ಶುದ್ಧಗಂಗಾ ಇತಿಹಾಸ ಪುಟಕ್ಕೆ

 ಕಲ್ಲಾಪುವಿನಲ್ಲಿ ಸಾರ್ವಜನಿಕರ ಆಶ್ರಯ ತಾಣವಾಗಿರುವ ಘಟಕ.
ಕಲ್ಲಾಪುವಿನಲ್ಲಿ ಸಾರ್ವಜನಿಕರ ಆಶ್ರಯ ತಾಣವಾಗಿರುವ ಘಟಕ.
Published on

ಅನ್ಸಾರ್ ಇನೋಳಿ ಉಳ್ಳಾಲ


ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಶುದ್ಧಗಂಗಾ ಶುದ್ಧ ಕುಡಿಯುವ ನೀರಿನ ಯೋಜನೆ ನಿರ್ವಹಣೆಯಿಲ್ಲದೆ ಕರಾವಳಿಯಲ್ಲಿ ಅಧೋಗತಿಗೆ ತಲುಪಿದೆ. 2015ರಲ್ಲಿ ಆರಂಭವಾದ ಈ ಯೋಜನೆ ಇಂದು ಬಹುತೇಕ ಕಡೆ ಇತಿಹಾಸದ ಪುಟ ಸೇರುತ್ತಿದ್ದು, ಉಳ್ಳಾಲ ತಾಲೂಕಿನ ಕಲ್ಲಾಪುವಿನಲ್ಲಿ ಸ್ಥಾಪಿಸಲಾಗಿದ್ದ ಘಟಕ ಸಾರ್ವಜನಿಕರಿಗೆ ಬಿಸಿಲು-ಮಳೆಗೆ ಜನ ಆಶ್ರಯ ಪಡೆಯುವ ತಾಣವಾಗಿ ಮಾರ್ಪಟ್ಟಿದೆ!
ಪ್ರತಿಯೊಬ್ಬರಿಗೂ 5 ರೂಪಾಯಿಗೆ 20 ಲೀಟರ್ ಶುದ್ಧ ನೀರು ತಲುಪಿಸುವ ಉದಾತ್ತ ಉದ್ದೇಶದಿಂದ 2015ರಲ್ಲಿ ಕರ್ನಾಟಕದಲ್ಲಿ ಶುದ್ಧಗಂಗಾ ಮಾದರಿ ಜಾರಿಗೆ ಬಂದಿತು. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಎಲ್.ಅಗ್ರಹಾರ ತಾಂಡ್ಯದಲ್ಲಿ ರಾಜ್ಯದ ಮೊದಲ ಘಟಕ ಆರಂಭವಾಗಿತ್ತು. ಇನ್ನು ಉಳ್ಳಾಲ ಕ್ಷೇತ್ರದಲ್ಲಿ 2017ರ ಆಗಸ್ಟ್ 12ರಂದು ಪಾವೂರು ಗ್ರಾಪಂ ಬಳಿ ಪ್ರಥಮ ಘಟಕ ಉದ್ಘಾಟನೆಗೊಂಡರೆ, 2019ರ ಡಿಸೆಂಬರ್‌ನಲ್ಲಿ ಮುಡಿಪುವಿನಲ್ಲಿ ಜಿಪಂನ ಪ್ರಥಮ ಘಟಕ ಸ್ಥಾಪನೆಯಾಗಿತ್ತು. ನಂತರ ಅಂಬ್ಲಮೊಗರು, ಕಿನ್ಯಾ, ಕೋಟೆಕಾರ್, ಸೋಮೇಶ್ವರ, ಮುನ್ನೂರು ಹಾಗೂ ಇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಿಗೂ ಯೋಜನೆ ವಿಸ್ತರಿಸಿತು. ಆದರೆ ಅಂಬ್ಲಮೊಗರು ಘಟಕವನ್ನು ಹಸ್ತಾಂತರಿಸಲು ಗುತ್ತಿಗೆ ಸಂಸ್ಥೆ ಮುಂದಾದರೂ, ಅಲ್ಲಿನ ಅಸಮರ್ಪಕತೆ ಕಾರಣದಿಂದ ಪಂಚಾಯಿತಿಯವರು ಸುಪರ್ದಿಗೆ ಪಡೆಯಲು ನಿರಾಕರಿಸಿದರು. ಪರಿಣಾಮ, ಘಟಕವು ತುಕ್ಕುಹಿಡಿದು ಹಾಳಾಗಿದ್ದು, ಒಳಗಿನ ಯಂತ್ರೋಪಕರಣಗಳು ಹಾಗೂ ಬಾಗಿಲು ನಾಪತ್ತೆಯಾಗಿವೆ.
ಉಳ್ಳಾಲ ನಗರ ವ್ಯಾಪ್ತಿಯಲ್ಲಿ ಶುದ್ಧ ನೀರಿನ ಜತೆಗೆ ಡಿಜಿಟಲ್ ವಾಟರ್ ಕಿಯಾಸ್ಕ್ ಎನ್ನುವ ನೂತನ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. 2020 ಅಕ್ಟೋಬರ್ 17ರಂದು ಕೋಡಿ-ಕೋಟೆಪುರದಲ್ಲಿ ಇದರ ಪ್ರಥಮ ಘಟಕ ಉದ್ಘಾಟನೆಗೊಂಡಿತ್ತು. ಪ್ರತಿಬಾರಿ ಚಿಲ್ಲರೆ ಹಣ ನೀಡುವ ಕಿರಿಕಿರಿ ತಪ್ಪಿಸಲು ಕಾರ್ಡ್ ಬಳಸಿ ನೀರು ಪಡೆಯುವ ದೀರ್ಘಕಾಲಿಕ ಸುಧಾರಿತ ವ್ಯವಸ್ಥೆ ಇದಾಗಿತ್ತು. ಆದರೆ, ನಿರ್ವಹಣಾ ವೈಫಲ್ಯದಿಂದ ಕೋಟೆಪುರದ ಕಿಯೋಸ್ಕ್ ಇಂದು ಗುಜರಿ ಅಂಗಡಿಯಂತಾಗಿದ್ದರೆ, ಪಂಡಿತೌಸ್‌ನಲ್ಲಿ ಮೂಲೆಗುಂಪಾಗಿದೆ. ಕಲ್ಲಾಪು ಹಾಗೂ ನಗರಸಭೆ ಆವರಣದ ಘಟಕಗಳಿಗೆ ನೀರಿನ ಪೂರೈಕೆ ಇಲ್ಲದೆ ಸೊರಗಿವೆ.
ಜಿಪಂನಿಂದ ನಿರ್ಮಾಣಗೊಂಡ ಈ ಘಟಕಗಳ ಜವಾಬ್ದಾರಿಯನ್ನು ಕೆ.ಆರ್.ಐ.ಡಿ.ಎಲ್ ಸಂಸ್ಥೆ ವಹಿಸಿಕೊಂಡಿತ್ತು. ಆರಂಭದಲ್ಲಿ 8 ಲಕ್ಷ ರೂ. ಇದ್ದ ಅಂದಾಜು ವೆಚ್ಚವನ್ನು ಬಳಿಕ 12 ಲಕ್ಷ ರೂ.ಗೆ ಏರಿಸಲಾಯಿತು. ಸಂಸ್ಥೆ ಯಂತ್ರಗಳನ್ನು ಹಾಕಿದರೂ ಅವು ಸಕಾಲದಲ್ಲಿ ಕೆಟ್ಟುಹೋದವು. ಯೋಜನೆಯನ್ನು ಮುಂದುವರಿಸಲು ರಾಜ್ಯ ಸರ್ಕಾರ ಪ್ರತಿ ಪಂಚಾಯಿತಿಗೆ ಮಾಸಿಕ 3,000 ರೂ.ಗಳಂತೆ (ವರ್ಷಕ್ಕೆ 36,000 ರೂ.) ಅನುದಾನ ನೀಡಿದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರಿಗೆ ಯಾವುದೇ ಪ್ರಯೋಜನಕ್ಕೆ ಬರದಂತಾಯಿತು.

