30 ವರ್ಷವಾದರೂ ಸಿಗದ ಹಕ್ಕುಪತ್ರ

 ಬಜ್ಪೆ ಪಪಂ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಉಂಟಾಗುವ ಪ್ರಕೃತಿ ವಿಕೋಪ, ಪರಿಹಾರಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಪಪಂ ಸಮುದಾಯ ಭವನದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜೂ.8ರಂದು ನಡೆಯಿತು. ಕೌನ್ಸಿಲರ್ ರಾಜೇಶ್ ಅಮೀನ್, ಮಂಗಳೂರು ತಹಸೀಲ್ದಾರ್ ರಮೇಶ್ ಬಾಬು, ಬಜ್ಪೆ ಪೊಲೀಸ್ ಅಧಿಕಾರಿ ಅಶೋಕ್ ಮೊದಲಾದವರಿದ್ದರು.
ಬಜ್ಪೆ ಪಪಂ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಉಂಟಾಗುವ ಪ್ರಕೃತಿ ವಿಕೋಪ, ಪರಿಹಾರಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಪಪಂ ಸಮುದಾಯ ಭವನದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜೂ.8ರಂದು ನಡೆಯಿತು. ಕೌನ್ಸಿಲರ್ ರಾಜೇಶ್ ಅಮೀನ್, ಮಂಗಳೂರು ತಹಸೀಲ್ದಾರ್ ರಮೇಶ್ ಬಾಬು, ಬಜ್ಪೆ ಪೊಲೀಸ್ ಅಧಿಕಾರಿ ಅಶೋಕ್ ಮೊದಲಾದವರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಗುರುಪುರ
ಬಜ್ಪೆ ಪಪಂ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಉಂಟಾಗುವ ಪ್ರಕೃತಿ ವಿಕೋಪ, ಪರಿಹಾರಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಪಪಂ ಸಮುದಾಯ ಭವನದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯವಾಗಿ ಚರಂಡಿರಹಿತ ರಸ್ತೆ ನಿರ್ಮಾಣ, ಮನೆ, ರಸ್ತೆಗಳಿಗೆ ವಾಲಿಕೊಂಡಿರುವ ಅಪಾಯಕಾರಿ ಮರಗಳ ಕೊಂಬೆಗಳ ತೆರವು, ಅರ್ಹರಿಗೆ ಇನ್ನೂ ಹಕ್ಕುಪತ್ರ ವಿತರಣೆಯಾಗದ ವಿಷಯದಲ್ಲಿ ಪಪಂ ಕೌನ್ಸಿಲರ್‌ಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಗಂಭೀರ ಸವಾಲೆಸೆದರು.
ಪೊರ್ಕೋಡಿಯಲ್ಲಿ 30 ವರ್ಷಗಳಿಂದ ವಾಸ್ತವ್ಯ ಹೂಡಿರುವ 20 ಕುಟುಂಬಗಳಿಗೆ ಇನ್ನೂ ಹಕ್ಕುಪತ್ರ ನೀಡಿಲ್ಲ. ಪೊರ್ಕೋಡಿಯಿಂದ ಜೋಕಟ್ಟೆಯವರೆಗೆ 11 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ರಸ್ತೆಗೆ ಚರಂಡಿ ಇಲ್ಲದೆ ಮಳೆ ನೀರು ರಸ್ತೆ ಮೇಲೆ ಹೊಳೆಯಂತೆ ಹರಿಯುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಕೌನ್ಸಿಲರ್ ರಾಜೇಶ್ ಅಮೀನ್ ಗಮನ ಸೆಳೆದರು.
ರಸ್ತೆಯೊಂದಿಗೆ ಚರಂಡಿ ನಿರ್ಮಿಸಬೇಕು. ಕೇವಲ ಕಾಂಕ್ರೀಟ್ ರಸ್ತೆ ನಿರ್ಮಿಸಿದರೆ ಸಾಲದು. ಅದಕ್ಕೆ ಹೊಂದಿಕೊಂಡು ಚರಂಡಿಯೂ ಆಗಬೇಕು. ಇಲ್ಲವಾದಲ್ಲಿ ಮಳೆಗಾಲದಲ್ಲಿ ಹಲವು ಸಮಸ್ಯೆಗಳು ಉದ್ಭವಿಸುತ್ತವೆ ಎಂದು ಪಿಡಬ್ಲುೃಡಿ ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಉಮಾನಾಥ ಕೋಟ್ಯಾನ್, ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳ ಕೊಂಬೆ ತೆರವಿಗೆ ತಕ್ಷಣ ಕ್ರಮ ಜರುಗಿಸಬೇಕು ಎಂದು ಅರಣ್ಯ ಮತ್ತು ಮೆಸ್ಕಾಂ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಅಮೃತ್ ಯೋಜನೆಯಿಂದ ರಸ್ತೆ ಹಾಳಾಗಿದ್ದು, ದುರಸ್ತಿಗೆ ಕ್ರಮ ಜರುಗಿಸಬೇಕು ಎಂದು ಕೌನ್ಸಿಲರ್‌ಗಳು ಆಗ್ರಹಿಸಿದರು. ಈ ಸಂದರ್ಭ ಇಂಜಿನಿಯರ್ ಶುಭಲಕ್ಷ್ಮೀ ಮಾತನಾಡಿ, ಯೋಜನೆಯು ಜುಲೈಯಲ್ಲಿ ಪೂರ್ಣಗೊಳ್ಳಬೇಕಿತ್ತು. ಕೆಲವೆಡೆ ಸಮಸ್ಯೆಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಯೋಜನೆ ವಿಳಂಬವಾಗಿದೆ. ಶುದ್ಧ ನೀರಿನ ಘಟಕ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದೆ ಎಂದರು.
ಮಂಗಳೂರು ತಹಸೀಲ್ದಾರ್ ರಮೇಶ್ ಬಾಬು, ಬಜ್ಪೆ ಪೊಲೀಸ್ ಅಧಿಕಾರಿ ಅಶೋಕ್, ಪಪಂ ಅಧ್ಯಕ್ಷ ಲೋಕೇಶ್ ಪೂಜಾರಿ, ಉಪಾಧ್ಯಕ್ಷೆ ಶರ್ಮಿಳಾ ಶೆಟ್ಟಿ, ಮುಖ್ಯಾಧಿಕಾರಿ ರತ್ನಪ್ರಸಾದ್, ಕಂದಾಯ ಅಧಿಕಾರಿ ರವಿ, ಇಂಜಿನಿಯರ್ ನಳಿನ್ ಕುಮಾರ್, ಪಪಂ ಸದಸ್ಯರಾದ ಪದ್ಮನಾಭ ಪೂಜಾರಿ, ಜಾಕೋಬ್ ಪಿರೇರ, ಯಶೋದಾ, ಸಿರಾಜ್ ಹುಸೇನ್, ಗುಲ್ಶನ್ ಕರೀಂ, ಆಯೇಶಾ ಬಜ್ಪೆ, ವೀಣಾ ಡಿಸೋಜ, ರಾಜೇಶ್ ಅಮೀನ್ ಆರ್.ಕೆ., ಜಯಂತ್ ಎಸ್.ಪೂಜಾರಿ, ಚೆನ್ನಪ್ಪ ಸಾಲ್ಯಾನ್, ಕಿರಣ್, ಸುಪ್ರಿತಾ ಶೆಟ್ಟಿ, ದಿನೇಶ್ ಶೆಟ್ಟಿ, ಮಲ್ಲಿಕಾ ಮತ್ತಿತರರು ಇದ್ದರು.

