ ಹಾಗೂ ಎನ್ಎಚ್ಎಐ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ತೆಂಕ ಎಮಾರ್ಳಿನಲ್ಲಿ ಸ್ಕೈವಾಕ್ ಕಾಮಗಾರಿಗೆ ಸ್ಥಳೀಯರ ವಿರೋಧ ವ್ಯಕ್ತವಾಗುತ್ತಿದ್ದು ಅಲ್ಲಿ ಕಾಮಗಾರಿ ಸ್ಥಗಿತಗೊಳಿಸಿ. ಅಂಬಾಗಿಲು, ಬ್ರಹ್ಮಾವರದ ಮಹೇಶ ಆಸ್ಪತ್ರೆ ಸೇರಿದಂತೆ ಜನದಟ್ಟಣೆ ಇರುವ ಸ್ಥಳಗಳಲ್ಲಿ ಸ್ಕೈವಾಕ್ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಸದ ಕೋಟ ಪೂಜಾರಿ ಸಲಹೆ ನೀಡಿದರು.