ಪ್ರತಿಯೊಬ್ಬರಿಗೂ ಕುಡಿಯಲು ಶುದ್ಧ ನೀರು ಸಿಗಬೇಕು ಎಂಬ ನೆಲೆಯಲ್ಲಿ ವಿವಿಧೆಡೆ ಘಟಕಗಳನ್ನು ಸ್ಥಾಪಿಸಲಾಗಿತ್ತು. ಆದರೆ ಈ ಯೋಜನೆಗಳನ್ನು ನಿರಂತರವಾಗಿ ನಿರ್ವಹಿಸುವುದು ಸವಾಲಿನ ಸಂಗತಿಯಾಗಿರುವ ಕಾರಣ, ಮುಂದಕ್ಕೆ ಇದನ್ನು ಮರುಜಾರಿಗೊಳಿಸುವ ಯಾವುದೇ ಯೋಚನೆ ಇಲ್ಲ.

— ಯು.ಟಿ. ಖಾದರ್ ಆರೋಗ್ಯ ಸಚಿವ


ಸರ್ಕಾರ ಯಾವುದೇ ಯೋಜನೆ ತಂದರೂ, ಅನುಷ್ಠಾನದ ಬಳಿಕ ಅದರ ಸಮರ್ಪಕ ನಿರ್ವಹಣೆಯಲ್ಲಿ ಅಧಿಕಾರಿಗಳು ಕಾಳಜಿ ವಹಿಸಿದರೆ ಮಾತ್ರ ಅದು ಯಶಸ್ವಿಯಾಗುತ್ತದೆ. ಶುದ್ಧ ಕುಡಿಯುವ ನೀರಿನ ಘಟಕಗಳು ವಿಫಲವಾಗಲು ಸಂಪೂರ್ಣವಾಗಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ.

— ಸುರೇಶ್ ಭಟ್ನಗರ ಧಾರ್ಮಿಕ ಪರಿಷತ್ ಜಿಲ್ಲಾ ಸದಸ್ಯ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net