ಶಾಶ್ವತ ಪರಿಹಾರ ಒದಗಿಸಲು ಕ್ರಮ

ಜೋಕಟ್ಟೆ ಕೆಂಜಾರು ಪ್ರದೇಶದಲ್ಲಿ ಪಂಚಾಯಿತಿ ವ್ಯಾಪ್ತಿಯ ಪ್ರದೇಶವಿದೆ. ಅಲ್ಲಿ ಕೊಳವೆ ಅಳವಡಿಕೆ ಕಾರ್ಯ ನಡೆದಿಲ್ಲ ಎಂದು ಇಂಜಿನಿಯರ್ ಉತ್ತರಿಸಿದರು. ಪಂಚಾಯಿತಿ ಅನುಮತಿ ಪಡೆದು ಕಾಮಗಾರಿ ನಡೆಸಬೇಕು ಎಂದು ಶಾಸಕರು ಸೂಚಿಸಿದರು. ಅಪಾಯ ಎದುರಿಸುತ್ತಿರುವ ಜೋಕಟ್ಟೆ, ಶಾಂತಿಗುಡ್ಡೆ ಪ್ರದೇಶದ ಮನೆ ಮಂದಿಗೆ ಶಾಶ್ವತ ಪರಿಹಾರ ಒದಗಿಸಬೇಕು. ಜೀವ ಹಾನಿಯಾದಲ್ಲಿ ಯಾರು ಹೊಣೆ ಎಂದು ಸಭೆಯಲ್ಲಿ ಪಪಂ ಸದಸ್ಯರು ಅಧಿಕಾರಿಗಳನ್ನು ಪ್ರಶ್ನಿಸಿದರು. ಮಳೆಗಾಲದಲ್ಲಿ ಪ್ರಕೃತಿ ವಿಕೋಪ ಸಂಭವಿಸಬಹುದಾದ ಪ್ರದೇಶಗಳತ್ತ ನಿಗಾ ಇರಿಸಬೇಕು. ಸಮಸ್ಯೆಗೆ ಪೂರ್ವದಲ್ಲೇ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ಏರ್‌ಪೋರ್ಟ್‌ನ ನೀರಿನಿಂದ ಸಮಸ್ಯೆ

ಎತ್ತರ ಪ್ರದೇಶದಲ್ಲಿರುವ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆಂಜಾರು, ಆದ್ಯಪಾಡಿ, ಕರಂಬಾರು ಗ್ರಾಮಗಳಿಗೆ ನೀರು ಹರಿದು ಬರುವುದರಿಂದ ಪ್ರತಿ ಮಳೆಗಾಲದಲ್ಲಿ ಗ್ರಾಮವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಪಪಂ ಅಧ್ಯಕ್ಷ ಲೋಕೇಶ್ ಪೂಜಾರಿ, ಕೌನ್ಸಿಲರ್ ರಾಜೇಶ್ ಅಮೀನ್ ಮತ್ತಿತರರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಬಾರಿ ವಿಮಾನ ನಿಲ್ದಾಣದ ನೀರು ಕೆಳಗೆ ಹರಿಯದಂತೆ ಅಗತ್ಯ ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕರು ಎಚ್ಚರಿಕೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net